
ಪಹಲ್ಗಾಮ್ (Pahalgam) ದಾಳಿಯ ಬಳಿಕ ಪಾಕಿಸ್ತಾನದ ಜೊತೆಗೆ ರಾಜತಾಂತ್ರಿಕ ಯುದ್ಧವನ್ನು ಭಾರತ ಆರಂಭಿಸಿದೆ. ಪಾಕಿಸ್ತಾನಕ್ಕೆ ಹರಿಯುವ ಸಿಂಧು ನದಿಯ ನೀರನ್ನು ನಿಲ್ಲಿಸಲಾಗುತ್ತಿದೆ. ಪಾಕಿಸ್ತಾನಿ ನಟರು, ತಂತ್ರಜ್ಞರು ಭಾರತದ ಸಿನಿಮಾಗಳಲ್ಲಿ ಕೆಲಸ ಮಾಡುವುದಕ್ಕೆ ನಿಷೇಧ ಹೇರಲಾಗಿದೆ. ಪಾಕಿಸ್ತಾನಿ ನಟ ಫಹಾದ್ ಖಾನ್ ನಟಿಸಿರುವ ಭಾರತದ ಸಿನಿಮಾ ‘ಅಬಿರ್ ಗುಲಾಲ್’ ಸಿನಿಮಾದ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಇಲಾಖೆ ಈಗಾಗಲೇ ಹೇಳಿದರು. ಇದು ಚಿತ್ರತಂಡಕ್ಕೆ ಭಾರಿ ದೊಡ್ಡ ಪೆಟ್ಟು ನೀಡಿದೆ. ಇದೀಗ ಈ ಸಿನಿಮಾ ಅನ್ನು ಪಾಕಿಸ್ತಾನವೂ ಸಹ ನಿಷೇಧಿಸಿದೆ!
ಪಾಕಿಸ್ತಾನದ ಸಿನಿಮಾ ವಿತರಕ ಸತೀಶ್ ಆನಂದ್ ಈ ಬಗ್ಗೆ ಮಾತನಾಡಿದ್ದು, ‘ಅಬಿರ್ ಗುಲಾಲ್’ ಸಿನಿಮಾ ಅನ್ನು ಪಾಕಿಸ್ತಾನದಲ್ಲಿ ಬಿಡುಗಡೆ ಮಾಡಲಾಗುತ್ತಿಲ್ಲ. ಆ ಸಿನಿಮಾನಲ್ಲಿ ಭಾರತದ ನಾಯಕಿ ಇದ್ದಾಳೆಂಬ ಕಾರಣಕ್ಕೆ ಸಿನಿಮಾ ಬಿಡುಗಡೆಗೆ ಅವಕಾಶ ನೀಡಲಾಗಿಲ್ಲ’ ಎಂದಿದ್ದಾರೆ. ‘ಕೆಟ್ಟ ರಿಲೀಸ್ ಟೈಮಿಂಗ್ ನಿಂದಾಗಿ ಸಿನಿಮಾದ ನಿರ್ಮಾಪಕರು, ವಿತರಕರು ಭಾರಿ ನಷ್ಟ ಅನುಭವಿಸುವಂತಾಗಿದೆ’ ಎಂದಿದ್ದಾರೆ. ಸಿನಿಮಾದಲ್ಲಿ ಪಾಕಿಸ್ತಾನಿ ನಟ ಇದ್ದಾನೆಂದು ಭಾರತದಲ್ಲಿ, ಅದೇ ಸಿನಿಮಾದಲ್ಲಿ ಭಾರತೀಯ ನಟಿ ಇದ್ದಾಳೆಂದು ಪಾಕಿಸ್ತಾನದಲ್ಲಿ ‘ಅಬಿರ್ ಗುಲಾಲ್’ ಸಿನಿಮಾಕ್ಕೆ ನಿಷೇಧ ಹೇರಲಾಗಿದೆ.
ಫಹಾದ್ ಖಾನ್, ಪಾಕಿಸ್ತಾನದ ಸಿನಿಮಾ ನಟ. ಒಳ್ಳೆಯ ನಟರಾಗಿರುವ ಜೊತೆಗೆ ಹ್ಯಾಂಡ್ಸಮ್ ನಟರೂ ಸಹ ಆಗಿದ್ದಾರೆ. ಈ ಹಿಂದೆ ಭಾರತದ ಹಲವು ಸಿನಿಮಾಗಳಲ್ಲಿ ಫಹಾದ್ ಖಾನ್ ನಟಿಸಿದ್ದಾರೆ. ಕೆಲ ಸಿನಿಮಾಗಳು ಹಿಟ್ ಸಹ ಆಗಿವೆ. ಫಹಾದ್ ಖಾನ್, ಪಾಕಿಸ್ತಾನ ಟಿವಿ ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು. ಅಲ್ಲಿನ ನಾಟಕಗಳಲ್ಲಿಯೂ ನಟಿಸಿ ಜನಪ್ರಿಯತೆ ಗಳಿಸಿದರು. ಪಾಕಿಸ್ತಾನ ಚಿತ್ರರಂಗದ ದೊಡ್ಡ ಸ್ಟಾರ್ ಫಹಾದ್ ಖಾನ್. ಅವರ ನಟನೆಯ ‘ಮೌಲಾ ಜಟ್’ ಸಿನಿಮಾ ಇದೇ ವರ್ಷ ಪಾಕಿಸ್ತಾನದ ಜೊತೆಗೆ ಭಾರತದಲ್ಲಿಯೂ ಬಿಡುಗಡೆ ಆಗಿತ್ತು.
ಇದನ್ನೂ ಓದಿ:ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿದ ಪಾಕಿಸ್ತಾನಿ ನಟಿ ಮಹಿರಾ ಖಾನ್; ಆದರೆ..
‘ಅಬಿರ್ ಗುಲಾಲ್’ ಸಿನಿಮಾನಲ್ಲಿ ಫಹಾದ್ ಖಾನ್ ನಾಯಕ ಪಾತ್ರದಲ್ಲಿ ನಟಿಸಿದ್ದಾರೆ. ಫಹಾದ್ ಖಾನ್ ಹೊರತಾಗಿ ಸಿನಿಮಾದ ಇನ್ನೆಲ್ಲ ನಟ, ನಟಿಯರು ಭಾರತೀಯರೇ ಆಗಿದ್ದಾರೆ. ಆದರೆ ಪ್ರಮುಖ ಪಾತ್ರದಲ್ಲಿ ಫಹಾದ್ ಖಾನ್ ನಟಿಸಿರುವ ಕಾರಣಕ್ಕೆ ಸಿನಿಮಾಕ್ಕೆ ನಿಷೇಧ ಹೇರಲಾಗಿದೆ. ಸಿನಿಮಾದ ನಾಯಕಿಯಾಗಿ ವಾಣಿ ಕಪೂರ್ ನಟಿಸಿದ್ದಾರೆ. ಸಿನಿಮಾದ ನಿರ್ದೇಶನ ಮಾಡಿರುವುದು ಆರತಿ ಎಸ್ ಬಾಗಡಿ.
‘ಏ ದಿಲ್ ಹೇ ಮುಷ್ಕಿಲ್’ ಸಿನಿಮಾನಲ್ಲಿ ಫಹಾದ್ ಖಾನ್ ನಟಿಸಿದ್ದರು. ಆಗಲೂ ಸಹ ಪಾಕಿಸ್ತಾನಿ ನಟ ನಟಿಸಿದ್ದಕ್ಕೆ ವಿವಾದ ಸೃಷ್ಟಿಯಾಗಿತ್ತು. ಅದಾದ ಬಳಿಕ ಪಾಕಿಸ್ತಾನಿ ನಟರು ಭಾರತೀಯ ಸಿನಿಮಾಗಳಲ್ಲಿ ನಟಿಸುವಂತಿಲ್ಲ ಎಂಬ ನಿಷೇಧ ಹೇರಲಾಗಿತ್ತು. ಆದರೆ 2023 ರಲ್ಲಿ ಈ ನಿಷೇಧ ತೆರವಾಯ್ತು. ಮಾತ್ರವೇ ಅಲ್ಲದೆ ಇದೇ ವರ್ಷ ಪಾಕಿಸ್ತಾನಿ ಸಿನಿಮಾಗಳು ಭಾರತದಲ್ಲಿ ಬಿಡುಗಡೆ ಆಗಬಾರದು ಎಂಬ ನಿಷೇಧ ಸಹ ತೆರವಾಯ್ತು. ಈಗ ಮತ್ತೆ ನಿಷೇಧ ಹೇರಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:50 am, Tue, 29 April 25