AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಸಾರ್ವಕಾಲಿಕ ಶ್ರೇಷ್ಠ ಸಿನಿಮಾಗಳಿಗೆ ಒಂದು ಆಸ್ಕರ್ ಸಹ ಬಂದಿಲ್ಲ: ಚಕಿತಗೊಳಿಸುವ ಪಟ್ಟಿ ಇಲ್ಲಿದೆ

ಸಾರ್ವಕಾಲಿಕ ಶ್ರೆಷ್ಠ ಎನಿಸಿಕೊಂಡ ಹಲವು ಅತ್ಯುತ್ತಮ ಸಿನಿಮಾಗಳಿಗೆ ಒಂದೂ ಆಸ್ಕರ್ ಲಭಿಸಿಲ್ಲ. ಅತ್ಯುತ್ತಮ ಸಿನಿಮಾಗಳು ಎನಿಸಿಕೊಂಡಿದ್ದರೂ ಖಾತೆಯಲ್ಲಿ ಆಸ್ಕರ್ ಇಲ್ಲದ ಸಿನಿಮಾಗಳ ಪಟ್ಟಿ ಇಲ್ಲಿದೆ.

ಈ ಸಾರ್ವಕಾಲಿಕ ಶ್ರೇಷ್ಠ ಸಿನಿಮಾಗಳಿಗೆ ಒಂದು ಆಸ್ಕರ್ ಸಹ ಬಂದಿಲ್ಲ: ಚಕಿತಗೊಳಿಸುವ ಪಟ್ಟಿ ಇಲ್ಲಿದೆ
ಸಾರ್ವಕಾಲಿಕ ಶ್ರೇಷ್ಠ ಸಿನಿಮಾಗಳು
ಮಂಜುನಾಥ ಸಿ.
|

Updated on:Mar 15, 2023 | 7:17 PM

Share

ಆರ್​ಆರ್​ಆರ್​ (Oscar) ಸಿನಿಮಾದ ನಾಟು-ನಾಟು (Natu Natu) ಹಾಡಿಗೆ ಆಸ್ಕರ್ ಬಂದಿದೆ. ಭಾರತೀಯರು ಖುಷಿಯಿಂದ ಕುಣಿಯುತ್ತಿದ್ದಾರೆ. ಇದರ ನಡುವೆಯೇ ಕೆಲವರು ನಾಟು-ನಾಟು ಹಾಡಿಗಿಂತಲೂ ಹಲವು ಪಟ್ಟು ಉತ್ತಮವಾದ ಹಾಡುಗಳು ಈಗಾಗಲೇ ಭಾರತೀಯ ಸಿನಿಮಾಗಳಲ್ಲಿ ಬಂದು ಹೋಗಿವೆ. ಆಸ್ಕರ್ ಗೆಲ್ಲುವಷ್ಟು ಅದ್ಭುತವಾದ ಹಾಡು ಅದೇನಲ್ಲ ಎಂದಿದ್ದಾರೆ. ಅವರ ವಾದ ನಿಜವೂ ಹೌದು. ಆಸ್ಕರ್ ಪ್ರಶಸ್ತಿ ಬಂದ ಕೂಡಲೇ ಕೃತಿಯೊಂದು ಅತ್ಯುತ್ತಮ ಎನಿಸಿಕೊಳ್ಳುವುದಿಲ್ಲ. ಅಸಲಿಗೆ ನೋಡಿದರೆ ಸಾರ್ವಕಾಲಿಕ ಶ್ರೇಷ್ಠ (Great Movies Of All Time) ಎನಿಸಿಕೊಂಡ ಹಲವು ಸಿನಿಮಾಗಳಿಗೆ ಒಂದೇ ಒಂದು ಆಸ್ಕರ್ ಸಹ ಬಂದಿಲ್ಲ. ಹಾಗೆಂದು ಅವು ಒಳ್ಳೆಯ ಸಿನಿಮಾಗಳೆಂದಲ್ಲ, ಆಸ್ಕರ್ ಬರದಿದ್ದರೂ ಸಹ ವಿಶ್ವ ಸಿನಿಮಾ ಇತಿಹಾಸದ ದಿ ಬೆಸ್ಟ್ ಸಿನಿಮಾಗಳು. ಅಂಥಹಾ ಸಿನಿಮಾಗಳ ಪಟ್ಟಿ ಇಲ್ಲಿದೆ.

ಪತೇರ್ ಪಾಂಚಾಲಿ

ಭಾರತದಲ್ಲಿ ನಿರ್ಮಾಣಗೊಂಡ ಅತ್ಯುತ್ತಮ ಕಲಾತ್ಮಕ ಸಿನಿಮಾ ಎಂಬ ಖ್ಯಾತಿ ಇಂದಿಗೂ ‘ಪತೇರ್ ಪಾಂಚಾಲಿ’ ಸಿನಿಮಾಕ್ಕಿದೆ. ಜೀವಮಾನ ಸಾಧನೆಗೆ ಆಸ್ಕರ್ ಪಡೆದ ಏಕೈಕ ಭಾರತೀಯ ನಿರ್ದೇಶಕ ಸತ್ಯಜಿತ್ ರೇ ಈ ಸಿನಿಮಾದ ನಿರ್ದೇಶಿಸಿದ್ದಾರೆ. ಭಾರತದ ಸಿನಿಮಾ ಶಾಲೆಗಳಲ್ಲಿ ಪತೇರ್ ಪಾಂಚಾಲಿಯನ್ನು ಪಾಠವಾಗಿ ಕಲಿಸಲಾಗುತ್ತದೆ 1955 ರ ಈ ಸಿನಿಮಾಕ್ಕೆ ಆಸ್ಕರ್ ಸಿಗುವುದಿರಲಿ, ನಾಮಿನೇಟ್ ಸಹ ಆಗಲಿಲ್ಲ. ಆಸ್ಕರ್ ಲಭಿಸದಿದ್ದರೂ ಸಹ ಇದು ಅತ್ಯುತ್ತಮ ಸಿನಿಮಾ.

ಶಾಶಂಕ್ ರಿಡಂಪ್ಷನ್

ಸಾರ್ವಕಾಲಿಕ ಶ್ರೇಷ್ಠ ಸಿನಿಮಾ ಎಂದು ಖ್ಯಾತಿಗಳಿಸಿರುವ ಶಾಶಂಕ್ ರಿಡಂಪ್ಷನ್ ಸಿನಿಮಾ ಒಂದೇ ಒಂದು ಆಸ್ಕರ್ ಸಹ ಗೆದ್ದಿಲ್ಲ. ಈಗಲೂ ಐಎಂಡಿಬಿಯ ಟಾಪ್ ರೇಟೆಡ್ ಸಿನಿಮಾ ಶಾಶಂಕ್ ರಿಡಂಪ್ಷನ್. ಈ ಸಿನಿಮಾವನ್ನು ನೋಡದ ಸಿನಿಮಾ ವಿದ್ಯಾರ್ಥಿಗಳು, ಅಪ್ಪಟ ಸಿನಿಮಾ ಪ್ರೇಮಿಗಳ ಸಿಗಲಿಕ್ಕಿಲ್ಲ. ಆಸ್ಕರ್ ಗೆದ್ದಿಲ್ಲವೆಂಬ ಕಾರಣಕ್ಕೆ ಇದರ ಅತ್ಯುನ್ನತೆ ಕಡಿಮೆಯಾಗಿಲ್ಲ.

ದಿ ಗುಡ್ ದಿ ಬ್ಯಾಡ್ ಆಂಡ್ ದಿ ಅಗ್ಲಿ

ದಿ ಗುಡ್ ದಿ ಬ್ಯಾಡ್ ಆಂಡ್ ದಿ ಅಗ್ಲಿ ಒಂದು ಅದ್ಭುತವಾದ ಸಿನಿಮಾ. ಈ ವರೆಗೆ ನಿರ್ದೇಶನ ಮಾಡಲಾಗಿರುವ ಅತ್ಯುತ್ತಮ ಸಿನಿಮಾ ದಿ ಗುಡ್ ದಿ ಬ್ಯಾಡ್ ಆಂಡ್ ದಿ ಅಗ್ಲಿ ಎಂದು ವಿಶ್ವ ಪ್ರಸಿದ್ಧ ನಿರ್ದೇಶಕ ಕ್ವಿಂಟನ್ ಟೊರೆಂಟೀನೋ ಹೇಳಿದ್ದಾರೆ. ಆದರೆ ಈ ಸಿನಿಮಾಕ್ಕೆ ಒಂದೂ ಆಸ್ಕರ್ ಲಭಿಸಿಲ್ಲ. ಈ ಸಿನಿಮಾದ ಸಂಗೀತಕ್ಕೂ ಆಸ್ಕರ್ ಲಭಿಸದೇ ಇರುವುದು ಆಸ್ಕರ್ ಬಗ್ಗೆಯೇ ಅನುಮಾನ ಮೂಡಿಸುತ್ತದೆ. ಈ ಸಿನಿಮಾದ ಸಂಗೀತ ಈಗಲೂ ಅತ್ಯುತ್ತಮ ಎಂದು ಭಾವಿಸಲಾಗುತ್ತದೆ. ಈ ಸಿನಿಮಾದ ಹೆಸರು ಗೊತ್ತಿಲ್ಲವದವರೂ ಸಹ ಸಿನಿಮಾದ ಥೀಮ್ ಸಂಗೀತವನ್ನು ಒಮ್ಮೆಯಲ್ಲ ಒಮ್ಮೆ ಕೇಳಿಯೇ ಇರುತ್ತಾರೆ. ಅಷ್ಟು ಜನಪ್ರಿಯ ಸಂಗೀತವದು.

ಸೈಕೋ

ದಿಗ್ಗಜ ನಿರ್ದೇಶಕ ಆಲ್ಫ್ರೆಡ್ ಹಿಚ್​ಕಾಕ್ ನಿರ್ದೇಶನದ ನಂಬರ್ ಒನ್ ಸಿನಿಮಾ ಸೈಕೊಗೆ ಒಂದೂ ಆಸ್ಕರ್ ದೊರೆತಿಲ್ಲ. ಈ ಸಿನಿಮಾ ಹಲವು ಸಿನಿಮಾ ಶಾಲೆಗಳಲ್ಲಿ ಅಧ್ಯಯನ ಪಠ್ಯ. ಕತೆ ಹೇಳುವ ರೀತಿ, ಎಡಿಟಿಂಗ್, ನಿರೂಪಣೆ, ನಟನೆ ಎಲ್ಲದಕ್ಕೂ ಈ ಸಿನಿಮಾ ಮಾದರಿಗಳನ್ನು ಹಾಕಿಕೊಟ್ಟಿದೆ. ಆದರೂ ಈ ಸಿನಿಮಾಕ್ಕೆ ಒಂದೂ ಆಸ್ಕರ್ ಲಭಿಸಿಲ್ಲ.

12 ಆಂಗ್ರಿ ಮೆನ್

ಕೇವಲ ಒಂದು ರೂಮ್​ನಲ್ಲಿ 12 ಜನರ ಮಧ್ಯೆ ನಡೆಯುವ ಮಾತುಕತೆಯನ್ನೇ ಕತೆಯನ್ನಾಗಿಸಿ ಕಟ್ಟಿರುವ 12 ಆಂಗ್ರಿ ಮೆನ್ ಸಿನಿಮಾ ಸಾರ್ವಕಾಲಿಕ ಶ್ರೇಷ್ಠ ಸಿನಿಮಾಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಆದರೆ ಈ ಸಿನಿಮಾಕ್ಕೂ ಆಸ್ಕರ್ ಲಭಿಸಿಲ್ಲ. ಅತ್ಯುತ್ತಮ ಚಿತ್ರಕತೆ, ಸಂಭಾಷಣೆ ವಿಭಾಗದಲ್ಲಿಯಾದರೂ ಆಸ್ಕರ್​ ಪಡೆಯುವ ಅರ್ಹತೆ ಈ ಸಿನಿಮಾಕ್ಕಿತ್ತು.

ಸೆವೆನ್

ಹಾಲಿವುಡ್​ನಲ್ಲಿ ಥ್ರಿಲ್ಲರ್ ಜಾನರ್​ನ ಹಲವು ಸಿನಿಮಾಗಳು ಬಂದಿವೆ. ಆದರೆ ಸೆವೆನ್ ಅಂಥಹಾ ಬಿಗಿಯಾದ ಥ್ರಿಲ್ಲರ್ ಸಿನಿಮಾ ಬಂದಿದ್ದಿಲ್ಲ. ಅಷ್ಟು ಕಲಾತ್ಮಕವಾಗಿ ಈ ಸಿನಿಮಾವನ್ನು ಕಟ್ಟಲಾಗಿದೆ. ಸೆವೆನ್ ಸಾರ್ವಕಾಲಿಕ ಶ್ರೇಷ್ಠ 100 ಸಿನಿಮಾಗಳಲ್ಲಿ ಸ್ಥಾನ ಪಡೆದಿದೆ ಆದರೆ ಈ ಸಿನಿಮಾಕ್ಕೆ ಒಂದೂ ಆಸ್ಕರ್ ಬಂದಿಲ್ಲ!

ಫೈಟ್ ಕ್ಲಬ್

ಫೈಟ್ ಕ್ಲಬ್ ಕಲ್ಟ್ ಸಿನಿಮಾ ಎಂಬ ಹೆಸರುಗಳಿಸಿಕೊಂಡಿದೆ. ಈ ಆಕ್ಷನ್ ಥ್ರಿಲ್ಲರ್ ಸಿನಿಮಾಕ್ಕೆ ವಿಶ್ವದಾದ್ಯಂತ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಆದರೆ ಈ ಸಿನಿಮಾಕ್ಕೆ ಒಂದೂ ಆಸ್ಕರ್ ಬಂದಿಲ್ಲ. ಇದರ ಹೊರತಾಗಿ ಒನ್ಸ್ ಅಪಾನ್ ಎ ಟೈಮ್ ಇನ್ ಅಮೆರಿಕ, ಇನ್​ ದಿ ಮೂಡ್ ಫಾರ್ ಲವ್, ಕ್ರಿಸ್ಟೊಫರ್ ನೋಲನ್​ರ ಮುಮೆಂಟೊ, ದಿ ವುಲ್ಫ್ ಆಫ್ ವಾಲ್​ಸ್ಟ್ರೀಟ್, ದಿ ಟರ್ಮಿನೇಟರ್ ಇನ್ನೂ ಕೆಲವು ಸಿನಿಮಾಗಳಿಗೆ ಒಂದೂ ಆಸ್ಕರ್ ಲಭಿಸಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:30 pm, Wed, 15 March 23