ಭಾರತದಲ್ಲಿ ಪಾಕಿಸ್ತಾನದ ಕಲಾವಿದರನ್ನು (Pak Artists) ಬ್ಯಾನ್ ಮಾಡಿ ಬಹಳ ಸಮಯ ಆಗಿದೆ. ಭಯೋತ್ಪಾದಕ ಚಟುವಟಿಕೆಗಳಿಗೆ ಪಾಕ್ ಸಹಾಯ ಮಾಡುತ್ತಿದೆ ಎಂಬ ಕಾರಣದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಭಾರತದ ಸಿನಿಮಾ, ಮ್ಯೂಸಿಕ್ ವಿಡಿಯೋ, ಧಾರಾವಾಹಿ.. ಹೀಗೆ ಯಾವುದರಲ್ಲೂ ಪಾಕಿಸ್ತಾನದ (Pakistan) ಕಲಾವಿದರಿಗೆ, ತಂತ್ರಜ್ಞರಿಗೆ ಅವಕಾಶ ನೀಡಲಾಗುತ್ತಿಲ್ಲ. ಹಿರಿಯ ನಟಿ ಮುಮ್ತಾಜ್ ಅವರು ಈ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಪಾಕಿಸ್ತಾನದವರ ಮೇಲೆ ಹಾಕಿರುವ ನಿಷೇಧವನ್ನು ವಾಪಸ್ ಪಡೆಯಬೇಕು ಎಂದು ಮುಮ್ತಾಜ್ (Mumtaz) ಹೇಳಿದ್ದಾರೆ.
60 ಮತ್ತು 70ರ ದಶಕದಲ್ಲಿ ಮುಮ್ತಾಜ್ ಅವರು ಹಿಂದಿ ಚಿತ್ರರಂಗದಲ್ಲಿ ಸುಪ್ರಸಿದ್ಧ ನಟಿಯಾಗಿ ಮಿಂಚಿದರು. ಅವರಿಗೆ ಪಾಕಿಸ್ತಾನದಲ್ಲೂ ಅಭಿಮಾನಿಗಳು ಇದ್ದಾರೆ. ಕೆಲವೇ ದಿನಗಳ ಹಿಂದೆ ಅವರು ತಮ್ಮ ಸಹೋದರಿಯ ಜೊತೆ ಪಾಕಿಸ್ತಾನಕ್ಕೆ ಹೋಗಿ ಬಂದಿದ್ದಾರೆ. ಅನೇಕ ಅನೇಕ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಪಾಕಿಸ್ತಾನದ ಕಲಾವಿದರನ್ನು ಭೇಟಿ ಮಾಡಿ, ಆ ಸಂದರ್ಭದ ಫೋಟೋ ಹಾಗೂ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಪಾಕಿಸ್ತಾನದ ಪ್ರವಾಸ ಮುಗಿಸಿ ಬಂದ ಬಳಿಕ ಆ ಅನುಭವದ ಬಗ್ಗೆ ಮಾಧ್ಯಮವೊಂದಕ್ಕೆ ಮುಮ್ತಾಜ್ ಅವರು ಸಂದರ್ಶನ ನೀಡಿದ್ದಾರೆ. ಈ ವೇಳೆ ಬ್ಯಾನ್ ಕುರಿತು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ‘ಭಾರತಕ್ಕೆ ಬಂದು ಕೆಲಸ ಮಾಡಲು ಅವರಿಗೂ ಅವಕಾಶ ನೀಡಬೇಕು. ಅವರು ಪ್ರತಿಭಾವಂತರು. ಹಿಂದಿ ಚಿತ್ರರಂಗದಲ್ಲಿ ಪ್ರತಿಭಾವಂತರಿಗೆ ಯಾವುದೇ ಕೊರತೆ ಇಲ್ಲ. ಹಾಗಿದ್ದರೂ ಕೂಡ ಪಾಕಿಸ್ತಾನದವರಿಗೂ ಬಾಲಿವುಡ್ನಲ್ಲಿ ಅವಕಾಶ ಸಿಗಬೇಕು’ ಎಂದು ಮುಮ್ತಾಜ್ ಹೇಳಿದ್ದಾರೆ.
ಇದನ್ನೂ ಓದಿ: ಶಾರುಖ್, ಆಮಿರ್, ಸಲ್ಲು ಬಗ್ಗೆ ಪಾಕ್ ನಟಿಯ ಹೇಳಿಕೆ ವೈರಲ್; ಏನಿದೆ ಈ ವಿಡಿಯೋದಲ್ಲಿ?
ಮುಮ್ತಾಜ್ ಅವರಿಗೆ ಪಾಕಿಸ್ತಾನದಲ್ಲಿ ಒಳ್ಳೆಯ ಆತಿಥ್ಯ ಸಿಕ್ಕಿದೆ. ಪಾಕ್ ನಟ ಫಹಾದ್ ಖಾನ್ ಅವರು ಮುಮ್ತಾಜ್ ಸಲುವಾಗಿ ಇಡೀ ರೆಸ್ಟೋರೆಂಟ್ ಬುಕ್ ಮಾಡಿದ್ದರು. ಹುಷಾರಿಲ್ಲದಿದ್ದರೂ ಕೂಡ ರಾಹತ್ ಫತೇ ಅಲಿ ಖಾನ್ ಅವರು ಮುಮ್ತಾಜ್ಗಾಗಿ ಹಾಡು ಹಾಡಿದರು. ‘ಅಲ್ಲಿನ ಜನರು ಕೂಡ ನಮಗಿಂತ ಭಿನ್ನವೇನಿಲ್ಲ. ನಾನು ಹೋದಲ್ಲೆಲ್ಲ ಜನರು ಪ್ರೀತಿ ತೋರಿಸಿದರು ಹಾಗೂ ಉಡುಗೊರೆ ನೀಡಲು ಬಂದರು. ಓರ್ವ ಕಲಾವಿದೆಗೆ ಇದಕ್ಕಿಂತ ಇನ್ನೇನು ಬೇಕು. ಅವರಿಗೆ ನನ್ನ ಎಲ್ಲ ಸಿನಿಮಾ ಮತ್ತು ಹಾಡುಗಳು ಗೊತ್ತು’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.