
ಬಿಗ್ಬಾಸ್ ಕನ್ನಡ ಸೀಸನ್ 13ರಲ್ಲಿ ಮಂಜನ ಹಾವಳಿ ಮೊದಲ ವಾರದಿಂದಲೂ ನಡೆದುಕೊಂಡು ಬಂದಿದೆ. ಮೊದಲೆರಡು ವಾರವಂತೂ ಮಂಜನ ರೌದ್ರಾವತಾರ ತಾಳಿದ್ದ, ಕಾಲು ಕೆರೆದುಕೊಂಡು ಜಗಳ ಮಾಡುವುದು, ಸುಖಾ-ಸುಮ್ಮನೆ ಇನ್ನೊಬ್ಬರ ವಿಷಯದಲ್ಲಿ ಮೂಗು ತೂರಿಸುವುದು, ತೀಕಾ ವೈಯಕ್ತಿಕ ದಾಳಿ ಮಾಡುವುದು ಹೀಗೆ ನಾನಾ ರೀತಿಯ ದುರ್ವರ್ತನೆಗಳನ್ನು ತೋರಿದ್ದ. ಆದರೆ ಸುದೀಪ್ ಅವರು ಖಡಕ್ ಆಗಿ ವಾರ್ನಿಂಗ್ ಕೊಟ್ಟ ಬಳಿಕ ತುಸು ಮೆತ್ತಗಾಗಿದ್ದಾನೆ. ಆದರೆ ಬಾಯಿ ಬಡುಕತನದಲ್ಲಿ ಮಂಜನಿಗೇ ಕಾಂಪಿಟೇಷನ್ ಕೊಡಲು ಗಾನವಿ ಅವರು ಬಿಗ್ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ.
ಮೊದಲ ದಿನ ತುಸು ಗಾಂಭೀರ್ಯದಿಂದ ಇದ್ದ ಗಾನವಿ ಆ ನಂತರ ತಮ್ಮ ನಿಜ ಮುಖ ತೋರಿದರು. ಯಾವ ಮಟ್ಟಿಗೆಂದರೆ ಗಾನವಿ ಮುಂದೆ ಮಂಜ ‘ಜಂಟಲ್ಮ್ಯಾನ್’ ಎನಿಸುವಷ್ಟರ ಮಟ್ಟಿಗೆ ಗಾನವಿ ತಮ್ಮ ನಾಲಗೆ ಹರಿಬಿಟ್ಟರು. ಶುಕ್ರವಾರದ ಎಪಿಸೋಡಿನಲ್ಲಿ ಮನೆ ಮಂದಿ ಎಲ್ಲ ಸೇರಿ ಕಳಪೆ ಆಯ್ಕೆ ಮಾಡಬೇಕಿತ್ತು. ಮಂಜ ಮತ್ತು ಲಿಖಿತ್ ಉಸ್ತುವಾರಿಯಾಗಿ ತಪ್ಪು ಮಾಡಿ ಕ್ಯಾಪ್ಟೆನ್ಸಿ ಓಟವೇ ಇಲ್ಲದ ಹಾಗೆ ಮಾಡಿದ್ದರಿಂದ ಸಹಜವಾಗಿಯೇ ಹಲವರು ಮಂಜನ ಹೆಸರನ್ನು ಕಳಪೆಗೆ ತೆಗೆದುಕೊಂಡರು. ಅದರ ಜೊತೆಗೆ ಯಶಸ್, ಗಗನ್, ಶಾಸ್ತ್ರಿ ಇನ್ನೂ ಕೆಲವರು ಗಾನವಿಯ ಹೆಸರನ್ನು ಸಹ ಕಳಪೆಗೆ ತೆಗೆದುಕೊಂಡರು.
ತಮ್ಮ ಹೆಸರು ತೆಗೆದುಕೊಂಡವರ ವಿರುದ್ಧವೆಲ್ಲಾ ಗಾನವಿ ಜೋರು ದನಿಯಲ್ಲಿ ಜಗಳ ಆಡಿದರು. ಗಾನವಿಯ ಹೆಸರು ತೆಗೆದುಕೊಂಡವರು ಸೂಕ್ತವಾದ ಕಾರಣಗಳನ್ನು ನೀಡಿದ್ದರೂ ಸಹ ಗಾನವಿ ತಮ್ಮ ವಿತಂಡ ವಾದವನ್ನು ಮಂಡಿಸದೇ ಬಿಡಲಿಲ್ಲ. ಶಾಸ್ತ್ರಿಗೆ ಹೇಳಿದ ಮಾತಿಗಂತೂ ಇಡೀ ಮನೆ ಮಂದಿ ಗಾನವಿಯ ವಿರುದ್ಧ ತಿರುಗಿ ಬಿದ್ದರು. ಸ್ಪರ್ಧಿಗಳು ಗಾನವಿಯ ಹೆಸರು ಹೇಳಿದಾಗಲೆಲ್ಲ ಇತರೆ ಸ್ಪರ್ಧಿಗಳು ಚಪ್ಪಾಳೆ ತಟ್ಟಲು ಆರಂಭಿಸಿದರು. ಒಂದೇ ವಾರಕ್ಕೆ ಅಷ್ಟು ರೋಸಿ ಹೋಗಿದ್ದಾರೆ ಸ್ಪರ್ಧಿಗಳು. ಜಗಳ ಆಡುವುದು ಬಿಗ್ಬಾಸ್ ಮನೆಯ ಮೂಲ ನಿಯಮ ಎಂದುಕೊಂಡೇ ಗಾನವಿ ಅವರು ಮನೆಗೆ ಎಂಟ್ರಿ ಕೊಟ್ಟಂತಿದೆ. ಮಂಜ ಮತ್ತು ಜಾನವಿ ಇಬ್ಬರೂ ಸಮಾನ ಓಟು ಪಡೆದುಕೊಂಡಿರುವ ಕಾರಣ ಗಾನವಿ ಮತ್ತು ಮಂಜ ಇಬ್ಬರನ್ನೂ ಸಹ ಜೈಲಿಗೆ ಕಳಿಸಲಾಯ್ತು.
ಇದನ್ನೂ ಓದಿ:ಮನೆಗೆ ಮರಳಿದ ತಾಂಡವ್ ವಿರುದ್ಧ ಧಿಕ್ಕಾರ ಕೂಗಿದ ಸ್ಪರ್ಧಿಗಳು: ಕಾರಣ?
ಒಟ್ಟಾರೆ, ಇಷ್ಟು ದಿನ ಮಂಜನ ವಿತಂಡ ವಾದ, ಅನವಶ್ಯಕ ಚುಚ್ಚುಮಾತು, ದೊಡ್ಡ ಗಂಟಲಿನಿಂದ ತಲೆ ಚಿಟ್ಟುಹಿಡಿಸಿಕೊಂಡಿದ್ದ ಪ್ರೇಕ್ಷಕರಿಗೆ ಈಗ ಮಂಜನ ಜೊತೆಗೆ ಗಾನವಿ ಸಹ ಸಿಕ್ಕಿದ್ದಾರೆ. ಇನ್ನು ಮುಂದೆ ಯಾರು ಹೆಚ್ಚು ಪಾಯಿಂಟ್ ಲೆಸ್ ಜಗಳ ಆಡುತ್ತಾರೆಂದು ಇಬ್ಬರ ನಡುವೆ ಸ್ಪರ್ಧೆ ನಡೆಯುವ ಸಾಧ್ಯತೆ ಇದೆ. ಮುಂದಿನ ವಾರಗಳಲ್ಲಿ ಗಾನವಿ ಅವರನ್ನು ಮನೆ ಮಂದಿ ಹೇಗೆ ಸಹಿಸಿಕೊಳ್ಳುತ್ತಾರೋ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ