ನಟಿ ಪೂಜಾ ಬೇಡಿ (Pooja Bedi) ಅವರು ಬಣ್ಣದ ಲೋಕದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ. ಸಿನಿಮಾ ಮತ್ತು ಕಿರುತೆರೆ ಎರಡರಲ್ಲೂ ಅವರು ಕೆಲಸ ಮಾಡಿದ್ದಾರೆ. ಇಂದು (ಮೇ 11) ಪೂಜಾ ಬೇಡಿ ಅವರಿಗೆ ಜನ್ಮದಿನದ ಸಂಭ್ರಮ. ಅವರ ಹುಟ್ಟುಹಬ್ಬಕ್ಕೆ (Pooja Bedi Birthday) ಅಭಿಮಾನಿಗಳು, ಸ್ನೇಹಿತರು ಶುಭಕೋರುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಶುಭಾಶಯಗಳ ಸಂದೇಶ ಹರಿದುಬರುತ್ತಿದೆ. ಪೂಜಾ ಬೇಡಿ 52ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ರೂಪದರ್ಶಿಯಾಗಿಯೂ ಅವರು ಫೇಮಸ್. ತಮ್ಮ ಬೋಲ್ಡ್ ವ್ಯಕ್ತಿತ್ವದ ಕಾರಣಕ್ಕಾಗಿ ಅವರು ಸದಾ ಗಮನ ಸೆಳೆಯುತ್ತಾರೆ. 1990ರ ದಶಕದಲ್ಲಿ ಪೂಜಾ ಬೇಡಿ ಅವರು ಬಾಲಿವುಡ್ನ ಕೆಲವು ಸಿನಿಮಾಗಳನ್ನು ನಟಿಸಿ ಗಮನ ಸೆಳೆದರು. ಆ ಬಳಿಕ ಅವರು ಕಿರುತೆರೆ ರಿಯಾಲಿಟಿ ಶೋಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲು ಆರಂಭಿಸಿರು. ಮಾಡೆಲ್ ಆಗಿಯೂ ಗುರುತಿಸಿಕೊಂಡಿರುವ ಅವರು ಅನೇಕ ಜಾಹೀರಾತುಗಳಲ್ಲಿ ನಟಿಸಿ ಜನಪ್ರಿಯತೆ ಪಡೆದುಕೊಂಡರು. ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ವ್ಯಾಕ್ಸಿನ್ (Covid 19 Vaccine) ವಿರುದ್ಧ ಪೂಜಾ ಬೇಡಿ ಗುಡುಗಿದ್ದರು. ಕೊರೊನಾ ಲಸಿಕೆ ಬಗ್ಗೆ ತಮ್ಮ ಅಭಿಪ್ರಾಯವನ್ನು ಗಟ್ಟಿಯಾಗಿ ಹೇಳುವ ಮೂಲಕ ವಿವಾದ ಹುಟ್ಟುಹಾಕಿದ್ದರು. ಅವರ ಹುಟ್ಟುಹಬ್ಬದ ಪ್ರಯುಕ್ತ ಆ ಎಲ್ಲ ಘಟನೆಗಳನ್ನು ಫ್ಯಾನ್ಸ್ ಮೆಲುಕು ಹಾಕುತ್ತಿದ್ದಾರೆ.
ಪೂಜಾ ಬೇಡಿ ನಟಿಸಿದ ಮೊದಲ ಸಿನಿಮಾ ‘ವಿಷಕನ್ಯಾ’ 1990ರಲ್ಲಿ ತೆರೆ ಕಂಡಿತು. ಆಮಿರ್ ಖಾನ್ ಅಭಿನಯದ ‘ಜೋ ಜೀತಾ ವೋಹೀ ಸಿಖಂದರ್’ ಸಿನಿಮಾದಲ್ಲಿನ ನಟನೆಗಾಗಿ ಪೂಜಾ ಬೇಡಿ ಅವರು ‘ಅತ್ಯುತ್ತಮ ಪೋಷಕ ನಟಿ’ ಫಿಲ್ಮ್ಫೇರ್ ಪ್ರಶಸ್ತಿಗೆ ನಾಮಿನೇಟ್ ಆಗಿದ್ದರು. ‘ಲುಟೇರಾ’, ‘ಆತಂಕ್ ಹೀ ಆತಂಕ್’, ‘ಫಿರ್ ತೇರಿ ಕಹಾನಿ ಯಾದ್ ಆಗಯಿ’ ಮುಂತಾದವು ಪೂಜಾ ಬೇಡಿ ನಟನೆಯ ಸಿನಿಮಾಗಳು. ಕೆಲವು ಚಿತ್ರಗಳಲ್ಲಿ ಅವರು ಅತಿಥಿ ಪಾತ್ರವನ್ನೂ ಮಾಡಿದ್ದಾರೆ.
ನಟಿಯಾಗಿ ಮಾತ್ರವಲ್ಲದೇ ಬರಹಗಾರ್ತಿ ಆಗಿಯೂ ಪೂಜಾ ಬೇಡಿ ಫೇಮಸ್. ಟೈಮ್ಸ್ ಆಫ್ ಇಂಡಿಯಾ, ಹಿಂದೂಸ್ತಾನ್ ಟೈಮ್ಸ್, ಮಿಡ್ ಡೇ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ ಅವರು ಅಂಕಣ ಬರೆದಿದ್ದಾರೆ. 1994ರಲ್ಲಿ ಮುಸ್ಲಿಂ ಉದ್ಯಮಿ ಜತೆ ಮದುವೆ ಆಗಿದ್ದ ಪೂಜಾ ಅವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳು ಜನಿಸಿದರು. 2003ರಲ್ಲಿ ಪೂಜಾ ಬೇಡಿ ವಿಚ್ಛೇದನ ಪಡೆದುಕೊಂಡರು.
ಬಲವಂತವಾಗಿ ಕೊವಿಡ್ ವ್ಯಾಕ್ಸಿನ್ ಹಾಕುವುದರ ಬಗ್ಗೆ ಪೂಜಾ ಬೇಡಿ ಅವರು ಗರಂ ಆಗಿದ್ದರು. 2021ರಲ್ಲಿ ಅವರು ಈ ಕುರಿತು ಖಡಕ್ ಆಗಿ ಕೆಲವು ಟ್ವೀಟ್ಗಳನ್ನು ಮಾಡಿದ್ದರು. ಭಾಗಶಃ ಜನರು ವ್ಯಾಕ್ಸಿನ್ ತೆಗೆದುಕೊಳ್ಳದೆಯೂ ಕೊವಿಡ್ನಿಂದ ಗುಣಮುಖರಾಗಿದ್ದಾರೆ ಎಂದಮೇಲೆ ಇಡೀ ದೇಶದ ಜನರಿಗೆ ವ್ಯಾಕ್ಸಿನ್ ನೀಡುವುದರಲ್ಲಿ ಅರ್ಥವಿಲ್ಲ ಎಂಬುದು ಪೂಜಾ ಬೇಡಿ ವಾದ ಆಗಿತ್ತು. ಅವರ ಈ ಅಭಿಪ್ರಾಯಕ್ಕೆ ಪರ-ವಿರೋಧ ವ್ಯಕ್ತವಾಗಿತ್ತು.
ಮಾಸ್ಕ್ ಧರಿಸುವುದರ ಬಗ್ಗೆ ಸರ್ಕಾರ ಜಾರಿ ಮಾಡಿದ್ದ ಕೆಲವು ನಿಯಮಗಳ ಬಗ್ಗೆಯೂ ಅವರು ತಕರಾರು ಎತ್ತಿದ್ದರು. ‘ನಿಮ್ಮ ಗಂಡನ ಜೊತೆ ಕಾರಿನಲ್ಲಿ ಕುಳಿತಾಗ ನೀವು ಮಾಸ್ಕ್ ಧರಿಸಬೇಕು. ಆದರೆ ಮನೆಯಲ್ಲಿ ಗಂಡನಿಗೆ ಕಿಸ್ ಮಾಡಬಹುದು. ಇದು ತೀರಾ ವಿಚಿತ್ರ. ಅದಕ್ಕೂ ಹೆಚ್ಚು ವಿಚಿತ್ರ ಏನೆಂದರೆ, ಕಾರಿನಿಂದ ಹೊರಗಿಳಿದು ರೆಸ್ಟೊರೆಂಟ್ಗೆ ತೆರಳಿದಾಗ ಅಲ್ಲಿ ಅಪರಿಚಿತರು, ಸ್ನೇಹಿತರ ಜೊತೆ ಮಾಸ್ಕ್ ಇಲ್ಲದೆಯೂ ಕುಳಿತುಕೊಳ್ಳಬಹುದು’ ಎಂದು ಪೂಜಾ ವ್ಯಂಗ್ಯವಾಡಿದ್ದರು. ಆ ಮೂಲಕ ಅವರು ಹೆಚ್ಚು ಸುದ್ದಿ ಆಗಿದ್ದರು.
ಪೂಜಾ ಬೇಡಿ ಕುರಿತು ಇಂಗ್ಲಿಷ್ನಲ್ಲಿ ಓದಲಿ ಇಲ್ಲಿ ಕ್ಲಿಕ್ ಮಾಡಿ
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:11 am, Wed, 11 May 22