ಆರಂಭದಲ್ಲಿ ಸ್ವಲ್ಪ ಸಪ್ಪೆ ಆಗಿದ್ದ ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಈಗ ಹೊಸ ಹೊಸ ಟ್ವಿಸ್ಟ್ ಸಿಗುತ್ತಿದೆ. ಅದರಲ್ಲೂ ಎರಡನೇ ವಾರವಂತೂ ದೊಡ್ಮನೆಯಲ್ಲಿ ಒಂದು ಯುದ್ಧವೇ ನಡೆದು ಹೋಯ್ತು. ಆ ಘಟನೆಯಲ್ಲಿ ಶಮಂತ್ ನಡೆದುಕೊಂಡ ರೀತಿ ಸರಿ ಇರಲಿಲ್ಲ ಎಂದು ನಟಿ ವೈಷ್ಣವಿ ಆರೋಪಿಸಿದ್ದಾರೆ. ಕಿಚ್ಚನ ಎದುರಿನಲ್ಲಿ ತಮ್ಮ ಬೇಸರ ತೋಡಿಕೊಂಡಿದ್ದಾರೆ.
ಎರಡನೇ ವಾರದಲ್ಲಿ ಮನೆಯೊಳಗಿನ ಸ್ಪರ್ಧಿಗಳಿಗೆ ವೈರಸ್ ವರ್ಸಸ್ ಮನುಷ್ಯರು ಎಂಬ ಟಾಸ್ಕ್ ನೀಡಲಾಗಿತ್ತು. ಅದರಲ್ಲಿ ಎಲ್ಲರೂ ತುಂಬ ಆಕ್ರಮಣಕಾರಿಯಾಗಿ ಆಟ ಆಡಿದರು. ಈ ಟಾಸ್ಕ್ ನಿಭಾಯಿಸುವಾಗ ಶಮಂತ್ ಅವರು ತಮ್ಮ ಬಟ್ಟೆ ಎಳೆದರು ಎಂದು ವೈಷ್ಣವಿ ಹೇಳಿದ್ದಾರೆ. ಈ ವಿಚಾರವನ್ನೇ ಇಟ್ಟುಕೊಂಡು ಕಿಚ್ಚ ಸುದೀಪ್ ವಾರದ ಪಂಚಾಯಿತಿಯಲ್ಲಿ ಮಾತುಕತೆ ಮಾಡಿದ್ದಾರೆ. ಮನೆಯೊಳಗಿನ ಹೆಣ್ಣುಮಕ್ಕಳ ಸುರಕ್ಷತೆ ಬಗ್ಗೆ ಸುದೀಪ್ ಕಾಳಜಿ ವಹಿಸಿದ್ದಾರೆ.
‘ಶಮಂತ್ ಮೊದಲ ಬಾರಿಗೆ ನನ್ನ ಬಟ್ಟೆ ಎಳೆದರು. ಕೈ ಕಾಲು ಎಳೆಯಿರಿ. ಆದರೆ ಬಟ್ಟೆ ಎಳೆಯಬೇಡಿ ಎಂದು ನಾನು ಶಮಂತ್ಗೆ ಹೇಳಿದೆ. ಒಮ್ಮೆ ಸುಮ್ಮನಾದೆ. ಆಮೇಲೆ ಅವರು ಸಾರಿ ಕೇಳಿದರು. ಆದರೆ ಮತ್ತೊಮ್ಮೆ ಅದೇ ರೀತಿ ಮಾಡಿದರು. ಅಲ್ಲದೆ, ನನ್ನನ್ನು ಅವರು ತಳ್ಳಿದರು. ಆಗಲೂ ನನಗೆ ಬೇಜಾರಾಯಿತು’ ಎಂದು ತಮ್ಮ ಅಳಲನ್ನು ವೈಷ್ಣವಿ ತೋಡಿಕೊಂಡಿದ್ದಾರೆ. ನಿಮ್ಮ ಪ್ರಕಾರ ನಿಮ್ಮ ತಂಡದವರು ಎದುರಾಳಿ ತಂಡದವರ ಜೊತೆ ಈ ರೀತಿ ನಡೆದುಕೊಂಡಿಲ್ಲವೇ ಎಂದು ಸುದೀಪ್ ಕೇಳಿದ್ದಕ್ಕೆ ‘ಇರಬಹುದು’ ಎಂದು ವೈಷ್ಣವಿ ಉತ್ತರ ನೀಡಿದರು.
ಮಂಜು ಮತ್ತು ಶಮಂತ್ ಅವರು ನಿಧಿ ಜೊತೆ ಬೇರೆ ರೀತಿ ನಡೆದುಕೊಂಡರು ಎಂಬ ಆರೋಪ ಕೂಡ ಕೇಳಿಬಂತು. ಅದಕ್ಕೂ ಸುದೀಪ್ ಪ್ರತಿಕ್ರಿಯೆ ನೀಡಿದರು. ‘ಬಿಗ್ ಬಾಸ್ ಮನೆಯಲ್ಲಿ ಈ ರೀತಿಯ ಆರೋಪ ಮೊದಲನೇ ಸಲ ಅಲ್ಲ. ನಿಮಗೆ ಅನ್ಕಂಫರ್ಟೆಬಲ್ ಆಗಿಲ್ಲ ಎಂದು ನಾನು ಹೇಳ್ತಾ ಇಲ್ಲ. ಆದರೆ ಯಾರಾದರೂ ಕೆಟ್ಟ ಉದ್ದೇಶದಿಂದ, ಅಕಸ್ಮಾತ್ ಆಗಿ ಅಂಥದ್ದೇನಾದರೂ ನಡೆಸ್ತಾ ಇದಾರೆ ಅಂತ ಗೊತ್ತಾದರೆ ಬಿಗ್ ಬಾಸ್ ಖಡಾಖಂಡಿತವಾಗಿ ತಕ್ಷಣ ಮಧ್ಯ ಪ್ರವೇಶಿಸ್ತಾರೆ. ನೀವು ನಂಬಲೇ ಬೇಕು. ಬಿಗ್ ಬಾಸ್ ನಿಮ್ಮ ಜೊತೆ ಇದ್ದೇ ಇರ್ತಾರೆ’ ಎಂದಿದ್ದಾರೆ ಸುದೀಪ್.
ಇದನ್ನೂ ಓದಿ: ‘ಅಸಭ್ಯವಾಗಿ ಮುಟ್ಟಿದರೆ ಬಿಗ್ ಬಾಸ್ ಸಹಿಸಲ್ಲ’: ಸುದೀಪ್ ಹೀಗೆ ಎಚ್ಚರಿಕೆ ನೀಡಿದ್ದು ಯಾರಿಗೆ?
ಬಿಗ್ ಬಾಸ್ ಮನೆಯಲ್ಲಿ ಹೆಣ್ಮಕ್ಳನ್ನು ಟೈಟ್ ಆಗಿ ತಬ್ಬಿಕೊಳ್ಳುವ ಪ್ರಶಾಂತ್ ಸಂಬರಗಿಗೆ ಸುದೀಪ್ ಖಡಕ್ ವಾರ್ನಿಂಗ್
Published On - 6:45 pm, Sun, 14 March 21