ಮಾಜಿ ಪತ್ನಿಯ ಸಿನಿಮಾಗೆ ಆಡಿಷನ್ ಕೊಟ್ಟು ಫೇಲ್ ಆದ ಆಮಿರ್ ಖಾನ್; ವಿಡಿಯೋ ವೈರಲ್
ಆಮಿರ್ ಖಾನ್ ಅವರು ‘ಲಾಪತಾ ಲೇಡೀಸ್’ ಸಿಮಿಮಾಗೆ ಆಡಿಷನ್ ನೀಡಿದ್ದ ವಿಡಿಯೋ ವೈರಲ್ ಆಗಿದೆ. ಅವರು ಯಾಕೆ ಫೇಲ್ ಆದರು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಆಮಿರ್ ಖಾನ್ ಅವರು ಆಡಿಷನ್ನಲ್ಲಿ ಫೇಲ್ ಆದ ಬಳಿಕ ಆ ಪಾತ್ರವನ್ನು ರವಿ ಕಿಶನ್ ಅವರಿಗೆ ನೀಡಲಾಯಿತು.

ಬಾಲಿವುಡ್ ಸ್ಟಾರ್ ಕಲಾವಿದ ಆಮಿರ್ ಖಾನ್ (Aamir Khan) ಅವರು ಉತ್ತಮ ನಟ ಎಂಬುದರಲ್ಲಿ ಅನುಮಾನವೇ ಇಲ್ಲ. ಈಗಾಗಲೇ ಅವರು ಅನೇಕ ಸಿನಿಮಾಗಳ ಮೂಲಕ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತು ಮಾಡಿದ್ದಾರೆ. ಹಾಗಿದ್ದರೂ ಕೂಡ ಅವರು ಅಡಿಷನ್ನಲ್ಲಿ (Aamir Khan Audition) ಫೇಲ್ ಆಗಿದ್ದಾರೆ ಎಂದರೆ ನಂಬಲೇ ಬೇಕು. ಹಾಗಂತ ಇದೇನು ಅವರ ಆರಂಭದ ದಿನಗಳ ವಿಷಯ ಅಲ್ಲ. ಸೂಪರ್ ಸ್ಟಾರ್ ಆಗಿ ಮಿಂಚಿದ ಮೇಲೂ ಕೂಡ ಅವರು ಆಡಿಷನ್ನಲ್ಲಿ ಫೇಲ್ ಆಗಿದ್ದಾರೆ. ಈ ಘಟನೆ ನಡೆದಿದ್ದು ‘ಲಾಪತಾ ಲೇಡೀಸ್’ (Laapataa Ladies) ಸಿನಿಮಾದ ಆಡಿಷನ್ ವೇಳೆ. ಅದಕ್ಕೆ ಈಗ ವಿಡಿಯೋ ಸಾಕ್ಷಿ ಕೂಡ ಇದೆ.
‘ಲಾಪತಾ ಲೇಡೀಸ್’ ಸಿನಿಮಾ 2024ರಲ್ಲಿ ಬಿಡುಗಡೆ ಆಯಿತು. ಆಮಿರ್ ಖಾನ್ ಅವರು ಆ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಅವರ ಮಾಜಿ ಪತ್ನಿ ಕಿರಣ್ ರಾವ್ ನಿರ್ದೇಶನ ಮಾಡಿದ್ದರು. ಆ ಚಿತ್ರದಲ್ಲಿ ಪೊಲೀಸ್ ಪಾತ್ರ ಬಹಳ ಮಹತ್ವದ್ದಾಗಿತ್ತು. ಆ ಪಾತ್ರವನ್ನು ಮಾಡಲು ಆಮಿರ್ ಖಾನ್ ಬಯಸಿದ್ದರು. ಹಾಗಾಗಿ ಅವರು ಆಡಿಷನ್ ನೀಡಿದ್ದರು. ಆದರೆ ಅವರನ್ನು ಕಿರಣ್ ರಾವ್ ಆಯ್ಕೆ ಮಾಡಲಿಲ್ಲ!
ಆಮಿರ್ ಖಾನ್ ಅವರು ಆಯ್ಕೆ ಆಗದೇ ಇರುವುದಕ್ಕೆ ಕೆಲವು ಕಾರಣಗಳಿವೆ. ಆ ಪಾತ್ರಕ್ಕೆ ಸ್ವಲ್ಪ ಡಾರ್ಕ್ ಶೇಡ್ ಇತ್ತು. ಕ್ಲೈಮ್ಯಾಕ್ಸ್ನಲ್ಲಿ ಒಂದು ಟ್ವಿಸ್ಟ್ ಕೂಡ ಇತ್ತು. ಆ ಪೊಲೀಸ್ ಅಧಿಕಾರಿ ಒಳ್ಳೆಯವನೋ ಅಥವಾ ಕೆಟ್ಟವನೋ ಎಂಬ ಕೌತುಕ ಪ್ರೇಕ್ಷಕರಿಗೆ ಕೊನೆವರೆಗೂ ಇರುತ್ತದೆ. ಒಂದು ವೇಳೆ ಆಮಿರ್ ಖಾನ್ ಆ ಪಾತ್ರ ಮಾಡಿದರೆ ಸಸ್ಪೆನ್ಸ್ ಗುಣ ಮಾಯವಾಗುವ ಸಾಧ್ಯತೆ ಇರುತ್ತದೆ. ಯಾಕೆಂದರೆ, ಹೀರೋ ಯಾವಾಗಲೂ ಕೊನೆಯಲ್ಲಿ ಒಳ್ಳೆಯದನ್ನೇ ಮಾಡುತ್ತಾನೆ ಎಂದು ಪ್ರೇಕ್ಷಕರು ಊಹಿಸಿಬಿಡುತ್ತಾರೆ. ಆ ಕಾರಣದಿಂದ ಆಮಿರ್ ಖಾನ್ ಬದಲು ನಟ ರವಿ ಕಿಶನ್ ಅವರಿಗೆ ಆ ಪಾತ್ರವನ್ನು ನೀಡಲಾಯಿತು.
ವೈರಲ್ ವಿಡಿಯೋ:
ಸೋಶಿಯಲ್ ಮೀಡಿಯಾದಲ್ಲಿ ಈ ಆಡಿಷನ್ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿದ ಪ್ರೇಕ್ಷಕರು ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ಆಮಿರ್ ಖಾನ್ ನಟನೆಗಿಂತ ರವಿ ಕಿಶನ್ ನಟನೆಯೇ ಚೆನ್ನಾಗಿದೆ ಎಂದು ಬಹುತೇಕರು ಕಮೆಂಟ್ ಮಾಡುತ್ತಿದ್ದಾರೆ. ತಮ್ಮದೇ ನಿರ್ಮಾಣದ ಸಿನಿಮಾ ಆಗಿದ್ದರೂ ಕೂಡ ಆ ಪಾತ್ರ ತಮಗೆ ಹೊಂದಿಕೆ ಆಗುವುದಿಲ್ಲ ಎಂಬುದನ್ನು ತಿಳಿದ ಬಳಿಕ ಆಮಿರ್ ಖಾನ್ ಅವರು ಬೇರೆ ನಟನಿಗೆ ಆ ಅವಕಾಶ ನೀಡಿದರು. ಅವರ ಈ ಗುಣವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.
ಇದನ್ನೂ ಓದಿ: Laapataa Ladies: ಆಸ್ಕರ್ ಕನಸು ಭಗ್ನ; ರೇಸ್ನಿಂದ ಹೊರ ಬಿದ್ದ ‘ಲಾಪತಾ ಲೇಡೀಸ್’
‘ಲಾಪತಾ ಲೇಡೀಸ್’ ಸಿನಿಮಾಗೆ ಹಲವು ಗೌರವಗಳು ಸಿಕ್ಕಿವೆ. ಕಳೆದ ವರ್ಷ ಆಸ್ಕರ್ ಸ್ಪರ್ಧೆಗೆ ಭಾರತದಿಂದ ಈ ಸಿನಿಮಾ ಅಧಿಕೃತವಾಗಿ ಆಯ್ಕೆ ಆಗಿತ್ತು. ಆದರೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಈ ಸಿನಿಮಾದಲ್ಲಿ ಸ್ಪರ್ಶ್ ಶ್ರೀವಾಸ್ತವ್, ನಿತಾಂಷಿ ಘೋಯಲ್, ಪ್ರತಿಭಾ ರಂಟಾ, ರವಿ ಕಿಶನ್ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.