ಕನ್ನಡ ಕಿರುತೆರೆ ಲೋಕದ ಅದ್ಧೂರಿ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss OTT Kannada) ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ಸಿಕ್ಕಿದೆ. ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಪ್ರಸಾರವಾಗಲಿರುವ ಈ ಬಾರಿಯ ಬಿಗ್ ಬಾಸ್ನಲ್ಲಿ ಒಟ್ಟು 16 ಸ್ಪರ್ಧಿಗಳು ಕಾಣಿಸಿಕೊಂಡಿದ್ದಾರೆ. ಕೆಲವರು ಸಿನಿಮಾ ಕ್ಷೇತ್ರದಿಂದ ಎಂಟ್ರಿ ಕೊಟ್ಟರೆ, ಮನೆ ಕೆಲವರು ಕಿರುತೆರೆ ಲೋಕದಿಂದ ಅದೃಷ್ಟ ಪರೀಕ್ಷೆ ಮಾಡಲು ಮುಂದಾಗಿದ್ದಾರೆ. ಇವರೆಲ್ಲರ ನಡುವೆ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಪಟ್ಟಿಯಿಂದ ಎಂಟ್ರಿ ಕೊಟ್ಟಿರುವ ಸ್ಪರ್ಧಿ ಎಂದರೆ ಸೋನು ಶ್ರೀನಿವಾಸ್ ಗೌಡ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಮೆಚ್ಚುಗೆಗಳಿಸಿರುವ ಸೋನು ಗೌಡ, ಅಚ್ಚರಿ ಎಂಬಂತೆ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ದೊಡ್ಮನೆಗೆ 2ನೇ ಸ್ಪರ್ಧಿಯಾಗಿ ನಿರೂಪಕ ಕಿಚ್ಚ ಸುದೀಪ್ ಸೋನು ಗೌಡರನ್ನು ಬರಮಾಡಿಕೊಂಡರು.
ಆ ಬಳಿಕ ಮಾತನಾಡಿದ ಕಿಚ್ಚ ಸುದೀಪ್, ಬಿಗ್ ಬಾಸ್ ವೇದಿಕೆ ಮೇಲೆ ನಿಂತಿದ್ದೀರಾ..ಏನನಿಸುತ್ತಿದೆ ಎಂದು ಸೋನು ಗೌಡರನ್ನು ಪ್ರಶ್ನಿಸಿದ್ದರು. ಈ ವೇಳೆ ತುಂಬಾ ರೋಮಾಂಚನವಾಗುತ್ತಿದೆ. ಅದರಲ್ಲೂ ನಿಮ್ಮನ್ನು (ಕಿಚ್ಚ ಸುದೀಪ್) ಫಸ್ಟ್ ಟೈಮ್ ನೋಡ್ತಿದ್ದೀನಿ. ಈ ಖುಷಿಯನ್ನು ತೋರ್ಪಡಿಸಲಾಗುತ್ತಿಲ್ಲ ಎಂದು ಸೋನು ಗೌಡ ತಿಳಿಸಿದರು.
ಇದೇ ವೇಳೆ ಕಿಚಾಯಿಸಿದ ಕಿಚ್ಚ ಸುದೀಪ್, ನೀವು ಏನೋನೋ ಹೇಳಿದ್ದೀರಂತೆ, ಇದನ್ನೂ ಕೂಡ ಹೇಳ್ಬೇಕು ಎಂದು ಕಾಲೆಳೆದರು. ಇನ್ನು ಮಾತು ಮುಂದುವರೆಸಿ ಈ ಕಾರ್ಯಕ್ರಮಕ್ಕಾಗಿ ಎಷ್ಟು ತಯಾರಾಗಿ ಬಂದಿದ್ದೀರಿ ಎಂದು ಮರು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸೋನು ಗೌಡ, ನಾನು ಯಾವುದೇ ತಯಾರಿ ಮಾಡಿಕೊಂಡಿಲ್ಲ. ಅನ್ ಸ್ಪಾಟ್ನಲ್ಲೇ ಮಾತನಾಡ್ತೀನಿ ಎನ್ನುತ್ತಿದ್ದಂತೆ ಅದು ಗೊತ್ತು ಬಿಡಿ ಎಂದು ಸುದೀಪ್ ಮತ್ತೊಮ್ಮೆ ಕಿಚಾಯಿಸಿದರು.
ಇದೀಗ ಸುದೀಪ್ ಹಾಗೂ ಸೋನು ಗೌಡ ಅವರ ಈ ಮೊದಲ ಭೇಟಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇಲ್ಲಿ ಸೋನು ಗೌಡರನ್ನು ಕಿಚ್ಚ ಎಲ್ಲಾ ಗೊತ್ತಿದ್ದೇ ಕಿಚಾಯಿಸಿದ್ದಾರೆ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.
ಏಕೆಂದರೆ ಸೋನು ಗೌಡರ ನಗ್ನ ವಿಡಿಯೋವೊಂದು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಬಿಗ್ ಬಾಸ್ ವೇದಿಕೆಯಲ್ಲಿ ಈ ಘಟನೆಗಳನ್ನೆಲ್ಲಾ ಉಲ್ಲೇಖಿಸದೇ ಪರೋಕ್ಷವಾಗಿ ಕಿಚ್ಚ ಸುದೀಪ್ ಸೋನು ಗೌಡರ ಕಾಲೆಳೆದಿದ್ದಾರೆ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ಬಿಗ್ ಬಾಸ್ ಒಟಿಟಿ ಸೀಸನ್ 1 ರಲ್ಲಿ ಒಟ್ಟು 16 ಸ್ಪರ್ಧಿಗಳು ಎಂಟ್ರಿಕೊಟ್ಟಿದ್ದು, ಅದರಂತೆ ದೊಡ್ಮನೆಯಲ್ಲಿ ಆರ್ಯವರ್ಧನ್ ಗುರೂಜಿ, ಸೋನು ಶ್ರೀನಿವಾಸ್ ಗೌಡ, ರೂಪೇಶ್ ಶೆಟ್ಟಿ, ಸಾನ್ಯಾ ಅಯ್ಯರ್, ಸ್ಪೂರ್ಥಿ ಗೌಡ, ಹಾಸ್ಯ ಕಲಾವಿದ ಲೋಕೇಶ್, ನಟಿ ಅಕ್ಷತಾ ಕುಕ್ಕಿ, ಕಿರಣ್ ಯೋಗೇಶ್ವರ್, ರಾಕೇಶ್ ಅಡಿಗ, ಚೈತ್ರಾ ಹಳ್ಳಿಕೇರಿ, ಉದಯ್ ಸೂರ್ಯ, ಸೋಮಣ್ಣ ಮಾಚಿಮಾಡ, ನಂದಿನಿ, ಜಸ್ವಂತ್ ಬೋಪಣ್ಣ, ಅರ್ಜುನ್ ರಮೇಶ್ ಹಾಗೂ ರೂಪೇಶ್ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ.