Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಭಾಸ್, ಅಲ್ಲು ಅರ್ಜುನ್ ಬಳಿಕ ಜೂ ಎನ್​ಟಿಆರ್ ಮೇಲೆ ಕಣ್ಣಿಟ್ಟ ಟಿ-ಸೀರೀಸ್

ಬಾಲಿವುಡ್​ನ ದೊಡ್ಡ ನಿರ್ಮಾಪಕರು ದಕ್ಷಿಣ ಸಿನಿಮಾರಂಗದ ಮೇಲೆ ಬಂಡವಾಳ ಹೂಡುತ್ತಿದ್ದು, ಈಗಾಗಲೇ ಪ್ರಭಾಸ್ ಜೊತೆ ಸಿನಿಮಾ ಮುಗಿಸಿ ಅಲ್ಲು ಅರ್ಜುನ್ ಜೊತೆ ಸಿನಿಮಾ ಘೋಷಿಸಿರುವ ಟಿ-ಸೀರೀಸ್ ಮಾಲೀಕ ಇದೀಗ ಜೂ ಎನ್​ಟಿಆರ್ ಜೊತೆ ಸಿನಿಮಾ ಮಾಡುವ ಯೋಜನೆಯಲ್ಲಿದ್ದಾರೆ.

ಪ್ರಭಾಸ್, ಅಲ್ಲು ಅರ್ಜುನ್ ಬಳಿಕ ಜೂ ಎನ್​ಟಿಆರ್ ಮೇಲೆ ಕಣ್ಣಿಟ್ಟ ಟಿ-ಸೀರೀಸ್
ಜೂ ಎನ್​ಟಿಆರ್
Follow us
ಮಂಜುನಾಥ ಸಿ.
|

Updated on:Mar 24, 2023 | 11:05 PM

ಬಾಲಿವುಡ್​ನ (Bollywood) ಹಲವು ದೊಡ್ಡ ನಿರ್ಮಾಪಕರು (Producer) ತಮ್ಮ ಹಣದ ಥೈಲಿಗಳನ್ನು ಎತ್ತಿಕೊಂಡು ದಕ್ಷಿಣ ಚಿತ್ರರಂಗದತ್ತ ಆಗಮಿಸಿದ್ದಾರೆ. ಕರಣ್ ಜೋಹರ್, ಬೋನಿ ಕಪೂರ್ ಇನ್ನೂ ಹಲವರು ಈಗಾಗಲೇ ದಕ್ಷಿಣದ ಸಿನಿಮಾಗಳ ಮೇಲೆ ಬಂಡವಾಳ ಹೂಡಿ ದೊಡ್ಡ ಮೊತ್ತದ ಲಾಭವನ್ನೂ ಮಾಡಿಕೊಂಡಿದ್ದಾರೆ. ಇವರುಗಳ ಜೊತೆಗೆ ಬಾಲಿವುಡ್​ನ ಮತ್ತೊಬ್ಬ ದೊಡ್ಡ ನಿರ್ಮಾಪಕ ದಕ್ಷಿಣದ ಸಿನಿಮಾಗಳ ಮೇಲೆ ಕಣ್ಣಿಟ್ಟಿದ್ದು, ಈಗಾಗಲೇ ತೆಲುಗಿನ ಇಬ್ಬರು ಸ್ಟಾರ್ ನಟರೊಟ್ಟಿಗೆ ಸಿನಿಮಾ ಮಾಡುತ್ತಿದ್ದು ಇದೀಗ ಜೂ ಎನ್​ಟಿಆರ್ (Jr NTR) ಜೊತೆಗೂ ಸಿನಿಮಾ ನಿರ್ಮಿಸಲು ಮಾತುಕತೆ ನಡೆಸಿದ್ದಾರೆ.

ಜನಪ್ರಿಯ ಮ್ಯೂಸಿಕ್ ಸಂಸ್ಥೆ ಟಿ-ಸೀರೀಸ್​ ಹಲವು ವರ್ಷಗಳಿಂದ ಸಿನಿಮಾ ನಿರ್ಮಾಣದಲ್ಲಿಯೂ ತೊಡಗಿಕೊಂಡಿದ್ದು, ಸಂಸ್ಥೆಯ ಈಗಿನ ಒಡೆಯರಾದ ಭೂಷಣ್ ಕುಮಾರ್ ಒಟ್ಟೊಟ್ಟಿಗೆ ಹಲವು ಸಿನಿಮಾಗಳ ಮೇಲೆ ಬಂಡವಾಳ ಹೂಡಿದ್ದಾರೆ. ಈಗಾಗಲೇ ನಟ ಪ್ರಭಾಸ್ ಜೊತೆ ಆದಿಪುರುಷ್ ಸಿನಿಮಾ ಮಾಡಿ ಮುಗಿಸಿರುವ ಭೂಷಣ್ ಕುಮಾರ್ ಸಿನಿಮಾವನ್ನು ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ. ಅದರ ಜೊತೆಗೆ ಅಲ್ಲು ಅರ್ಜುನ್ ಜೊತೆಗೂ ಒಂದು ಸಿನಿಮಾ ಘೋಷಣೆ ಮಾಡಿದ್ದಾರೆ. ಇದೀಗ ಜೂ ಎನ್​ಟಿಆರ್ ಜೊತೆಗೂ ಸಿನಿಮಾ ಮಾಡಲು ಯೋಜಿಸಿದ್ದಾರೆ.

ಆರ್​ಆರ್​ಆರ್ ಸಿನಿಮಾದ ಬಳಿಕ ಜೂ ಎನ್​ಟಿಆರ್ ನಟಿಸುತ್ತಿರುವ ಅವರ ಮೂವತ್ತನೇ ಸಿನಿಮಾದ ಮುಹೂರ್ತ ಕೆಲವು ದಿನಗಳ ಹಿಂದಷ್ಟೆ ಅದ್ಧೂರಿಯಾಗಿ ನಡೆಯಿತು. ಮುಹೂರ್ತ ಕಾರ್ಯಕ್ರಮಕ್ಕೆ ಅತಿಥಿಯಾಗಿ ನಿರ್ದೇಶಕ ರಾಜಮೌಳಿ, ಪ್ರಶಾಂತ್ ನೀಲ್ ಅವರುಗಳು ಭಾಗವಹಿಸಿದ್ದರು. ವಿಶೇಷವೆಂದರೆ ಅದೇ ಮುಹೂರ್ತ ಸಮಾರಂಭದಲ್ಲಿ ನಿರ್ಮಾಪಕ ಭೂಷಣ್ ಕುಮಾರ್ ಸಹ ಹಾಜರಿದ್ದರು. ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಭೂಷಣ್ ಕುಮಾರ್ ಅವರು ಜೂ ಎನ್​ಟಿಆರ್ ಅವರಿಗಾಗಿ ಸಿನಿಮಾ ಒಂದನ್ನು ನಿರ್ಮಾಣ ಮಾಡುವ ಯೋಜನೆಯಲ್ಲಿದ್ದು ಆ ಸಿನಿಮಾವನ್ನು ಬಾಲಿವುಡ್​ನ ಜನಪ್ರಿಯ ನಿರ್ದೇಶಕರೊಬ್ಬರು ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಶೀಘ್ರದಲ್ಲಿಯೇ ಈ ಬಗ್ಗೆ ಅಧಿಕೃತ ಹೇಳಿಕೆ ಹೊರಬೀಳುವ ಸಾಧ್ಯತೆ ಇದೆ.

ಆದಿಪುರುಷ್ ಸಿನಿಮಾದ ನಿರ್ಮಾಪಕರಾಗಿರುವ ಭೂಷಣ್ ಕುಮಾರ್, ಕೆಲವು ದಿನಗಳ ಹಿಂದಷ್ಟೆ ನಟ ಅಲ್ಲು ಅರ್ಜುನ್ ಜೊತೆ ಸಿನಿಮಾ ಘೋಷಣೆ ಮಾಡಿದ್ದಾರೆ. ಆ ಸಿನಿಮಾವನ್ನು ನಿರ್ದೇಶಕ ಸಂದೀಪ್ ರೆಡ್ಡಿ ವಂಗ ನಿರ್ದೇಶನ ಮಾಡಲಿದ್ದಾರೆ. ಸಂದೀಪ್ ರೆಡ್ಡಿ ಪ್ರಸ್ತುತ ರಣಬೀರ್ ಕಪೂರ್​ಗಾಗಿ ಅನಿಮಲ್ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ನಟ ಜೂ ಎನ್​ಟಿಆರ್ ಸಹ ಬಹಳ ಬ್ಯುಸಿಯಾಗಿದ್ದು ಪ್ರಸ್ತುತ ಕೊರಟಾಲ ಶಿವ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಬಳಿಕ ಪ್ರಶಾಂತ್ ನೀಲ್ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಎರಡು ಸಿನಿಮಾಗಳು ಮುಗಿದ ಬಳಿಕವಷ್ಟೆ ಹೊಸ ಸಿನಿಮಾದಲ್ಲಿ ಜೂ ಎನ್​ಟಿಆರ್ ಕಾಣಿಸಿಕೊಳ್ಳಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:54 pm, Fri, 24 March 23