ಗುಜರಾತ್​ನಲ್ಲಿ 69ನೇ ಫಿಲ್ಮ್​ಫೇರ್​ ಪ್ರಶಸ್ತಿ ಪ್ರದಾನ ಸಮಾರಂಭ; ರಂಗೇರಿತು ಮೊದಲ ದಿನ

|

Updated on: Jan 28, 2024 | 10:40 AM

69ನೇ ಫಿಲ್ಮ್​ ಫೇರ್​ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅಪಾರಶಕ್ತಿ ಖುರಾನ ಮತ್ತು ಕರೀಷ್ಮಾ ತನ್ನಾ ಅವರು ನಿರೂಪಣೆ ಮಾಡಿದ್ದಾರೆ. ಪ್ರಶಸ್ತಿ ಪ್ರದಾನದ ಜೊತೆ ಫ್ಯಾಷನ್​ ಶೋ, ಮನರಂಜನಾ ಕಾರ್ಯಕ್ರ ಕೂಡ ಜರುಗಿವೆ. ಫಿಲ್ಮ್​ ಫೇರ್​ ಜೊತೆ ಡಿಸೈನರ್​ ಶಾಂತನು-ನಿಖಿಲ್​ ಮೆಹ್ತಾ ಅವರ ಸಹಯೋಗದೊಂದಿಗೆ ಈ ಫ್ಯಾಷನ್​ ಶೋ ನಡೆದಿದೆ.

ಗುಜರಾತ್​ನಲ್ಲಿ 69ನೇ ಫಿಲ್ಮ್​ಫೇರ್​ ಪ್ರಶಸ್ತಿ ಪ್ರದಾನ ಸಮಾರಂಭ; ರಂಗೇರಿತು ಮೊದಲ ದಿನ
69ನೇ ಫಿಲ್ಮ್​ಫೇರ್​ ಪ್ರಶಸ್ತಿ ಪ್ರದಾನ ಸಮಾರಂಭ
Follow us on

‘ಗುಜರಾತ್​​ ಪ್ರವಾಸೋದ್ಯಮ ಇಲಾಖೆ’ (Gujarat Tourism) ಸಹಯೋಗದೊಂದಿಗೆ 69ನೇ ಫಿಲ್ಮ್​ಫೇರ್​ ಪ್ರಶಸ್ತಿ ಪ್ರದಾನ  (69th Filmfare Awards) ಕಾರ್ಯಕ್ರಮ ನಡೆಯುತ್ತಿದೆ. ಗುಜರಾತ್​ನ ಗಾಂಧಿನಗರದ ಮಹಾತ್ಮ ಮಂದಿರ್​ ಕನ್ವೆನ್ಷನ್​ ಮತ್ತು ಎಕ್ಸಿಬ್ಯುಷನ್​ ಸೆಂಟರ್​ನಲ್ಲಿ ಎರಡು ದಿನಗಳ ಕಾಲ ಈ ಅದ್ದೂರಿ ಸಮಾರಂಭ ನಡೆಯುತ್ತಿದೆ. ಮೊದಲ ದಿನವಾದ ಜನವರಿ 27ರಂದು ಬಾಲಿವುಡ್​ (Bollywood) ಸಿನಿಮಾಗಳ ಹಲವು ತಾಂತ್ರಿಕ ವಿಭಾಗಗಳಿಗೆ ಪ್ರಶಸ್ತಿ ನೀಡಲಾಗಿದೆ. ಕಲರ್​ಫುಲ್​ ವೇದಿಕೆ ಮೇಲೆ ಫ್ಯಾಷನ್​ ಶೋ ಕೂಡ ನಡೆದಿದೆ. ಬಾಲಿವುಡ್​ ನಟಿ ಜಾನ್ವಿ ಕಪೂರ್​ ಜೊತೆ ಅನೇಕ ಮಾಡೆಲ್​ಗಳು ರ‍್ಯಾಂಪ್​ ವಾಕ್​ ಮಾಡಿದ್ದಾರೆ. ಫಿಲ್ಮ್​ಫೇರ್​ ಜೊತೆ ಡಿಸೈನರ್​ ಶಾಂತನು-ನಿಖಿಲ್​ ಮೆಹ್ತಾ ಅವರ ಸಹಯೋಗದೊಂದಿಗೆ ಈ ಫ್ಯಾಷನ್​ ಶೋ ನಡೆದಿದೆ.

ವಿಕ್ಕಿ ಕೌಶಲ್​ ನಟನೆಯ ‘ಸ್ಯಾಮ್​ ಬಹದ್ದೂರ್​’ ಚಿತ್ರವು ಮೂರು ತಾಂತ್ರಿಕ ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ. ಅತ್ಯುತ್ತಮ ವಸ್ತ್ರ ವಿನ್ಯಾಸ, ಅತ್ಯುತ್ತಮ ಸೌಂಡ್​ ಡಿಸೈನ್​ ಹಾಗೂ ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್​ ವಿಭಾಗದಲ್ಲಿ ಈ ಸಿನಿಮಾಗೆ ಫಿಲ್ಮ್​ಫೇರ್ ಪ್ರಶಸ್ತಿ ಸಿಕ್ಕಿದೆ. 69ನೇ ಫಿಲ್ಮ್​ಫೇರ್​ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅಪಾರಶಕ್ತಿ ಖುರಾನ ಮತ್ತು ಕರೀಷ್ಮಾ ತನ್ನಾ ಅವರು ನಿರೂಪಣೆ ಮಾಡಿದ್ದಾರೆ.

‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾದ ‘ವಾಟ್​ ಜುಮ್ಕಾ..’ ಹಾಡಿಗಾಗಿ ಗಣೇಶ್​ ಆಚಾರ್ಯ ಅವರು ಅತ್ಯುತ್ತಮ ನೃತ್ಯ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ. ವೇದಿಕೆಯಲ್ಲಿ ಡ್ಯಾನ್ಸ್​ ಮಾಡಿ ಅವರು ಎಲ್ಲರನ್ನೂ ರಂಜಿಸಿದ್ದಾರೆ. ವಿಧು ವಿನೋದ್​ ಚೋಪ್ರಾ ನಿರ್ದೇಶನದ ‘12th ಫೇಲ್​’ ಸಿನಿಮಾಗೆ ಅತ್ಯುತ್ತಮ ಸಂಕಲನ ಪ್ರಶಸ್ತಿ ಸಿಕ್ಕಿದೆ. ಶಾರುಖ್​ ಖಾನ್​ ನಟನೆಯ ‘ಜವಾನ್​’ ಸಿನಿಮಾಗೆ ಅತ್ಯುತ್ತಮ ಸಾಹಸ ನಿರ್ದೇಶನ ಮತ್ತು ಅತ್ಯುತ್ತಮ ಸ್ಪೆಷಲ್​ ಎಫೆಕ್ಟ್​ ವಿಭಾಗದಲ್ಲಿ ಫಿಲ್ಮ್​ಫೇರ್​ ಪ್ರಶಸ್ತಿ ಸಿಕ್ಕಿದೆ.

ಇದನ್ನೂ ಓದಿ: 96th Oscars Shortlist: ಆಸ್ಕರ್​ ರೇಸ್​ನಿಂದ ಹೊರಬಿದ್ದ ಭಾರತದ ‘2018’ ಸಿನಿಮಾ; ಮತ್ತೆ ನಿರಾಸೆ

ಸಂದೀಪ್​ ರೆಡ್ಡಿ ವಂಗ ನಿರ್ದೇಶನದ ‘ಅನಿಮಲ್​’ ಸಿನಿಮಾಗೆ ಅತ್ಯುತ್ತಮ ಸೌಂಡ್​ ಹಿನ್ನೆಲೆ ಸಂಗೀತ ಪ್ರಶಸ್ತಿ ಸಿಕ್ಕಿದೆ. ಅತ್ಯುತ್ತಮ ಸೌಂಡ್​ ಡಿಸೈನ್​ ವಿಭಾಗದಲ್ಲಿ ‘ಸ್ಯಾಮ್​ ಬಹದ್ದೂರ್​’ ಚಿತ್ರದ ಜೊತೆ ‘ಅನಿಮಲ್​’ ಕೂಡ ಪ್ರಶಸ್ತಿ ಹಂಚಿಕೊಂಡಿದೆ. ‘ತ್ರಿ ಆಫ್​ ಅಸ್​’ ಸಿನಿಮಾದ ಛಾಯಾಗ್ರಹಣಕ್ಕೆ ಅವಿನಾಶ್​ ಅರುಣ್​ ಧಾವರೆ ಅವರು ಪ್ರಶಸ್ತಿ ಪಡೆದಿದ್ದಾರೆ. ಇನ್ನುಳಿದ ಮುಖ್ಯ ವಿಭಾಗಗಳ ಪ್ರಶಸ್ತಿಗಳನ್ನು ಇಂದು (ಜನವರಿ 28) ನೀಡಲಾಗುತ್ತದೆ.

ಇದನ್ನೂ ಓದಿ: ಫಿಲ್ಮ್​ಫೇರ್​ನಲ್ಲಿ ಮೈಚಳಿ ಬಿಟ್ಟು ಕುಣಿದ ಜಾಕ್ವೆಲಿನ್

‘ಫಿಲ್ಮ್​ಫೇರ್​ ಜೊತೆ ‘ಶಾಂತನು ಮತ್ತು ನಿಖಿಲ್​’ ಸಹಯೋಗ ಆಗಿರುವುದು ಹೊಸದೇನೂ ಅಲ್ಲ. ಮಿಸ್​ ಇಂಡಿಯಾ ಸೇರಿ ಹಲವು ಕಾರ್ಯಕ್ರಮ ನಮ್ಮ ಸಹಯೋಗದಲ್ಲಿ ಆಗಿತ್ತು. ಗುಜರಾತ್​ನಲ್ಲಿ ನಡೆಯುತ್ತಿರುವ 69ನೇ ಫಿಲ್ಮ್​ಫೇರ್​ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿರುವುದು ಗೌರವದ ಸಂಗತಿ’ ಎಂದು ಫ್ಯಾಷನ್​ ಡಿಸೈನರ್​ ನಿಖಿಲ್​ ಮೆಹ್ರಾ ಹೇಳಿದ್ದಾರೆ. ‘ಗುಜರಾತ್​ನಲ್ಲಿನ ಸಿನಿಮಾ ಪ್ರೇಮಿಗಳಿಗೆ ಇದು ಮಹತ್ವದ ದಿನ. ಈ ಕಾರ್ಯಕ್ರಮ ಗುಜರಾತ್​ನಲ್ಲಿ ನಡೆಯುತ್ತಿರುವುದರ ಸಂಪೂರ್ಣ ಕೀರ್ತಿ ಇಲ್ಲಿನ ಪ್ರವಾಸೋದ್ಯಮ ಇಲಾಖೆಗೆ ಸಲ್ಲುತ್ತದೆ. ಗುಜರಾತಿ ಸಿನಿಮಾಗಳಿಗಾಗಿಯೇ ವಿಶೇಷ ಫಿಲ್ಮ್​ಫೇರ್​ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುವ ದಿನಗಳು ಕೂಡ ದೂರ ಇಲ್ಲ’ ಎಂದು ಗಾಯಕ ಪಾರ್ಥಿವ್​ ಗೋಹಿಲ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:24 am, Sun, 28 January 24