ನಟ ಆಮಿರ್ ಖಾನ್ (Aamir Khan) ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರು ಕಾಂಟ್ರವರ್ಸಿ ಕಾರಣದಿಂದ ಸುದ್ದಿ ಆಗುವುದು ಹೆಚ್ಚಿದೆ. ಒಂದು ಕಾಲದಲ್ಲಿ ‘ಲಗಾನ್’, ‘ಮಂಗಲ್ ಪಾಂಡೆ’, ‘ರಂಗ್ ದೇ ಬಸಂತಿ’ ಮುಂತಾದ ದೇಶಭಕ್ತಿ ಸಿನಿಮಾ ಮಾಡಿದ ಅವರು ಈಗ ದೇಶವಿರೋಧಿ ಎಂಬ ರೀತಿಯಲ್ಲಿ ಬಿಂಬಿಸಲ್ಪಡುತ್ತಿದ್ದಾರೆ. ಅದೇ ಕಾರಣಕ್ಕಾಗಿ ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಚಡ್ಡಾ’ (Laal Singh Chaddha) ಸಿನಿಮಾಗೆ ಜನರಿಂದ ವಿರೋಧ ವ್ಯಕ್ತವಾಗಿದೆ. ಈ ಹಿಂದೆ ಅಸಹಿಷ್ಣತೆ ಕುರಿತು ಆಮಿರ್ ಖಾನ್ ನೀಡಿದ್ದ ಹೇಳಿಕೆಯನ್ನೇ ಇಟ್ಟುಕೊಂಡು ಈಗಲೂ ಅವರ ಚಿತ್ರವನ್ನು ಬಹಿಷ್ಕರಿಸುವ ಟ್ರೆಂಡ್ ಜಾರಿಯಲ್ಲಿದೆ. ‘ಲಾಲ್ ಸಿಂಗ್ ಚಡ್ಡಾ’ ಚಿತ್ರಕ್ಕೂ ಬಹಿಷ್ಕಾರದ ಬಿಸಿ ತಟ್ಟಿದೆ. ಇದರ ನಡುವೆಯೂ ಈ ಸಿನಿಮಾ ‘ಆಸ್ಕರ್’ (Oscar) ಸಂಸ್ಥೆಯ ಗಮನ ಸೆಳೆದಿದೆ. ಇದರಿಂದ ಆಮಿರ್ ಖಾನ್ ಅಭಿಮಾನಿಗಳು ಖುಷಿ ಆಗಿದ್ದಾರೆ.
ಈಗಾಗಲೇ ತಿಳಿದಿರುವಂತೆ ಹಾಲಿವುಡ್ನ ‘ಫಾರೆಸ್ಟ್ ಗಂಪ್’ ಸಿನಿಮಾದ ಹಿಂದಿ ರಿಮೇಕ್ ಆಗಿ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಮೂಡಿಬಂದಿದೆ. ಇಂಗ್ಲಿಷ್ನಲ್ಲಿ ಟಾಮ್ ಹ್ಯಾಂಕ್ಸ್ ಮಾಡಿದ ಪಾತ್ರವನ್ನು ಹಿಂದಿಯಲ್ಲಿ ಆಮಿರ್ ಖಾನ್ ಮಾಡಿದ್ದಾರೆ. 1994ರಲ್ಲಿ ತೆರೆಕಂಡ ‘ಫಾರೆಸ್ಟ್ ಗಂಪ್’ ಚಿತ್ರ 6 ಆಸ್ಕರ್ ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು. 13 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿತ್ತು.
‘ಫಾರೆಸ್ಟ್ ಗಂಪ್’ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡಿರುವ ರೀತಿಗೆ ಆಸ್ಕರ್ ಸಂಸ್ಥೆ (ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಆ್ಯಂಡ್ ಸೈನ್ಸಸ್) ಮನಸೋತಿದೆ. ಅದರ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಲಾಗಿದೆ. ಎರಡೂ ಸಿನಿಮಾದ ಕೆಲವು ದೃಶ್ಯಗಳು ಹಂಚಿಕೊಳ್ಳಲಾಗಿದೆ.
‘ಲಾಲ್ ಸಿಂಗ್ ಚಡ್ಡಾ’ ಚಿತ್ರಕ್ಕೆ ಅದ್ವೈತ್ ಚಂದನ್ ನಿರ್ದೇಶನ ಮಾಡಿದ್ದಾರೆ. ಆಮಿರ್ ಖಾನ್ಗೆ ಜೋಡಿಯಾಗಿ ಕರೀನಾ ಕಪೂರ್ ಖಾನ್ ನಟಿಸಿದ್ದಾರೆ. ನಾಗ ಚೈತನ್ಯ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಆಗಸ್ಟ್ 11ರಂದು ಬಿಡುಗಡೆಯಾದ ಈ ಚಿತ್ರ ಮೊದಲ ದಿನ 11.70 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಎರಡನೇ ದಿನವಾದ ಶುಕ್ರವಾರ ಕೇವಲ 7.26 ಕೋಟಿ ರೂಪಾಯಿ ಆದಾಯ ಬಂದಿದೆ.
ಈ ಸಿನಿಮಾದಲ್ಲಿನ ಕೆಲವು ದೃಶ್ಯಗಳಿಗೆ ವಿರೋಧ ವ್ಯಕ್ತವಾಗುತ್ತಿದೆ. ಭಾರತೀಯ ಸೇನೆಗೆ ಅವಮಾನ ಮಾಡಲಾಗಿದೆ ಎಂದು ದೆಹಲಿ ಮೂಲದ ವಕೀಲರೊಬ್ಬರು ದೂರು ನೀಡಿದ್ದಾರೆ. ಈ ಕಾರಣದಿಂದ ಮುಂದಿನ ದಿನಗಳಲ್ಲಿ ‘ಲಾಲ್ ಸಿಂಗ್ ಚಡ್ಡಾ’ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:50 pm, Sat, 13 August 22