
ನಟ ಆಮಿರ್ ಖಾನ್ (Aamir Khan) ಅವರ ಜೀವನ ಶೈಲಿ ಬಹಳ ಭಿನ್ನವಾಗಿದೆ. ಮಾಜಿ ಪತ್ನಿಯರಿಗೆ ಅವರು ವಿಚ್ಛೇದನ ನೀಡಿದ್ದರೂ ಕೂಡ ಅವರೊಂದಿಗಿನ ಆತ್ಮೀಯತೆಯನ್ನು ಇನ್ನೂ ಕಡಿದುಕೊಂಡಿಲ್ಲ. ವಿಶೇಷ ಸಂದರ್ಭಗಳಲ್ಲಿ ಅವರೆಲ್ಲ ಒಟ್ಟಿಗೆ ಸೇರುತ್ತಾರೆ. ದೂರ ದೂರ ವಾಸಿಸುತ್ತಿದ್ದರೂ ಸಹ ಅವರ ನಡುವೆ ಒಂದೇ ಕುಟುಂಬದವರ ರೀತಿ ಭಾವನೆ ಇದೆ. ಅದಕ್ಕೆ ಈಗ ಮತ್ತೆ ಸಾಕ್ಷಿ ಸಿಕ್ಕಿದೆ. ಇಂದು (ಮಾರ್ಚ್ 31) ಆಮಿರ್ ಖಾನ್ ಮನೆಯಲ್ಲಿ ರಂಜಾನ್ ಹಬ್ಬವನ್ನು ಆಚರಿಸಲಾಗಿದೆ. ಈ ಸಂಭ್ರಮದಲ್ಲಿ ಮಾಜಿ ಪತ್ನಿಯರಾದ ಕಿರಣ್ ರಾವ್ (Kiran Rao) ಮತ್ತು ರೀನಾ ದತ್ತ (Reena Dutta) ಅವರು ಭಾಗಿಯಾಗಿದ್ದಾರೆ. ಈ ಫ್ಯಾಮಿಲಿಯ ಫೋಟೋಗಳು ವೈರಲ್ ಆಗಿವೆ.
1986ರಲ್ಲಿ ರೀನಾ ದತ್ತ ಜೊತೆ ಆಮಿರ್ ಖಾನ್ ಮದುವೆ ಆಗಿದ್ದರು. ಅವರಿಗೆ ಜುನೈದ್ ಖಾನ್ ಮತ್ತು ಇರಾ ಖಾನ್ ಜನಿಸಿದರು. 2002ರಲ್ಲಿ ರೀನಾ ದತ್ತಾಗೆ ಆಮಿರ್ ಖಾನ್ ವಿಚ್ಛೇದನ ನೀಡಿದರು. 2005ರಲ್ಲಿ ನಿರ್ದೇಶಕಿ ಕಿರಣ್ ರಾವ್ ಜೊತೆ ಆಮಿರ್ ಖಾನ್ 2ನೇ ಮದುವೆ ಆದರು. 2021ರಲ್ಲಿ ಅವರಿಗೂ ವಿಚ್ಛೇದನ ನೀಡಿದರು. ಹಾಗಿದ್ದರೂ ಕೂಡ ಈ ಮಾಜಿ ಪತ್ನಿಯರ ಜೊತೆ ಆಮಿರ್ ಖಾನ್ ಇಂದಿಗೂ ಆತ್ಮೀಯವಾಗಿದ್ದಾರೆ.
ಮುಂಬೈನಲ್ಲಿ ಇರುವ ಆಮಿರ್ ಖಾನ್ ಅವರ ಮನೆಯಲ್ಲಿ ಈದ್ ಆಚರಣೆ ಮಾಡಲಾಗಿದೆ. ಕಿರಣ್ ರಾವ್, ರೀನಾ ದತ್ತಾ, ಜುನೈದ್ ಖಾನ್, ಆಜಾದ್ ರಾವ್ ಖಾನ್ ಮುಂತಾದವರು ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ. ಆಮಿರ್ ಖಾನ್ ಅವರು ಮನೆಯ ಬಾಲ್ಕನಿಗೆ ಬಂದು ಪಾಪರಾಜಿಗಳಿಗೆ ಪೋಸ್ ನೀಡಿದ್ದಾರೆ. ವೈರಲ್ ಆದ ಫೋಟೋ ನೋಡಿ ನೆಟ್ಟಿಗರು ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಈಗ ಆಮಿರ್ ಖಾನ್ ಅವರ ಬಾಳಿನಲ್ಲಿ ಬೇರೆ ಮಹಿಳೆಯ ಪ್ರವೇಶ ಆಗಿದೆ ಎಂಬ ವಿಷಯ ಇತ್ತೀಚೆಗೆ ಬಹಿರಂಗ ಆಯಿತು. ಬೆಂಗಳೂರು ಮೂಲದ ಗೌರಿ ಎಂಬ ಮಹಿಳೆಯ ಜೊತೆ ಆಮಿರ್ ಖಾನ್ ಅವರು ರಿಲೇಷನ್ಶಿಪ್ನಲ್ಲಿ ಇದ್ದಾರೆ. ಈ ವಿಷಯವನ್ನು ಅವರು ಇತ್ತೀಚೆಗೆ ಒಪ್ಪಿಕೊಂಡಿದ್ದಾರೆ. ಮೂರನೇ ವಿವಾಹಕ್ಕೆ ಅವರು ಸಜ್ಜಾಗಿದ್ದಾರೆ. ಇಂಥ ಸಂದರ್ಭದಲ್ಲಿ ಮಾಜಿ ಪತ್ನಿಯರ ನಡುವೆಯೂ ಅವರು ಆಪ್ತವಾಗಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ: ಮಾಜಿ ಪತ್ನಿಯ ಸಿನಿಮಾಗೆ ಆಡಿಷನ್ ಕೊಟ್ಟು ಫೇಲ್ ಆದ ಆಮಿರ್ ಖಾನ್; ವಿಡಿಯೋ ವೈರಲ್
ಇನ್ನು, ಬಾಲಿವುಡ್ ಸೆಲೆಬ್ರಿಟಿಗಳಾದ ಸಲ್ಮಾನ್ ಖಾನ್, ಶಾರುಖ್ ಖಾನ್, ಸೈಫ್ ಅಲಿ ಖಾನ್ ಮುಂತಾದವರ ಮನೆಯಲ್ಲೂ ರಂಜಾನ್ ಸಡಗರ ಜೋರಾಗಿದೆ. ಮನೆ ಮುಂದೆ ಸೇರಿದ್ದ ಅಭಿಮಾನಿಗಳಿಗೆ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅವರು ಹಬ್ಬದ ಶುಭಾಶಯ ತಿಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.