ಆಮಿರ್ ಖಾನ್ (Aamir Khan) ಅವರ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಕೋಟ್ಯಂತರ ರೂಪಾಯಿ ಬಿಸ್ನೆಸ್ ಮಾಡುತ್ತಿದ್ದವು. ಆದರೆ, ಈಗ ಕಾಲ ಬದಲಾಗಿದೆ. ಆಮಿರ್ ಖಾನ್ ಸಿನಿಮಾಗಳು ಸೋಲುತ್ತಿವೆ. ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಹೀನಾಯವಾಗಿ ಸೋತಿತು. ಬಹಳ ಪ್ರೀತಿಯಿಂದ ಈ ಚಿತ್ರವನ್ನು ಮಾಡಿದ್ದರು ಆಮಿರ್ ಖಾನ್. ಆದರೆ, ಪ್ರೇಕ್ಷಕರು ಕೈ ಹಿಡಿಯಲಿಲ್ಲ. ಈಗ ಆಮಿರ್ ಖಾನ್ ಅವರು ನಟನೆಯಿಂದ ಬ್ರೇಕ್ ಪಡೆಯಲು ನಿರ್ಧರಿಸಿದ್ದಾರೆ. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
‘ನಟನಾಗಿ ಸಿನಿಮಾ ಮಾಡುತ್ತಿದ್ದೇನೆ ಎಂದಾಗ ನಾನು ಅದರಲ್ಲೇ ಕಳೆದು ಹೋಗುತ್ತೇನೆ. ಆಗ ನನ್ನ ಜೀವನದಲ್ಲಿ ಬೇರೆ ಏನೂ ಇರುವುದಿಲ್ಲ. ‘ಲಾಲ್ ಸಿಂಗ್ ಚಡ್ಡಾ’ ನಂತರ ‘ಚಾಂಪಿಯನ್ಸ್’ ಹೆಸರಿನ ಸಿನಿಮಾ ಮಾಡಬೇಕಿತ್ತು. ಅದು ಅದ್ಭುತ ಸ್ಕ್ರಿಪ್ಟ್ ಆಗಿತ್ತು. ಆದರೆ, ನನಗೆ ಬ್ರೇಕ್ ತೆಗೆದುಕೊಳ್ಳಬೇಕು ಎಂದು ಅನಿಸುತ್ತಿದೆ. ನನ್ನ ಕುಟುಂಬದ ಜತೆ ಸಮಯ ಕಳೆಯಬೇಕಿದೆ’ ಎಂದು ಆಮಿರ್ ಖಾನ್ ಎಎನ್ಐಗೆ ಹೇಳಿರುವುದಾಗಿ ವರದಿ ಆಗಿದೆ.
‘ಕಳೆದ 35 ವರ್ಷಗಳಿಂದ ದುಡಿಯುತ್ತಿದ್ದೇನೆ. ಅಷ್ಟೂ ವರ್ಷ ನಾನು ನನ್ನ ಕೆಲಸದಮೇಲೆ ಗಮನ ಹರಿಸಿದೆ. ನನ್ನ ಜತೆ ಕ್ಲೋಸ್ ಆಗಿರುವವರಿಗೆ ನಾನು ಅನ್ಯಾಯ ಮಾಡುತ್ತಿದ್ದೇನೆ ಅನಿಸಿತು. ಅವರ ಜತೆ ಸಮಯ ಕಳೆಯಬೇಕಿದೆ. ಒಂದೂವರೆ ವರ್ಷ ನಾನು ಸಿನಿಮಾ ಮಾಡುವುದಿಲ್ಲ’ ಎಂದಿದ್ದಾರೆ ಆಮಿರ್ ಖಾನ್.
ಇದನ್ನೂ ಓದಿ: ಆಮಿರ್ ಖಾನ್ ಮಗಳಿಗೆ ನಿರಂತರವಾಗಿ ಕಾಡುತ್ತಿದೆ ಈ ಸಮಸ್ಯೆ; ಹೊರ ಬರಲು ದಾರಿ ಕಾಣದೆ ಒದ್ದಾಡುತ್ತಿದ್ದಾರೆ ಇರಾ
2018ರಲ್ಲಿ ಶಾರುಖ್ ಖಾನ್ ನಟನೆಯ ‘ಝೀರೋ’ ಸಿನಿಮಾ ತೆರೆಗೆ ಬಂತು. ಈ ಚಿತ್ರ ಫ್ಲಾಪ್ ಆಯಿತು. ಆ ಬಳಿಕ ಶಾರುಖ್ ಖಾನ್ ಅವರು ಚಿತ್ರರಂಗದಿಂದ ನಾಲ್ಕು ವರ್ಷ ಬ್ರೇಕ್ ತೆಗೆದುಕೊಂಡರು. ಈಗ ಆಮಿರ್ ಖಾನ್ ಕೂಡ ಇದೇ ಹಾದಿ ಅನುಸರಿಸುತ್ತಿದ್ದಾರೆ. ‘ಲಾಲ್ ಸಿಂಗ್ ಚಡ್ಡಾ’ ಸೋಲು ಆಮಿರ್ ಖಾನ್ಗೆ ಸಾಕಷ್ಟು ಬೇಸರ ಮೂಡಿಸಿದೆ ಎನ್ನಲಾಗಿದೆ. ಇದಲ್ಲದೆ, ಅವರ ಪ್ರತಿ ಸಿನಿಮಾ ತೆರೆಕಾಣುವಾಗ ಬೈಕಾಟ್ ಟ್ರೆಂಡ್ ಶುರುವಾಗುತ್ತದೆ. ಅವರ ಅಸಹಿಷ್ಣುತೆ ಹೇಳಿಕೆ ಇಟ್ಟುಕೊಂಡು ಈಗಲೂ ಟೀಕೆ ಮಾಡಲಾಗುತ್ತಿದೆ. ಇದು ಕೂಡ ಆಮಿರ್ ಖಾನ್ ಅವರಿಗೆ ನೋವು ತಂದಿದೆ. ಈ ಎಲ್ಲಾ ಕಾರಣದಿಂದ ಅವರು ಬ್ರೇಕ್ ಪಡೆಯುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.