ಸೆಲೆಬ್ರಿಟಿಗಳ ಬದುಕು ಎಂದಮೇಲೆ ಗಾಸಿಪ್ ಸಹಜ. ಆದರೆ ಎಲ್ಲ ಗಾಸಿಪ್ಗಳನ್ನು ಸಹಿಸಿಕೊಳ್ಳುವುದು ಕಷ್ಟ. ನಟಿ, ಮಾಡೆಲ್ ಲಾರಾ ದತ್ತಾ ಅವರ ಬಗ್ಗೆಯೂ ಅಂಥದ್ದೇ ಒಂದು ವದಂತಿ ಈಗ ಹಬ್ಬಿದೆ. ಆ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಲೈವ್ ಬಂದು ಅವರು ಸ್ಪಷ್ಟನೆ ನೀಡಿದ್ದಾರೆ. ವೃತ್ತಿ ಜೀವನದ ಬಗ್ಗೆ ಏನೇ ಗಾಸಿಪ್ ಹಬ್ಬಿದ್ದರೂ ಲಾರಾ ದತ್ತಾ ನಿರ್ಲಕ್ಷ್ಯ ಮಾಡುತ್ತಿದ್ದರು ಎನಿಸುತ್ತದೆ. ಆದರೆ ಈ ಬಾರಿ ಗಾಳಿ ಸುದ್ದಿ ಕೇಳಿಬಂದಿದ್ದು ಅವರ ಖಾಸಗಿ ಜೀವನದ ಬಗ್ಗೆ. ಅದು ಸ್ವತಃ ಲಾರಾ ದತ್ತಾಗೆ ಅಚ್ಚರಿ ಮೂಡಿಸಿದೆ.
ಡೇಟಿಂಗ್ ಆ್ಯಪ್ಗಳ ಮೂಲಕ ಜನರು ತಮ್ಮ ಸಂಗಾತಿಗಳನ್ನು ಆರಿಸಿಕೊಳ್ಳುವುದು ಕಾಮನ್. ಇಂಥ ಆ್ಯಪ್ಗಳನ್ನು ಯುವ ಜನರು ಹೆಚ್ಚಾಗಿ ಬಳಸುತ್ತಾರೆ. ನಟಿ ಲಾರಾ ದತ್ತಾ ಕೂಡ ಡೇಟಿಂಗ್ ಆ್ಯಪ್ನಲ್ಲಿ ಖಾತೆ ತೆರೆದಿದ್ದಾರೆ ಎಂಬ ಸುದ್ದಿ ಹರಡಿದೆ. ಅಷ್ಟೇ ಅಲ್ಲ, ಅವರ ಹೆಸರಿನಲ್ಲಿ ಇರುವ ಖಾತೆಯ ಸ್ಕ್ರೀನ್ ಶಾಟ್ ಕೂಡ ಹರಿದಾಡುತ್ತಿದೆ. ಆದನ್ನು ನೋಡಿ ಬಹುತೇಕರಿಗೆ ಶಾಕ್ ಆಗಿದೆ. ಯಾಕೆಂದರೆ, ಟೆನಿಸ್ ಆಟಗಾರ ಮಹೇಶ್ ಭೂಪತಿ ಜೊತೆ ಮದುವೆ ಆಗಿರುವ ಲಾರಾ ದತ್ತಾ ಅವರು ಒಂದು ಹೆಣ್ಣು ಮಗುವಿನ ತಾಯಿ. ಹೀಗೆ ಸುಖವಾಗಿ ಸಂಸಾರ ಮಾಡಿಕೊಂಡಿರುವ ಅವರಿಗೆ ಡೇಟಿಂಗ್ ಆ್ಯಪ್ನಲ್ಲಿ ಖಾತೆ ತೆರೆದು, ಹೊಸ ಸಂಗಾತಿ ಹುಡುಕುವ ಅವಶ್ಯಕತೆ ಏನಿದೆ? ಈ ಪ್ರಶ್ನೆ ಎಲ್ಲರ ಮನದಲ್ಲೂ ಮೂಡಿದೆ.
ಅನೇಕರು ಲಾರಾ ದತ್ತಾಗೆ ನೇರವಾಗಿ ಮೆಸೇಜ್ ಮಾಡಿ ಇದನ್ನೇ ಕೇಳುತ್ತಿದ್ದಾರೆ. ‘ಡೇಟಿಂಗ್ ಆ್ಯಪ್ನಲ್ಲಿ ಇರುವುದು ನನ್ನ ಖಾತೆ ಅಲ್ಲ’ ಎಂದು ಪ್ರತಿಯೊಬ್ಬರಿಗೂ ಉತ್ತರಿಸಿ ಲಾರಾ ದತ್ತಾಗೆ ಸಾಕಾಗಿದೆ. ಅದಕ್ಕೆ ಅವರು ಇನ್ಸ್ಟಾಗ್ರಾಮ್ನಲ್ಲಿ ಲೈವ್ ಬಂದು ಸ್ಪಷ್ಟನೆ ನೀಡಿದ್ದಾರೆ. ‘ನಾನು ಡೇಟಿಂಗ್ ಆ್ಯಪ್ ಬಳಸುತ್ತಿಲ್ಲ. ಅದರಲ್ಲಿ ಈ ಹಿಂದೆ ಕೂಡ ನನ್ನ ಖಾತೆ ಇರಲೇ ಇಲ್ಲ’ ಎಂದು ಹೇಳಿದ್ದಾರೆ.
‘ಡೇಟಿಂಗ್ ಆ್ಯಪ್ಗಳ ಬಗ್ಗೆ ನನ್ನ ವಿರೋಧ ಏನೂ ಇಲ್ಲ. ಒಬ್ಬರಿಗೊಬ್ಬರು ಪರಿಚಯಗೊಂಡು ಭೇಟಿ ಆಗಲು ಅದು ಒಳ್ಳೆಯ ವೇದಿಕೆ. ಆದರೆ ನಾನು ಇಂಥ ಆ್ಯಪ್ ಬಳಸುವುದಿಲ್ಲ’ ಎಂದು ಲಾರಾ ದತ್ತಾ ಹೇಳಿದ್ದಾರೆ. ಬಾಲಿವುಡ್ನಲ್ಲಿ ಅವರಿಗೆ ಭಾರಿ ಬೇಡಿಕೆ ಇದೆ. ಈ ವರ್ಷ ತೆರೆಕಂಡ ‘ಬೆಲ್ ಬಾಟಂ’ ಸಿನಿಮಾದಲ್ಲಿ ಇಂದಿರಾ ಗಾಂಧಿ ಪಾತ್ರಕ್ಕೆ ಲಾರಾ ದತ್ತಾ ಬಣ್ಣ ಹಚ್ಚಿದ್ದರು. ಆ ಬಳಿಕ ಅವರ ಬೇರೆ ಯಾವುದೇ ಸಿನಿಮಾ ತೆರೆಕಂಡಿಲ್ಲ. ರೂಪದರ್ಶಿಯಾಗಿಯೂ ಅವರು ಬ್ಯುಸಿ ಆಗಿದ್ದಾರೆ.
ಇದನ್ನೂ ಓದಿ:
Prabhas: ಡೇಟಿಂಗ್ ವಿಚಾರಕ್ಕೆ ಜಾಗತಿಕ ಮಟ್ಟದಲ್ಲಿ ಪ್ರಭಾಸ್ ಸುದ್ದಿ; ಇದೆಲ್ಲ ಯಾರ ಜೊತೆ, ಏನು ಕಥೆ?
ಲಿಯಾಂಡರ್ ಪೇಸ್ ಜೊತೆ ‘ಮಗಧೀರ’ ಚೆಲುವೆ ಡೇಟಿಂಗ್; ಮಾಜಿ ಬಾಯ್ಫ್ರೆಂಡ್ ಹೇಳಿದ್ದೇನು?