Bholaa: ‘ನೀವು ಪದೇಪದೇ ಟಬು ಜತೆ ಸಿನಿಮಾ ಮಾಡೋದು ಯಾಕೆ?’: ನೇರ ಪ್ರಶ್ನೆಗೆ ಅಜಯ್​ ದೇವಗನ್​ ಉತ್ತರ

ಮದನ್​ ಕುಮಾರ್​

|

Updated on: Mar 15, 2023 | 6:06 PM

Ajay Devgn | Tabu: ಟಬು ಮತ್ತು ಅಜಯ್​ ದೇವಗನ್​ ಅವರು ಹಲವು ಸಿನಿಮಾಗಳಲ್ಲಿ ಒಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ. ಈ ಬಗ್ಗೆ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.

Bholaa: ‘ನೀವು ಪದೇಪದೇ ಟಬು ಜತೆ ಸಿನಿಮಾ ಮಾಡೋದು ಯಾಕೆ?’: ನೇರ ಪ್ರಶ್ನೆಗೆ ಅಜಯ್​ ದೇವಗನ್​ ಉತ್ತರ
ಅಜಯ್ ದೇವಗನ್, ಟಬು

ನಟ ಅಜಯ್​ ದೇವಗನ್ (Ajay Devgn)​ ಮತ್ತು ನಟಿ ಟಬು ನಡುವೆ ಒಳ್ಳೆಯ ಒಡನಾಟ ಇದೆ. ಹಲವು ವರ್ಷಗಳಿಂದ ಅವರು ಸ್ನೇಹಿತರಾಗಿದ್ದಾರೆ. ಇಂದಿಗೂ ಅವರ ಗೆಳೆತನ ಮುಂದುವರಿದಿದೆ. ಇಬ್ಬರೂ ಜೊತೆಯಾಗಿ ಅನೇಕ ಸಿನಿಮಾಗಳನ್ನು ಮಾಡಿದ್ದಾರೆ. ಅಜಯ್​ ದೇವಗನ್​ ಅವರು ತಮ್ಮ ನಿರ್ದೇಶನದ ಮತ್ತು ನಿರ್ಮಾಣದ ಸಿನಿಮಾಗಳಲ್ಲಿ ಟುಬುಗೆ ಅವಕಾಶ ನೀಡುತ್ತಾರೆ. ಬಿಡುಗಡೆಗೆ ಸಿದ್ಧವಾಗಿರುವ ‘ಭೋಲಾ’ (Bholaa Movie) ಚಿತ್ರದಲ್ಲೂ ಟಬು (Tabu) ಮತ್ತು ಅಜಯ್​ ದೇವಗನ್ ತೆರೆ ಹಂಚಿಕೊಂಡಿದ್ದಾರೆ. ಇವರಿಬ್ಬರು ಹೀಗೆ ಪದೇಪದೇ ಜೊತೆಯಾಗಿ ಸಿನಿಮಾ ಮಾಡುತ್ತಿರುವುದು ಕೆಲವರ ಕಣ್ಣು ಕುಕ್ಕಿದೆ. ಆ ಬಗ್ಗೆ ನೇರವಾಗಿ ಪ್ರಶ್ನೆ ಎದುರಾಗಿದ್ದು, ಅಜಯ್​ ದೇವಗನ್​ ಉತ್ತರ ನೀಡಿದ್ದಾರೆ.

ಮಾರ್ಚ್​ 30ರಂದು ‘ಭೋಲಾ’ ಸಿನಿಮಾ ರಿಲೀಸ್​ ಆಗಲಿದೆ. ಇದರ ಪ್ರಚಾರದ ಸಲುವಾಗಿ ಅಜಯ್​ ದೇವಗನ್​ ಅವರು ಅನೇಕ ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡುತ್ತಿ​ದ್ದಾರೆ. ಈ ನಡುವೆ ಅವರು ಟ್ವಿಟರ್​ನಲ್ಲಿ ಅಭಿಮಾನಿಗಳ ಜೊತೆ ನೇರವಾಗಿ ಪ್ರಶ್ನೋತ್ತರ ನಡೆಸಿದ್ದಾರೆ. ಆಗ ವ್ಯಕ್ತಿಯೊಬ್ಬರು ಟಬು ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ‘ನೀವು ಎಲ್ಲ ಸಿನಿಮಾಗಳನ್ನು ಟಬು ಜೊತೆ ಮಾಡುತ್ತೀರಿ. ಅದಕ್ಕೆ ಏನಾದರೂ ನಿರ್ದಿಷ್ಟ ಕಾರಣ ಇದೆಯೇ’ ಎಂಬ ಪ್ರಶ್ನೆ ಎದುರಾಗಿದೆ.

ಇದನ್ನೂ ಓದಿ

ಈ ಪ್ರಶ್ನೆಯನ್ನು ಅಜಯ್​ ದೇವಗನ್​ ಅವರು ತುಂಬ ಕೂಲ್​ ಆಗಿ ಸ್ವೀಕರಿಸಿದ್ದಾರೆ. ‘ಟಬು ಅವರ ಡೇಟ್ಸ್​ ಸಿಕ್ಕಿದೆ’ ಎಂದಷ್ಟೇ ಅವರು ಉತ್ತರಿಸಿದ್ದಾರೆ. ಈ ಮೊದಲು ‘ದೃಶ್ಯಂ’, ‘ದೃಶ್ಯಂ 2’, ‘ಗೋಲ್​ಮಾಲ್​ ಅಗೇನ್​’, ‘ದೇ ದೇ ಪ್ಯಾರ್​ ದೇ’ ಮುಂತಾದ ಸಿನಿಮಾಗಳಲ್ಲೂ ಅಜಯ್​ ದೇವಗನ್​ ಮತ್ತು ಟಬು ಜೊತೆಯಾಗಿ ನಟಿಸಿದ್ದರು.

ಇದನ್ನೂ ಓದಿ: Bollywood Remake: ರಿಮೇಕ್​ ಚಿತ್ರಗಳಿಗಿಲ್ಲ ಉಳಿಗಾಲ; ಅಜಯ್​ ದೇವಗನ್​, ಸಲ್ಮಾನ್​ ಖಾನ್​ಗೆ ಕಾದಿದೆಯಾ ಸೋಲು?

‘ಭೋಲಾ’ ಚಿತ್ರದ ಟ್ರೇಲರ್​ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ. ಇದು ತಮಿಳಿನ ‘ಕೈದಿ’ ಸಿನಿಮಾದ ಹಿಂದಿ ರಿಮೇಕ್​. ಆದರೆ ಹಿಂದಿಯಲ್ಲಿ ಈ ಚಿತ್ರ 3ಡಿ ರೂಪದಲ್ಲಿ ಬಿಡುಗಡೆ ಆಗಲಿದೆ ಎಂಬುದು ವಿಶೇಷ. ಈ ಚಿತ್ರಕ್ಕೆ ಸ್ವತಃ ಅಜಯ್​ ದೇವಗನ್​ ಅವರು ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಕೂಡ ಅವರದ್ದೇ.

ಇದನ್ನೂ ಓದಿ: ‘ಭೋಲಾ’ ಚಿತ್ರದ ಟ್ರೇಲರ್ ರಿಲೀಸ್​; ‘ಕೈದಿ’ ಚಿತ್ರಕ್ಕಿಂತ ಭಿನ್ನವಾಗಿದೆಯೇ ಅಜಯ್ ದೇವಗನ್ ಸಿನಿಮಾ?

ಇತ್ತೀಚೆಗೆ ಬಾಲಿವುಡ್​ನಲ್ಲಿ ಕೆಲವು ರಿಮೇಕ್​ ಸಿನಿಮಾಗಳು ಸೋತಿವೆ. ‘ಶೆಹಜಾದಾ’ ಮತ್ತು ‘ಸೆಲ್ಫೀ’ ಚಿತ್ರಗಳೇ ಅದಕ್ಕೆ ಉದಾಹರಣೆ. ‘ಭೋಲಾ’ ಕೂಡ ರಿಮೇಕ್​ ಸಿನಿಮಾ ಆದ್ದರಿಂದ ಇದರ ಬಾಕ್ಸ್​ ಆಫೀಸ್​ ಭವಿಷ್ಯದ ಬಗ್ಗೆ ಕೆಲವರಿಗೆ ಅನುಮಾನ ಇದೆ. ಆ ಕುರಿತಾಗಿಯೂ ಕೆಲವರು ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಅಜಯ್​ ದೇವಗನ್​ ಅವರು, ‘ದುಡ್ಡಿನ ಬಗ್ಗೆ ಗೊತ್ತಿಲ್ಲ. ಆದರೆ ನಿಮ್ಮ ಪ್ರೀತಿ ಭರ್ಜರಿಯಾಗಿ ಸಿಗಲಿದೆ ಎಂಬ ನಂಬಿಕೆ ಇದೆ’ ಎಂದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada