ಆಸ್ಕರ್ 2023 (Oscar 2023) ಭಾರತೀಯರ ಪಾಲಿಗೆ ಕೆಲವು ಅವಿಸ್ಮರಣೀಯ ನೆನಪುಗಳನ್ನು ನೀಡಿದೆ. ಮೊದಲ ಬಾರಿಗೆ ಭಾರತೀಯ ನಿರ್ಮಾಣದ ಸಿನಿಮಾ ಒಂದು ಆಸ್ಕರ್ ಪಡೆದಿದ್ದು ಹೆಮ್ಮೆಯ ಸಂಗತಿಯಾದರೆ ಭಾರತದ ಕಿರು ಡಾಕ್ಯುಮೆಂಟರಿ ಸಹ ಇದೇ ವರ್ಷ ಆಸ್ಕರ್ ಗೆದ್ದು ಇತಿಹಾಸ ನಿರ್ಮಿಸಿದೆ. ಇದರ ಜೊತೆಗೆ ಮೊದಲ ಬಾರಿಗೆ ಭಾರತೀಯ ಸಿನಿಮಾದ ಹಾಡೊಂದರ ಪ್ರದರ್ಶನ ಆಸ್ಕರ್ ವೇದಿಕೆಯ ಮೇಲೆ ಆಗಿದೆ. ಜೊತೆಗೆ ನಟಿ ದೀಪಿಕಾ ಪಡುಕೋಣೆ (Deepika Padukone) ಸಹ ಆಸ್ಕರ್ ವೇದಿಕೆ ಏರಿದ್ದು ಸಹ ವಿಶೇಷಗಳಲ್ಲಿ ಒಂದು.
ಆಸ್ಕರ್ ವೇದಿಕೆ ಏರಿದ ನಟಿ ದೀಪಿಕಾ ಪಡುಕೋಣೆ ನಾಟು-ನಾಟು ಹಾಡು ಪ್ರದರ್ಶನದ ಬಗ್ಗೆ ಮಾಹಿತಿ ನೀಡಿದರು. ಈ ಸಮಯದಲ್ಲಿ ದೀಪಿಕಾ ಪಡುಕೋಣೆ ಧರಿಸಿದ್ದ ಉಡುಗೊರೆ ಗಮನ ಸೆಳೆಯಿತು. ಕಡುಕಪ್ಪು ಬಣ್ಣದ ವೆಲ್ವೆಟ್ ಮಾದರಿಯ ಶೋಲ್ಡರ್ ಫ್ರೀ ಉಡುಪನ್ನು ದೀಪಿಕಾ ಧರಿಸಿದ್ದರು. ಉಡುಪಿನ ಕೆಳಗಡೆಯ ಅಂಚು ಮರ್ಮೆಡ್ ಮಾದರಿಯನ್ನು ಹೋಲುವಂತಿತ್ತು. ಹೊಳೆಯುವ ವಜ್ರದ ಸರ ಹಾಗೂ ಉಂಗುರವನ್ನು ದೀಪಿಕಾ ಪಡುಕೋಣೆ ಧರಿಸಿದ್ದರು.
ದೀಪಿಕಾ ಪಡುಕೋಣೆ ಧರಿಸಿದ್ದ ಉಡುಪು ವಿಶ್ವವಿಖ್ಯಾತ ಬಟ್ಟೆ ಹಾಗೂ ಆಭರಣಗಳ ಬ್ರ್ಯಾಂಡ್ ಆಗಿರುವ ಲೂಯಿ ವಿಟಾನ್ ಅವರು ಸಿದ್ಧಪಡಿಸಿದ್ದಾಗಿತ್ತು. ದೀಪಿಕಾ ಧರಿಸಿದ್ದ ಆಭರಣಗಳು ಕಾರ್ಟಿಯರ್ ಸಂಸ್ಥೆಯದ್ದಾಗಿಗಿತ್ತು. ಆಸ್ಕರ್ ವೇದಿಕೆ ಮೇಲೆ ದೀಪಿಕಾ ಧರಿಸಿದ್ದ ಉಡುಪಿನ ಬೆಲೆ ಅಂದಾಜು 10 ಲಕ್ಷ ಎನ್ನಲಾಗಿದೆ. ಇನ್ನು ದೀಪಿಕಾ ಧರಿಸಿದ್ದ ಆಭರಣಗಳ ಬೆಲೆ 25 ಲಕ್ಷಕ್ಕೂ ಹೆಚ್ಚಂತೆ.
ಆಸ್ಕರ್ ಕಾರ್ಯಕ್ರಮ ಮುಗಿದ ಬಳಿಕ ವ್ಯಾನಿಟಿ ಫೇರ್ ಆಯೋಜಿಸಿದ್ದ ಆಫ್ಟರ್ ಪಾರ್ಟಿಯಲ್ಲಿಯೂ ದೀಪಿಕಾ ಪಡುಕೋಣೆ ಭಾಗವಹಿಸಿದ್ದರು. ಈ ವೇಳೆ ಭಿನ್ನವಾದ ಉಡುಪನ್ನು ದೀಪಿಕಾ ಧರಿಸಿದ್ದರು. ನ್ಯೂಯಾರ್ಕ್ನ ಜನಪ್ರಿಯ ಡಿಸೈನರ್ ನಯೀಮ್ ಖಾನ್ ವಿನ್ಯಾಸ ಮಾಡಿದ್ದ ಭಿನ್ನ ಮಾದರಿಯ ಉಡುಪನ್ನು ದೀಪಿಕಾ ಧರಿಸಿದ್ದರು. ಈ ಉಡುಪಿನ ಬೆಲೆ ಸುಮಾರು 10000 ಡಾಲರ್ ಅಂದರೆ ಸುಮಾರು 8.19 ಲಕ್ಷ ರುಪಾಯಿಗಳಿಗೂ ಹೆಚ್ಚು. ಆಸ್ಕರ್ ವೇದಿಕೆ ಮೇಲೆ ದೀಪಿಕಾ ಧರಿಸಿದ್ದ ಉಡುಪಿಗಿಂತಲೂ ದೀಪಿಕಾರ ಆಫ್ಟರ್ ಪಾರ್ಟಿ ಲುಕ್ ಹೆಚ್ಚು ವೈರಲ್ ಆಗಿದೆ.
ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಹಲವು ಬಾರಿ ಕಾಣಿಸಿಕೊಂಡಿರುವ ದೀಪಿಕಾ ಪಡುಕೋಣೆ ಪ್ರತಿಬಾರಿಯೂ ತಮ್ಮ ಭಿನ್ನ ಹಾಗೂ ಸ್ಟೈಲಿಸ್ಟ್ ಉಡುಪುಗಳನ್ನು ಧರಿಸಿ ಗಮನ ಸೆಳೆಯುತ್ತಾರೆ. ಕೆಲ ತಿಂಗಳ ಹಿಂದೆ ಕಾನ್ ಚಿತ್ರೋತ್ಸವದಲ್ಲಿ ಭಾಗವಹಿಸಿದ್ದಾಗಲೂ ಸಹ ದೀಪಿಕಾ ಪಡುಕೋಣೆ ತಮ್ಮ ಫ್ಯಾಷನ್ನಿಂದ ಗಮನ ಸೆಳೆದಿದ್ದರು.