ಸಿನಿಮಾ ನಟಿಯರ ತ್ವಚೆ ಮಿರಮಿರನೆ ಮಿಂಚುತ್ತ ಇರುತ್ತದೆ. ಅದನ್ನು ಕಂಡು ಅಭಿಮಾನಿಗಳು ಫಿದಾ ಆಗುತ್ತಾರೆ. ಆದರೆ ಅಸಲಿಯತ್ತು ಹಾಗಿರುವುದಿಲ್ಲ. ಆ ರೀತಿ ಕಾಂತಿಯುತ ಚರ್ಮದ ಹಿಂದೆ ಬಗೆಬಗೆಯ ಮೇಕಪ್ ಕೈವಾಡ ಇರುತ್ತದೆ. ಆದರೆ ಬಹುತೇಕ ನಟಿಯರು ಅದನ್ನು ಬಹಿರಂಗವಾಗಿ ಒಪ್ಪಿಕೊಳ್ಳುವುದಿಲ್ಲ. ಬಾಲಿವುಡ್ ನಟಿ ಯಾಮಿ ಗೌತಮ್ (Yami Gautam) ಅವರು ಈ ವಿಚಾರದಲ್ಲಿ ಭಿನ್ನ ನಿಲುವು ತಾಳಿದ್ದಾರೆ. ತಮಗೆ ಇರುವ ಚರ್ಮದ ಸಮಸ್ಯೆ (Skin Problem) ಬಗ್ಗೆ ಅವರು ಈಗಾಗಲೇ ಬಹಿರಂಗ ಪಡಿಸಿದ್ದಾರೆ. ಆ ಕುರಿತಂತೆ ಅವರು ಮಾಧ್ಯಮವೊಂದರ ಜೊತೆ ಮತ್ತೊಮ್ಮೆ ಮಾತನಾಡಿದ್ದಾರೆ. ಯಾಮಿ ಗೌತಮ್ ಅವರಿಗೆ ಕೆರಟೋಸಿಸ್ ಪಿಲಾರಸ್ (Keratosis-Pilaris) ಎಂಬ ಚರ್ಮದ ಸಮಸ್ಯೆ ಇದೆ. ಇದನ್ನು ಜಗತ್ತಿನ ಎದುರು ಬಹಿರಂಗಪಡಿಸಿದ ನಂತರ ಅವರು ನಿರಾಳ ಆಗಿದ್ದಾರೆ!
ಕೆರಟೋಸಿಸ್ ಪಿಲಾರಸ್ ಸಮಸ್ಯೆ ಯಾಮಿ ಗೌತಮ್ ಅವರನ್ನು ಬಹಳ ಸಮಯದಿಂದ ಕಾಡುತ್ತಿದೆ. ಇದೇನೂ ಗಂಭೀರ ಸಮಸ್ಯೆ ಅಲ್ಲ. ಆದರೆ ಎಷ್ಟೇ ಪ್ರಯತ್ನಿಸಿದರೂ ಅವರಿಗೆ ಇದಕ್ಕೆ ಪರಿಹಾರ ಸಿಕ್ಕಿಲ್ಲ. ಚರ್ಮದ ಮೇಲ್ಭಾಗದಲ್ಲಿ ಚಿಕ್ಕ ಚಿಕ್ಕ ಗುಳ್ಳೆಗಳು ಆಗುತ್ತವೆ. ಈ ಗುಳ್ಳೆಗಳಿಂದ ಉರಿ, ತುರಿಕೆ, ನೋವು ಏನೂ ಇರುವುದಿಲ್ಲ. ಇದು ಕೆರಟೋಸಿಸ್ ಪಿಲಾರಸ್ ಲಕ್ಷಣ. ಹದಿಹರೆಯಲ್ಲಿ ಇದ್ದಾಗಲೇ ಯಾಮಿ ಗೌತಮ್ ಅವರಿಗೆ ಈ ಸಮಸ್ಯೆ ಕಾಣಿಸಿಕೊಂಡಿತು. ಅಂದಿನಿಂದ ಇದನ್ನು ಮುಚ್ಚಿಟ್ಟುಕೊಂಡೇ ಇದ್ದ ಅವರು ಅನೇಕ ಸವಾಲುಗಳನ್ನು ಎದುರಿಸಿದ್ದಾರೆ.
ತಮಗೆ ಇಂಥದ್ದೊಂದು ಸಮಸ್ಯೆ ಇದೆ ಎಂದು ಗೊತ್ತಾದಾಗಿನಿಂದ, ಅದನ್ನು ಒಪ್ಪಿಕೊಂಡು ಬಹಿರಂಗಪಡಿಸುವ ನಿರ್ಧಾರ ತೆಗೆದುಕೊಳ್ಳುವವರೆಗಿನ ಅವರ ಪಯಣ ತುಂಬ ಚಾಲೆಂಜಿಂಗ್ ಆಗಿತ್ತು. ಒಮ್ಮೆ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಸಮಸ್ಯೆಯನ್ನು ಜಗತ್ತಿನ ಮುಂದಿಟ್ಟ ಬಳಿಕ ಅವರಿಗೆ ಈ ವಿಚಾರದಲ್ಲಿ ನಿರಾಳ ಭಾವ ಆವರಿಸಿದೆ. ಈಗ ಅವರಿಗೆ ಜನರಿಂದ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿದೆ. ಅದಕ್ಕಾಗಿ ಅವರು ಸಂತಸಗೊಂಡಿದ್ದಾರೆ.
‘ಸತ್ಯವನ್ನು ನಿಮ್ಮೆದುರು ಒಪ್ಪಿಕೊಳ್ಳಲು ಧೈರ್ಯ ಮಾಡಿದ್ದೇನೆ. ನಾನು ಹದಿಹರೆಯದಲ್ಲಿ ಇರುವಾಗಲೇ ಈ ಸಮಸ್ಯೆ ಇರುವುದು ಗೊತ್ತಾಯಿತು. ಇನ್ನೂ ಇದು ವಾಸಿ ಆಗಿಲ್ಲ. ತುಂಬ ವರ್ಷಗಳಿಂದ ಇದನ್ನು ನಿಭಾಯಿಸುತ್ತಿದ್ದೇನೆ. ಆದರೆ ಇಂದು ನನ್ನ ನ್ಯೂನತೆಯನ್ನು ಒಪ್ಪಿಕೊಂಡು, ಭಯ ಮತ್ತು ಅಭದ್ರತೆಯನ್ನು ತೊಲಗಿಸುವ ಧೈರ್ಯ ಮಾಡಿದ್ದೇನೆ’ ಎಂದು ಯಾಮಿ ಗೌತಮ್ ಅವರು ಮೊದಲ ಬಾರಿಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.
ಇದನ್ನೂ ಓದಿ:
ಯಾಮಿ ಗೌತಮ್ ಪೋಸ್ಟ್ನಲ್ಲಿ ಕಂಗನಾ ಕಿರಿಕ್; ಬಾಲಿವುಡ್ ನಟನಿಗೆ ಚಪ್ಪಲಿ ತೋರಿಸುವ ಬಗ್ಗೆ ಮಾತನಾಡಿದ ನಟಿ
ಎಷ್ಟು ಕೋಟಿ ಕೊಟ್ಟರೂ ಈ ಮದುಮಗಳು ಧರಿಸಿದ ಸೀರೆಗೆ ಬೆಲೆ ಕಟ್ಟೋಕಾಗಲ್ಲ; ಏನಿದರ ವಿಶೇಷ?