
‘ಕಾಫಿ ವಿತ್ ಕರಣ್ ಸೀಸನ್ 9’ರ ಮುಂಬರುವ ಸಂಚಿಕೆಯಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ರವಿ ಕಿಶನ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಶೋನಲ್ಲಿ ನಿರ್ದೇಶಕ ಕರಣ್ ಜೋಹರ್ ಅವರು ಅಕ್ಷಯ್ ಕುಮಾರ್ ಅವರ ಶಿಸ್ತಿನ ಕೆಲಸದ ಶೈಲಿಯನ್ನು ಕೊಂಡಾಡಿದ್ದಲ್ಲದೆ, ನಟಿ ದೀಪಿಕಾ ಪಡುಕೋಣೆ ಅವರ 8 ಗಂಟೆಗಳ ಕೆಲಸದ ಶಿಫ್ಟ್ ಬೇಡಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಈ ವಿಚಾರ ಯಾಕೆ ಇಷ್ಟೊಂದು ದೊಡ್ಡ ಚರ್ಚೆಯ ವಿಷಯವಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಅಕ್ಷಯ್ ಕುಮಾರ್ ಅವರ ಬೆಳಗಿನ ಜಾವದ ದಿನಚರಿಯ ಬಗ್ಗೆ ಹರಿದಾಡುವ ವದಂತಿಗಳನ್ನು ತಳ್ಳಿಹಾಕಿದ ಕರಣ್, ಅಕ್ಷಯ್ ಅವರ ಬದ್ಧತೆ ಮತ್ತು ಶಿಸ್ತನ್ನು ಶ್ಲಾಘಿಸಿದರು. ‘ನಾನು ಅಕ್ಷಯ್ ಜೊತೆ ಮೊದಲ ಸಿನಿಮಾ ಮಾಡಿದಾಗ, ಅವರ ಬಗ್ಗೆ ನಾನಾ ಮಾತುಗಳು ಕೇಳಿಬರುತ್ತಿದ್ದವು. ಆದರೆ, ಇಷ್ಟು ಕಷ್ಟಪಟ್ಟು ಕೆಲಸ ಮಾಡುವ ವ್ಯಕ್ತಿಯನ್ನು ನಾನು ಬೇರೆಲ್ಲೂ ನೋಡಿಲ್ಲ. ಅವರು ಬೆಳಗ್ಗೆ 5 ಗಂಟೆಗೆ ಮೀಟಿಂಗ್ ಮಾಡುತ್ತಾರೆ. ಸ್ಕ್ರಿಪ್ಟ್ ಅನ್ನು ಸಂಪೂರ್ಣವಾಗಿ ಕಂಠಪಾಠ ಮಾಡಿಕೊಂಡಿರುತ್ತಾರೆ. ನಿರ್ದೇಶಕರಿಗೆ ಬೆಂಬಲವಾಗಿ ನಿಲ್ಲುವ ಜೊತೆಗೆ ನಿರ್ಮಾಪಕರ ಕಷ್ಟವನ್ನೂ ಅರ್ಥಮಾಡಿಕೊಳ್ಳುತ್ತಾರೆ. ಹೊಸ ನಿರ್ದೇಶಕರಿಗೆ ಅವಕಾಶ ನೀಡುವ ಏಕೈಕ ಸೂಪರ್‌ಸ್ಟಾರ್ ಎಂದರೆ ಅದು ಅಕ್ಷಯ್. ಆದರೆ, ಅವರಿಗೆ ಸಿಗಬೇಕಾದಷ್ಟು ಕ್ರೆಡಿಟ್ ಸಿಗುತ್ತಿಲ್ಲ’ ಎಂದು ಕರಣ್ ಹೇಳಿದರು.
ಅಕ್ಷಯ್ ಅವರ ಶಿಸ್ತಿನ ಕೆಲಸದ ಅವಧಿಯನ್ನು ಚಿತ್ರರಂಗದ ಕೆಲಸದ ಸಮಯದ ಚರ್ಚೆಗೆ ಹೋಲಿಸಿದ ಕರಣ್, ನಟರಿಗೆ ಸಿಗುವಷ್ಟೇ ಗೌರವ ಮತ್ತು ಸ್ವಾತಂತ್ರ್ಯ ನಟಿಯರಿಗೂ ಸಿಗಬೇಕು ಎಂದರು. ದೀಪಿಕಾ ಪಡುಕೋಣೆ ಅವರ ನಿಲುವನ್ನು ಬೆಂಬಲಿಸಿ ಮಾತನಾಡಿದ ಅವರು, ‘ಅದಕ್ಕಾಗಿಯೇ ನಾನು ದೀಪಿಕಾ ಪಡುಕೋಣೆ ಅವರ ನಿರ್ಧಾರವನ್ನು ಗೌರವಿಸುತ್ತೇನೆ. ಅವರು 8 ಗಂಟೆಗಳ ಶಿಫ್ಟ್ ಬಗ್ಗೆ ಮಾತನಾಡಿದಾಗ ಅದನ್ನು ಯಾಕೆ ದೊಡ್ಡ ವಿಷಯವನ್ನಾಗಿ ಮಾಡಲಾಗುತ್ತದೆಯೋ ನನಗೆ ತಿಳಿಯುತ್ತಿಲ್ಲ’ ಎಂದರು.
‘ಅದು ಅವರ ಹಕ್ಕು. ಅವರು ಆ ಹಕ್ಕನ್ನು ಸಂಪಾದಿಸಿದ್ದಾರೆ. ಅವರು ತುಂಬಾ ಶ್ರಮಜೀವಿ. ಒಬ್ಬ ತಾಯಿಯಾಗಿ, ಪತ್ನಿಯಾಗಿ, ವೃತ್ತಿಪರ ಕಲಾವಿದೆಯಾಗಿ ಅವರಿಗೂ ವೈಯಕ್ತಿಕ ಜೀವನವಿದೆ. ಪುರುಷ ನಟರು ಕೇಳಿದಾಗ ಸಿಗುವ ಸೌಲಭ್ಯವನ್ನು ಅವರು ಯಾಕೆ ಕೇಳಬಾರದು? ಚಿತ್ರರಂಗದಲ್ಲಿ ಕೆಲವೊಮ್ಮೆ ಇಂತಹ ಲಿಂಗ ತಾರತಮ್ಯ ನಡೆಯುತ್ತದೆ, ಇದು ಸರಿಯಲ್ಲ’ ಎಂದು ಕರಣ್ ಜೋಹರ್ ಅಭಿಪ್ರಾಯಪಟ್ಟರು.
ಇದನ್ನೂ ಓದಿ: 2ನೇ ಮಗಳಿಗೆ ದೇವಿ ಎಂದು ನಾಮಕರಣ ಮಾಡಿದ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್
ನಟರಿಗೆ ಇರುವಷ್ಟೇ ಕೆಲಸದ ಮಿತಿಗಳನ್ನು ನಿಗದಿಪಡಿಸಿಕೊಳ್ಳುವ ಸ್ವಾತಂತ್ರ್ಯ ನಟಿಯರಿಗೂ ಇರಬೇಕು ಎಂದು ಕರಣ್ ಅಭಿಪ್ರಾಯಪಟ್ಟರು. ದೀಪಿಕಾ ಮತ್ತು ಅಕ್ಷಯ್ ಅವರ ಸಾಧನೆ ಹಾಗೂ ಕೆಲಸವನ್ನು ಗೌರವಿಸಿಯೇ ನಿರ್ಮಾಪಕರು ಅವರೊಂದಿಗೆ ಸಿನಿಮಾ ಮಾಡಲು ಮುಂದಾಗುತ್ತಾರೆ ಎಂದರು.
ಕರಣ್ ಅವರ ಮಾತಿಗೆ ದನಿಗೂಡಿಸಿದ ಅಕ್ಷಯ್ ಕುಮಾರ್, ಕಲಾವಿದರಿಗೆ 8 ಗಂಟೆಗಳ ಶಿಫ್ಟ್ ಮಾದರಿ ಸೂಕ್ತ ಎಂದು ಬೆಂಬಲಿಸಿದರು. ಶಿಸ್ತುಬದ್ಧ ಮತ್ತು ಸಮಯಬದ್ಧ ಚಿತ್ರೀಕರಣದಿಂದ ಸೃಜನಶೀಲತೆಗೆ ಯಾವುದೇ ಧಕ್ಕೆಯಾಗುವುದಿಲ್ಲ. ಬದಲಾಗಿ, ಸೆಟ್‌ನಲ್ಲಿರುವ ಎಲ್ಲರಿಗೂ ಇದರಿಂದ ಲಾಭವಾಗುತ್ತದೆ ಎಂದರು. ಇದೇ ವೇಳೆ ಇಬ್ಬರೂ ಅಂತಾರಾಷ್ಟ್ರೀಯ ಸಿನಿಮಾ ನಿರ್ಮಾಣದ ಮಾನದಂಡಗಳನ್ನು ಉಲ್ಲೇಖಿಸಿದರು. ‘ಕಾಫಿ ವಿತ್ ಕರಣ್ ಸೀಸನ್ 9’ರ ಪೂರ್ಣ ಸಂಚಿಕೆಗಳು ಜಿಯೋಹಾಟ್‌ಸ್ಟಾರ್‌ನಲ್ಲಿ ವೀಕ್ಷಣೆಗೆ ಲಭ್ಯವಾಗಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.