ಆಮಿರ್​, ಸಲ್ಮಾನ್, ಶಾರುಖ್ ಜೊತೆಯಾಗಿ ಸಿನಿಮಾ ಮಾಡೋದು ಖಚಿತ

|

Updated on: Dec 08, 2024 | 9:04 PM

ಆಮಿರ್​ ಖಾನ್, ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಅವರು ಒಟ್ಟಿಗೆ ನಟಿಸುವ ಬಗ್ಗೆ ಮಾತುಕಥೆ ನಡೆದಿದೆ. ಆರು ತಿಂಗಳ ಹಿಂದೆಯೇ ಈ ಬಗ್ಗೆ ಮೂವರೂ ಚರ್ಚೆ ಮಾಡಿದ್ದಾರೆ. ಆ ಕುರಿತು ಈಗ ಆಮಿರ್​ ಖಾನ್​ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ನಾವು ಮೂವರೂ ಖಂಡಿತವಾಗಿಯೂ ಸಿನಿಮಾ ಮಾಡುತ್ತೇವೆ ಎಂದು ಆಮಿರ್​ ಖಾನ್ ಸಿಹಿ ಸುದ್ದಿ ನೀಡಿದ್ದಾರೆ.

ಆಮಿರ್​, ಸಲ್ಮಾನ್, ಶಾರುಖ್ ಜೊತೆಯಾಗಿ ಸಿನಿಮಾ ಮಾಡೋದು ಖಚಿತ
ಆಮಿರ್​ ಖಾನ್​, ಸಲ್ಮಾನ್ ಖಾನ್​, ಶಾರುಖ್​ ಖಾನ್​
Follow us on

ಬಾಲಿವುಡ್​ನಲ್ಲಿ ಶಾರುಖ್​ ಖಾನ್, ಆಮಿರ್​ ಖಾನ್​ ಹಾಗೂ ಸಲ್ಮಾನ್ ಖಾನ್​ ಅವರು ಹಲವು ವರ್ಷಗಳಿಂದ ಆಳ್ವಿಕೆ ಮಾಡಿದ್ದಾರೆ. ಬೇರೆ ನಟರು ಇದ್ದರೂ ಕೂಡ ಈ ಖಾನ್​ತ್ರಯರ ತೂಕ ಅಧಿಕ ಎನ್ನಬಹುದು. ಆದರೆ ಈವರೆಗೂ ಶಾರುಖ್​ ಖಾನ್​, ಸಲ್ಮಾನ್ ಖಾನ್ ಮತ್ತು ಆಮಿರ್​ ಖಾನ್ ಅವರು ಜೊತೆಯಾಗಿ ಸಿನಿಮಾ ಮಾಡಿಲ್ಲ. ಮೂವರೂ ಒಟ್ಟಿಗೆ ತೆರೆ ಹಂಚಿಕೊಳ್ಳಬೇಕು ಎಂಬ ಆಸೆ ಅಭಿಮಾನಿಗಳಿಗೆ ಇದೆ. ಗುಡ್​ ನ್ಯೂಸ್ ಏನೆಂದರೆ, ಶೀಘ್ರದಲ್ಲೇ ಅಭಿಮಾನಿಗಳ ಆಸೆ ಈಡೇರಲಿದೆ. ಹಾಗಂತ ಇದು ಗಾಸಿಪ್ ಅಲ್ಲ. ಸ್ವತಃ ಆಮಿರ್ ಖಾನ್ ಅವರು ಈ ಬಗ್ಗೆ ಮಾತನಾಡಿದ್ದಾರೆ.

ಆಮಿರ್ ಖಾನ್ ಅವರು ಇತ್ತೀಚಿನ ದಿನಗಳಲ್ಲಿ ಸಿನಿಮಾಗಳ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ. ನಟನೆಯಿಂದ ನಿವೃತ್ತಿ ಪಡೆಯಬೇಕು ಎಂಬ ಮಾತನ್ನು ಕೂಡ ಅವರು ಹಲವು ಬಾರಿ ಹೇಳಿದ್ದಾರೆ. ಆದ್ದರಿಂದ ನಟನೆಗೆ ಗುಡ್​ ಬೈ ಹೇಳುವುದಕ್ಕೂ ಮುನ್ನ ಶಾರುಖ್​ ಖಾನ್​ ಮತ್ತು ಸಲ್ಮಾನ್​ ಖಾನ್ ಜೊತೆ ಸಿನಿಮಾ ಮಾಡಬೇಕು ಎಂಬ ಆಸೆ ಆಮಿರ್ ಖಾನ್​ ಅವರ ಮನದಲ್ಲಿ ಮೂಡಿದೆ. ಆ ಬಗ್ಗೆ ಅವರು ಈಗಾಗಲೇ ಚರ್ಚೆ ಕೂಡ ಆರಂಭಿಸಿದ್ದಾರೆ.

ಸೌದಿ ಅರೇಬಿಯಾದಲ್ಲಿ ನಡೆದ ರೆಡ್​ ಸೀ ಫಿಲ್ಮ್​ ಫೆಸ್ಟಿವಲ್​ನಲ್ಲಿ ಆಮಿರ್ ಖಾನ್​ ಅವರು ಭಾಗವಹಿಸಿದ್ದಾರೆ. ಈ ವೇಳೆ ಅವರು ಮಾಧ್ಯಮದ ಜೊತೆ ಮಾತನಾಡಿದ್ದಾರೆ. ‘6 ತಿಂಗಳ ಹಿಂದೆ ಶಾರುಖ್ ಖಾನ್ ಮತ್ತು ಸಲ್ಮಾನ್​ ಖಾನ್ ಅವರನ್ನು ನಾನು ಭೇಟಿಯಾದೆ. ಆ ವಿಷಯ ತೆಗೆದಿದ್ದೇ ನಾನು. ನಾವು ಮೂರು ಜನರು ಒಟ್ಟಿಗೆ ಸಿನಿಮಾ ಮಾಡಲಿಲ್ಲ ಎಂದರೆ ಬೇಸರ ಆಗುತ್ತದೆ. ನನ್ನ ಮಾತಿಗೆ ಸಲ್ಮಾನ್ ಖಾನ್​ ಮತ್ತು ಶಾರುಖ್ ಖಾನ್ ಅವರ ಸಹಮತ ಕೂಡ ಇದೆ’ ಎಂದಿದ್ದಾರೆ ಸಲ್ಮಾನ್ ಖಾನ್.

ಇದನ್ನೂ ಓದಿ: ಆಮಿರ್ ಖಾನ್​, ಕಿಚ್ಚ ಸುದೀಪ್ ಭೇಟಿ; ವೈರಲ್ ಫೋಟೋ ಬೆನ್ನಲ್ಲೇ ದೊಡ್ಡ ಸುದ್ದಿ ನಿರೀಕ್ಷೆ

‘ನಮ್ಮ ಮೂವರ ಸಿನಿಮಾ ಸೆಟ್ಟೇರುತ್ತದೆ ಎಂಬ ಭರವಸೆ ನನಗೆ ಇದೆ. ಅದಕ್ಕೆ ಸೂಕ್ತವಾದ ಕಥೆ ಬೇಕು. ಸರಿಯಾದ ಸ್ಕ್ರಿಪ್ಟ್​ ಸಿಗಬೇಕು ಎಂದು ನಾವು ಕಾಯುತ್ತಿದ್ದೇವೆ. ನಾವೆಲ್ಲರೂ ಅದರ ನಿರೀಕ್ಷೆಯಲ್ಲಿ ಇದ್ದೇವೆ’ ಎಂದು ಆಮಿರ್ ಖಾನ್​ ಅವರು ಹೇಳಿದ್ದಾರೆ. ಈ ಮಾತು ಕೇಳಿ ಅಭಿಮಾನಿಗಳಿಗೆ ಖುಷಿ ಆಗಿದೆ. ಆಮಿರ್ ಖಾನ್​ ಅವರು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ‘ಲಾಲ್​ ಸಿಂಗ್ ಚಡ್ಡಾ’ ಸಿನಿಮಾ ಫ್ಲಾಪ್ ಆಯಿತು. ಆ ಬಳಿಕ ಅವರು ಸಿನಿಮಾಗಳ ಆಯ್ಕೆಯಲ್ಲಿ ವಿಳಂಬ ಮಾಡಲು ಆರಂಭಿಸಿದರು. ಸದ್ಯಕ್ಕೆ ‘ಸಿತಾರೆ ಜಮೀನ್ ಪರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.