ಟಿವಿ9 ನೆಟ್ವರ್ಕ್ ನಡೆಸುತ್ತಿರುವ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ ಮೂರನೇ ದಿನವಾದ ಮಂಗಳವಾರ (ಫೆಬ್ರವರಿ 27) ಆಮಿರ್ ಖಾನ್ ಹಾಗೂ ಅವರ ಮಾಜಿ ಪತ್ನಿ ಕಿರಣ್ ರಾವ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿ ಆದರು. ಕಿರಣ್ ರಾವ್ ನಿರ್ದೇಶನದ ಹಾಗೂ ಆಮಿರ್ ಖಾನ್ (Aamir Khan) ನಿರ್ಮಾಣದ ‘ಲಾಪತಾ ಲೇಡಿಸ್’ ಚಿತ್ರದ ಪ್ರಮೋಷನ್ಗಳಲ್ಲಿ ಅವರು ಬ್ಯುಸಿ ಇರುವುದರಿಂದ ಈ ಕಾರ್ಯಕ್ರಮಕ್ಕೆ ನೇರವಾಗಿ ಬರಲು ಸಾಧ್ಯವಾಗಿಲ್ಲ. ಹೀಗಾಗಿ, ವಿಡಿಯೋ ಕಾಲ್ ಮೂಲಕ ಇವರು ಹಾಜರಿ ಹಾಕಿದ್ದಾರೆ. ಈ ವೇಳೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಕಿರಣ್ ರಾವ್ ಈ ಮೊದಲು ‘ಧೋಬೀ ಘಾಟ್’ ಸಿನಿಮಾ (2011) ನಿರ್ದೇಶನ ಮಾಡಿದ್ದರು. ಈ ಚಿತ್ರವನ್ನು ಆಮಿರ್ ಖಾನ್ ನಿರ್ಮಾಣ ಮಾಡಿದ್ದರು. ಇದಾದ ದಶಕಗಳ ಬಳಿಕ ಇವರು ‘ಲಾಪತಾ ಲೇಡಿಸ್’ ಚಿತ್ರಕ್ಕಾಗಿ ಮತ್ತೆ ಒಂದಾಗಿದ್ದಾರೆ. ಇಷ್ಟೊಂದು ವಿಳಂಬ ಆಗಿದ್ದು ಏಕೆ ಎಂಬ ಪ್ರಶ್ನೆಗೆ ಕಿರಣ್ ರಾವ್ ಉತ್ತರ ನೀಡಿದ್ದಾರೆ. ‘ಧೋಬೀ ಘಾಟ್ ಸಿನಿಮಾ ರಿಲೀಸ್ ಆದ ವರ್ಷವೇ ಆಜಾದ್ ಜನಿಸಿದ. ಅಮ್ಮನಾಗಬೇಕು ಎಂಬುದು ನನ್ನ ಕನಸಾಗಿತ್ತು. ಹೀಗಾಗಿ, ಸಾಕಷ್ಟು ಸಮಯ ಆಜಾದ್ ಜೊತೆ ಕಳೆದೆ. ಈ ಕಾರಣಕ್ಕೆ ಸಾಕಷ್ಟು ಸಮಯ ಹಿಡಿಯಿತು’ ಎಂದಿದ್ದಾರೆ ಕಿರಣ್ ರಾವ್.
‘ಹಲವು ವರ್ಷ ಕಳೆದ ಬಳಿಕ ಕಿರಣ್ಗೆ ಸಿನಿಮಾ ಮಾಡಿಲ್ಲ ಅನ್ನೋದು ಅರಿವಾಯಿತು. ಹೀಗಾಗಿ, ಅವರು ಸಿನಿಮಾ ಮಾಡಲು ಮುಂದಾದರು. ಎಷ್ಟೇ ಪ್ರಯತ್ನಿಸಿದರೂ ಸ್ಕ್ರಿಪ್ಟ್ ಮಾಡೋಕೆ ಆಗಿಲ್ಲ. 10 ವರ್ಷಗಳಿಂದ ಸಿನಿಮಾ ಮಾಡಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿರಲಿಲ್ಲ. ಏಕೆಂದರೆ ಆಜಾದ್ನ ಬಿಡಲು ಕಿರಣ್ ಸಿದ್ಧ ಇರಲಿಲ್ಲ’ ಎಂದು ವಿವರಿಸಿದ್ದಾರೆ ಆಮಿರ್ ಖಾನ್.
ಇದನ್ನೂ ಓದಿ: ಆಮಿರ್ ಖಾನ್ ಸಿನಿಮಾ ನಿರ್ಮಾಪಕನಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್
‘ಲೇಡಿಸ್ ಲಾಪತಾ’ ಚಿತ್ರಕ್ಕೆ ಆಮಿರ್ ಖಾನ್ ನಿರ್ಮಾಪಕ. ಹೀಗಾಗಿ, ಸಿನಿಮಾದ ಸ್ಕ್ರಿಪ್ಟ್ ವಿಚಾರದಲ್ಲಿ ಅವರು ತಲೆ ಹಾಕಿದರೇ ಎನ್ನುವ ಪ್ರಶ್ನೆ ಮೂಡೋದು ಸಹಜ. ಇದಕ್ಕೆ ಕಿರಣ್ ಉತ್ತರ ನೀಡಿದ್ದಾರೆ. ‘ಆಮಿರ್ ಖಾನ್ಗೆ ಈ ಚಿತ್ರದ ಕಥೆ ಸಿಕ್ಕಿತ್ತು. ಅವರು ನನ್ನ ಬಳಿ ಇದನ್ನು ಚರ್ಚಿಸಿದರು. ನನಗೆ ಕಥೆ ಇಷ್ಟವಾಯಿತು. ನಾನು ಕಥೆಯನ್ನು ಬೆಳೆಸಿದೆ. ಆಮಿರ್ ಖಾನ್ ಒಮ್ಮೆ ನಿರ್ದೇಶಕರನ್ನು ಆಯ್ಕೆ ಮಾಡಿದ ಮೇಲೆ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡುತ್ತಾರೆ. ಅವರು ಸೆಟ್ಗೂ ಬರಲ್ಲ’ ಎಂದಿದ್ದಾರೆ ಕಿರಣ್. ‘ನಿಮಗೆ ಕೆಲಸ ಗೊತ್ತಿದ್ದ ಮೇಲೆ ನಾನೇಕೆ ಸೆಟ್ಗೆ ಬಂದು ಸಮಯ ವ್ಯರ್ಥ ಮಾಡಲಿ’ ಎಂದು ಕೇಳಿದ್ದಾರೆ ಆಮಿರ್ ಖಾನ್.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ