ಪ್ರಭಾಸ್ (Prabhas) ನಟನೆಯ ‘ಆದಿಪುರುಷ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತಿದೆ. ಹಾಗಂತ ಇದು ಒಳ್ಳೆಯ ಕಾರಣಕ್ಕೆ ಅಲ್ಲವೇ ಅಲ್ಲ. ಇತ್ತೀಚೆಗೆ ಚಿತ್ರದ ಟೀಸರ್ ರಿಲೀಸ್ ಆಯಿತು. ಆರಂಭದಲ್ಲಿ ಸಿನಿಮಾದ ಗ್ರಾಫಿಕ್ಸ್ ಬಗ್ಗೆ ಟೀಕೆ ವ್ಯಕ್ತವಾಯಿತು. ರಾವಣನ ಪಾತ್ರದ ಬಗ್ಗೆಯೂ ಟೀಕೆಗಳು ಕೇಳಿ ಬಂದವು. ಚಿತ್ರತಂಡದಿಂದ ಇದಕ್ಕೆ ಸ್ಪಷ್ಟನೆ ನೀಡುವ ಕೆಲಸವೂ ಆಗಿದೆ. ಈ ಮಧ್ಯೆ ಚಿತ್ರತಂಡಕ್ಕೆ ಮತ್ತೊಂದು ಕಂಟಕ ಎದುರಾಗಿದೆ. ಅಯೋಧ್ಯೆಯ (Ayodhye) ರಾಮ ಮಂದಿರದ ಮುಖ್ಯ ಅರ್ಚಕರು ಕೂಡ ಈ ಟೀಸರ್ ಬಗ್ಗೆ ಅಪಸ್ವರ ತೆಗೆದಿದ್ದಾರೆ. ಈ ಚಿತ್ರವನ್ನು ಬ್ಯಾನ್ ಮಾಡಬೇಕು ಎಂಬುದಕ್ಕೆ ಅವರು ಕೂಡ ಧ್ವನಿಗೂಡಿಸಿದ್ದಾರೆ. ಇದರಿಂದ ಸಿನಿಮಾಗೆ ಸಂಕಷ್ಟ ಹೆಚ್ಚಿದೆ.
ರಾಮ ಹುಟ್ಟಿದ್ದು ಅಯೋಧ್ಯೆಯಲ್ಲಿ ಎಂಬುದು ರಾಮಾಯಣದಲ್ಲಿ ಉಲ್ಲೇಖ ಆಗಿದೆ. ಹೀಗಾಗಿ, ಅಯೋಧ್ಯೆಯಲ್ಲೇ ರಾಮ ಮಂದಿರ ನಿರ್ಮಾಣ ಆಗುತ್ತಿದೆ. ರಾಮ ಮಂದಿರದ ಮುಖ್ಯ ಅರ್ಚಕರು ಈ ಸಿನಿಮಾ ಬ್ಯಾನ್ ಆಗಬೇಕು ಎಂದು ಆಗ್ರಹಿಸಿದ್ದಾರೆ. ‘ಸಿನಿಮಾ ಮಾಡುವುದು ಅಪರಾಧವಲ್ಲ. ಆದರೆ, ಬೆಳಕಿಗೆ ಬರಬೇಕು ಎಂಬ ಕಾರಣಕ್ಕೆ ವಿವಾದಗಳನ್ನು ಮಾಡಿಕೊಳ್ಳಬಾರದು’ ಎಂದು ಅವರು ಕೋರಿದ್ದಾರೆ. ಜತೆಗೆ ಸಿನಿಮಾ ಮೇಲೆ ನಿಷೇಧ ಹೇರಲು ಕೋರಿದ್ದಾರೆ.
ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ ಮಿಶ್ರಾ ಅವರು ಈ ಚಿತ್ರದ ಟೀಸರ್ ಬಗ್ಗೆ ಅಪಸ್ವರ ತೆಗೆದಿದ್ದರು. ‘ಆದಿಪುರುಷ್ ಚಿತ್ರದ ಟೀಸರ್ ನೋಡಿದೆ. ಅದರಲ್ಲಿ ಸಾಕಷ್ಟು ವಿರೋಧಾತ್ಮಕ ಅಂಶಗಳು ಇವೆ’ ಎಂದು ಅವರು ಹೇಳಿದ್ದರು.
ಆದಿಪುರುಷ್ ಚಿತ್ರಕ್ಕೆ ಓಂ ರಾವತ್ ಅವರು ನಿರ್ದೇಶನ ಮಾಡಿದ್ದಾರೆ. ಪ್ರಭಾಸ್ ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೈಫ್ ಅಲಿ ಖಾನ್ ಅವರು ರಾವಣನಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ರಾವಣನನ್ನು ಅಲ್ಲಾವುದ್ದಿನ್ ಖಿಲ್ಜಿ ರೀತಿಯಲ್ಲಿ ತೋರಿಸಲಾಗಿದೆ ಎಂಬ ಆರೋಪ ಇದೆ. ಕೃತಿ ಸನೋನ್ ಅವರು ಈ ಚಿತ್ರದಲ್ಲಿ ಸೀತೆ ಪಾತ್ರ ಮಾಡಿದ್ದಾರೆ.
ಇದನ್ನೂ ಓದಿ: Yash: ಅಯೋಧ್ಯೆ ರಾಮ ಮಂದಿರಕ್ಕೆ ಯಶ್ 50 ಕೋಟಿ ರೂ. ಕೊಟ್ರು ಅಂತ ಹಬ್ಬಿದೆ ಸುಳ್ಳು ಸುದ್ದಿ; ಫೋಟೋ ಹಿಂದಿನ ಸತ್ಯವೇನು?
ಈ ಚಿತ್ರದ ಟೀಸರ್ ಬಗ್ಗೆ ವ್ಯಂಗ್ಯ ಕೇಳಿ ಬಂದ ಬೆನ್ನಲ್ಲೇ ತಂಡದಿಂದ ಈ ಬಗ್ಗೆ ಸ್ಪಷ್ಟನೆ ಸಿಕ್ಕಿತ್ತು. ‘ಇದು ದೊಡ್ಡ ಪರದೆಗಾಗಿ ಮಾಡಿದ ಸಿನಿಮಾ. ಮೊಬೈಲ್ನಲ್ಲಿ ವಿಡಿಯೋ ನೋಡಿ ಟೀಕೆ ಮಾಡುವುದು ತಪ್ಪು’ ಎಂದು ‘ಆದಿಪುರುಷ್’ ತಂಡದವರು ಅಭಿಪ್ರಾಯಪಟ್ಟಿದ್ದರು.
Published On - 2:31 pm, Thu, 6 October 22