
ಆಮಿರ್ ಖಾನ್ (Aamir Khan) ಅದ್ಭುತವಾದ ನಟ ಆಗಿರುವ ಜೊತೆಗೆ ಅದ್ಭುತ ಸಿನಿಮಾ ಪ್ರೇಮಿ. ಇತರೆ ಖಾನ್ಗಳು ಕಮರ್ಶಿಯಲ್ ಸಿನಿಮಾ ಕೊಟ್ಟು ಬಾಕ್ಸ್ ಆಫೀಸ್ ಯಶಸ್ಸಿನ ಹಿಂದೆ ಓಡುತ್ತಿದ್ದರೆ ಆಮಿರ್ ಖಾನ್ ಮಾತ್ರ ಬಾಕ್ಸ್ ಆಫೀಸ್ ಕಡೆಗೆ ತಿರುಗಿ ಸಹ ನೋಡುವುದಿಲ್ಲ, ಅವರ ಗುರಿ ಏನಿದ್ದರೂ ಒಳ್ಳೆಯ ಸಿನಿಮಾ ಕೊಡಬೇಕು, ಹೊಸ ಪ್ರಯೋಗಗಳನ್ನು ಮಾಡಬೇಕು ಎಂಬುದೇ ಆಗಿರುತ್ತದೆ. ಸಿನಿಮಾ ಬಗ್ಗೆ ಕಲೆಯಾಗಿ ಮಾತ್ರವಲ್ಲ ಒಂದು ಉದ್ಯಮವಾಗಿಯೂ ಭಿನ್ನ ರೀತಿಯ ಆಲೋಚನೆಗಳನ್ನೇ ಅವರು ಇರಿಸಿಕೊಂಡಿದ್ದಾರೆ.
ಇತ್ತೀಚೆಗೆ ಮುಂಬೈನಲ್ಲಿ ನಡೆದ ವೇವ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಆಮಿರ್ ಖಾನ್, ಸಿನಿಮಾ ಉದ್ಯಮದ ಬಗ್ಗೆ ಚರ್ಚೆ ಮಾಡಿದರು. ಪಿವಿಆರ್ ಸಿನಿಮಾಸ್ ಮಾಲೀಕ ಅಜಯ್ ಬಿಜಲಿ, ಕೆಲ ನಿರ್ಮಾಪಕರು ಸಹ ಭಾಗಿ ಆಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಆಮಿರ್ ಖಾನ್ ಸಿನಿಮಾ ಉದ್ಯಮದ ಬಗ್ಗೆ ತಮ್ಮ ಅಭಿಪ್ರಾಯ ಮುಂದಿಟ್ಟಿದ್ದಾರೆ.
‘ನೂರಾ ನಲವತ್ತು ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಇರುವ ಸ್ಕ್ರೀನ್ಗಳ ಸಂಖ್ಯೆ 10000 ಅಷ್ಟೆ. ಅದರಲ್ಲಿ 5000 ಕ್ಕೂ ಹೆಚ್ಚು ಚಿತ್ರಮಂದಿರಗಳು ದಕ್ಷಿಣ ಭಾರತದ ರಾಜ್ಯಗಳಲ್ಲಿವೆ. ಇನ್ನುಳಿದ ಎಲ್ಲ ರಾಜ್ಯಗಳಿಗೂ ಸೇರಿ 5 ಸಾವಿರ ಚಿತ್ರಮಂದಿರಗಳು ಅಥವಾ ಸ್ಕ್ರೀನ್ಗಳು ಇವೆ. ಎಷ್ಟೋ ಜಿಲ್ಲೆಗಳಲ್ಲಿ ಒಂದು ಚಿತ್ರಮಂದಿರ ಸಹ ಇಲ್ಲ. ಹೀಗಿದ್ದಮೇಲೆ ಪ್ರೇಕ್ಷಕ ಎಲ್ಲಿ ಸಿನಿಮಾ ನೋಡುತ್ತಾನೆ’ ಎಂದು ಆಮಿರ್ ಖಾನ್ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ:ಆಮಿರ್ ಖಾನ್ಗೆ ‘ಮಿಸ್ಟರ್ ಪರ್ಫೆಕ್ಷನಿಸ್ಟ್’ ಹೆಸರು ಕೊಟ್ಟಿದ್ದು ಇದೇ ವ್ಯಕ್ತಿ
ಒಟಿಟಿಗಳ ವಿಷಯವನ್ನೂ ಪ್ರಸ್ತಾಪಿಸಿದ ಆಮಿರ್ ಖಾನ್, ‘ನಾನು ಒಂದು ಕಾರು ತಯಾರಿಸಿದ್ದೇನೆ. ಅದನ್ನು ಕೊಳ್ಳುವಂತೆ ಗ್ರಾಹಕರಿಗೆ ಹೇಳುತ್ತೇನೆ. ನೀವು ಇಂದು ನನ್ನ ಕಾರು ಖರೀದಿ ಮಾಡದೇ ಇದ್ದರೆ ಇನ್ನೊಂದು ವಾರ ಅಥವಾ ತಿಂಗಳಲ್ಲಿ ಅದೇ ಕಾರನ್ನು ನಾನು ನಿಮ್ಮ ಮನೆಗೆ ತೆಗೆದುಕೊಂಡು ಬಂದು ಕೊಡುತ್ತೇನೆ ಅದೂ ಉಚಿತವಾಗಿ ಎಂದು ಹೇಳಿದರೆ ಆ ಗ್ರಾಹಕ ಒಂದು ತಿಂಗಳು ಕಾದು ಮನೆಯಲ್ಲೇ ಉಚಿತವಾಗಿ ಡೆಲಿವರಿ ಪಡೆಯುತ್ತಾನೆ. ಸಿನಿಮಾಗಳ ಕತೆಯೂ ಇದೇ ಆಗಿದೆ. ಸಿನಿಮಾ ಬಿಡುಗಡೆ ಆದ ಒಂದು ವಾರ ಅಥವಾ ತಿಂಗಳ ಬಳಿಕ ಒಟಿಟಿಯಲ್ಲಿ ಅಥವಾ ಟಿವಿಯಲ್ಲಿ ಸುಲಭವಾಗಿ ನೋಡುವ ಅವಕಾಶ ಇರುವಾಗ ಆತ ಏಕೆ ಚಿತ್ರಮಂದಿರಕ್ಕೆ ಬರುತ್ತಾನೆ’ ಎಂದು ಆಮಿರ್ ಖಾನ್ ಪ್ರಶ್ನೆ ಮಾಡಿದ್ದಾರೆ.
‘ನಮ್ಮ ದೊಡ್ಡ ಬಾಕ್ಸ್ ಆಫೀಸ್ ಹಿಟ್ ಸಿನಿಮಾಗಳು ಸಹ ತಲುಪಿರುವುದು ಕೇವಲ 2% ಜನರಿಗೆ ಮಾತ್ರ. ಇನ್ನುಳಿದ 98% ಜನ ಸಿನಿಮಾ ನೋಡುತ್ತಿಲ್ಲ ಅಥವಾ ಬೇರೆ ಕಡೆ ನೋಡುತ್ತಿದ್ದಾರೆ’ ಎಂದ ಆಮಿರ್ ಖಾನ್, ‘ನಾವೇ ಸಿನಿಮಾಗಳನ್ನು ಮನೆಗೆ ಡೆಲಿವರಿ ಮಾಡುವ ಮೂಲಕ ಜನರಿಗೆ ಚಿತ್ರಮಂದಿರಕ್ಕೆ ಬರಬೇಡಿ ಎಂದು ಪರೋಕ್ಷವಾಗಿ ಹೇಳುತ್ತಿದ್ದೇವೆ. ಹೀಗಿರುವಾಗ ಅವರೇಕೆ ಚಿತ್ರಮಂದಿರಕ್ಕೆ ಬರುತ್ತಾರೆ’ ಎಂದಿದ್ದಾರೆ ಆಮಿರ್ ಖಾನ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ