Jawan: ತಡವಾಗುತ್ತಾ ‘ಜವಾನ್’ ಬಿಡುಗಡೆ? ಶಾರುಖ್ ಖಾನ್ ಚಿತ್ರದ ರಿಲೀಸ್ ದಿನಾಂಕದ ಬಗ್ಗೆ ಹಬ್ಬಿದೆ ಗಾಸಿಪ್
Jawan Movie Release Date: ಅಂದುಕೊಂಡ ರೀತಿಯೇ ‘ಜವಾನ್’ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಆದರೂ ಕೂಡ ಜೂನ್ 2ರಂದು ಚಿತ್ರವನ್ನು ಬಿಡುಗಡೆ ಮಾಡೋದು ಅನುಮಾನ ಎನ್ನಲಾಗುತ್ತಿದೆ.
ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಅವರು ಮೈಕೊಡವಿ ನಿಂತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸತತ ಸೋಲು ಅನುಭವಿಸಿದ್ದ ಅವರು ಈಗ ಭರ್ಜರಿ ಗೆಲುವು ಕಂಡಿದ್ದಾರೆ. ‘ಪಠಾಣ್’ ಚಿತ್ರದಿಂದ ಅವರು ಅದ್ದೂರಿಯಾಗಿ ಕಮ್ಬ್ಯಾಕ್ ಮಾಡಿದ್ದಾರೆ. ಈ ಸಿನಿಮಾ ವಿಶ್ವಾದ್ಯಂತ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಆ ಮೂಲಕ ಶಾರುಖ್ ಖಾನ್ ಅವರು ಬಾಕ್ಸ್ ಆಫೀಸ್ ಸುಲ್ತಾನ ಎಂಬುದು ಸಾಬೀತಾಗಿದೆ. ಈ ಸಿನಿಮಾದ ಗ್ರ್ಯಾಂಡ್ ಸಕ್ಸಸ್ ನಂತರ ಶಾರುಖ್ ಖಾನ್ ಅವರ ಚಾರ್ಮ್ ಹೆಚ್ಚಾಗಿದೆ. ಅವರ ಮುಂಬರುವ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಿದೆ. ಕಾಲಿವುಡ್ ನಿರ್ದೇಶಕ ಅಟ್ಲಿ ಕುಮಾರ್ (Atlee Kumar) ಜೊತೆ ಶಾರುಖ್ ಖಾನ್ ಮಾಡುತ್ತಿರುವ ‘ಜವಾನ್’ (Jawan Movie) ಚಿತ್ರಕ್ಕೆ ಫ್ಯಾನ್ಸ್ ಕಾಯುತ್ತಿದ್ದಾರೆ. ಆದರೆ ಈ ಸಿನಿಮಾದ ರಿಲೀಸ್ ದಿನಾಂಕ ಮುಂದೂಡಿಕೆ ಆಗುವ ಸಾಧ್ಯತೆ ದಟ್ಟವಾಗಿದೆ.
ತಮಿಳಿನಲ್ಲಿ ಅಟ್ಲಿ ಕುಮಾರ್ ಅವರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಈಗ ಅವರು ಶಾರುಖ್ ಖಾನ್ ಜೊತೆ ಕೈ ಜೋಡಿಸಿರುವುದರಿಂದ ಸಹಜವಾಗಿಯೇ ಹೈಪ್ ಹೆಚ್ಚಾಗಿದೆ. ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್ ನೋಡಿ ಫ್ಯಾನ್ಸ್ ವಾವ್ ಎಂದಿದ್ದಾರೆ. ಜೂನ್ 2ರಂದು ‘ಜವಾನ್’ ಸಿನಿಮಾವನ್ನು ತೆರೆ ಕಾಣಿಸಬೇಕು ಎಂದು ತೀರ್ಮಾನಿಸಲಾಗಿದೆ. ಆದರೆ ಈಗ ಕೇಳಿಬರುತ್ತಿರುವ ಲೇಟೆಸ್ಟ್ ಗಾಸಿಪ್ ಏನೆಂದರೆ, ಜೂನ್ 2ರಂದು ‘ಜವಾನ್’ ಬಿಡುಗಡೆ ಆಗೋದು ಅನುಮಾನವಂತೆ.
ಇದನ್ನೂ ಓದಿ: ಶಾರುಖ್ ಖಾನ್ ಮನೆಗೆ ಶೂಟಿಂಗ್ ಮಾಡಲು ಹೋದಾಗ ಆದ ಅನುಭವ ವಿವರಿಸಿದ ನಿರ್ದೇಶಕಿ
ಅಂದುಕೊಂಡ ರೀತಿಯೇ ‘ಜವಾನ್’ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ನಿಗದಿತ ಸಮಯಕ್ಕೆ ಚಿತ್ರೀಕರಣ ಮುಗಿಸಲು ಅಟ್ಲಿ ಕುಮಾರ್ ಪ್ರಯತ್ನಿಸುತ್ತಿದ್ದಾರೆ. ಆದರೆ ಎಡಿಟಿಂಗ್ ಸಂದರ್ಭದಲ್ಲಿ ಎಷ್ಟು ಸಮಯ ಹಿಡಿಯಲಿದೆ ಅಂತ ಊಹಿಸೋದು ಕಷ್ಟ. ಒಂದು ವೇಳೆ ಜೂನ್ 2ಕ್ಕೆ ಸಿನಿಮಾ ರಿಲೀಸ್ ಮಾಡಲು ಸಾಧ್ಯವಾಗದಿದ್ದರೆ ಅಕ್ಟೋಬರ್ಗೆ ಬಿಡುಗಡೆ ದಿನಾಂಕ ಮುಂದೂಡಿಕೆ ಆಗುವ ಸಾಧ್ಯತೆ ಇದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: Pathaan: ‘ಪಠಾಣ್ ಇಷ್ಟ ಆಗಿಲ್ಲ’: ಮಗುವಿನ ವಿಮರ್ಶೆಯನ್ನೂ ಗಂಭೀರವಾಗಿ ತೆಗೆದುಕೊಂಡ ಶಾರುಖ್ ಖಾನ್
‘ಜವಾನ್’ ಸಿನಿಮಾದ ರಿಲೀಸ್ ಡೇಟ್ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಅಟ್ಲಿ ಕುಮಾರ್ ಮತ್ತು ಶಾರುಖ್ ಖಾನ್ ಅವರು ಮೀಟಿಂಗ್ ಮಾಡಲಿದ್ದಾರೆ. ಆ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ. ಈ ಬಗ್ಗೆ ಚಿತ್ರತಂಡದಿಂದ ಯಾರೂ ಕೂಡ ಅಧಿಕೃತ ಹೇಳಿಕೆ ನೀಡಿಲ್ಲ. ‘ಜವಾನ್’ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆ ನಯನತಾರಾ, ದೀಪಿಕಾ ಪಡುಕೋಣೆ, ವಿಜಯ್ ಸೇತುಪತಿ ಮುಂತಾದವರು ನಟಿಸುತ್ತಿದ್ದಾರೆ.
ರಾಜ್ಕುಮಾರ್ ಹಿರಾನಿ ನಿರ್ದೇಶನದ ‘ಡಂಕಿ’ ಸಿನಿಮಾದಲ್ಲೂ ಶಾರುಖ್ ಖಾನ್ ನಟಿಸುತ್ತಿದ್ದಾರೆ. ಈ ಚಿತ್ರ ಕೂಡ ದೊಡ್ಡ ಮಟ್ಟದಲ್ಲಿ ಕ್ರೇಜ್ ಸೃಷ್ಟಿಸಿದೆ. ಪ್ರತಿ ಸಿನಿಮಾದಲ್ಲೂ ವಿಶೇಷವಾದ ಕಥಾವಸ್ತು ಆಯ್ಕೆ ಮಾಡಿಕೊಳ್ಳುವ ಹಿರಾನಿ ಅವರು ‘ಡಂಕಿ’ ಚಿತ್ರದಲ್ಲಿ ಯಾವ ಕಥೆ ಹೇಳಲಿದ್ದಾರೆ ಎಂಬ ಕೌತುಕ ಅಭಿಮಾನಿಗಳಿಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:25 pm, Wed, 15 March 23