ಸೈಫ್ ಅಲಿ ಖಾನ್ ಅನ್ನು ಮರೆತ ಪ್ರಭಾಸ್ ಹಾಗೂ ಆದಿಪುರುಷ್ ತಂಡ: ಈ ಮರೆವು ಉದ್ದೇಶಪೂರ್ವಕವೇ?

|

Updated on: Jun 07, 2023 | 5:00 PM

Adipurush: ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ನಿನ್ನೆ(ಜೂನ್ 06) ಅದ್ದೂರಿಯಾಗಿ ನೆರವೇರಿದೆ. ಆದರೆ ಈ ಕಾರ್ಯಕ್ರಮದಲ್ಲಿ ಸೈಫ್ ಅಲಿ ಖಾನ್ ಅನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಯ್ತು.

ಸೈಫ್ ಅಲಿ ಖಾನ್ ಅನ್ನು ಮರೆತ ಪ್ರಭಾಸ್ ಹಾಗೂ ಆದಿಪುರುಷ್ ತಂಡ: ಈ ಮರೆವು ಉದ್ದೇಶಪೂರ್ವಕವೇ?
ಆದಿಪುರುಷ್-ಸೈಫ್
Follow us on

ಆದಿಪುರುಷ್ (Adipurush) ಚಿತ್ರತಂಡ ನಿನ್ನೆ (ಜೂನ್ 06) ತಿರುಪತಿಯಲ್ಲಿ ಅದ್ಧೂರಿಯಾಗಿ ಪ್ರೀ ರಿಲೀಸ್ ಇವೆಂಟ್ (Pre Release Event) ಮಾಡಿದೆ. ಪ್ರಭಾಸ್ ಸೇರಿದಂತೆ ಚಿತ್ರತಂಡದ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದು ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪ್ರಭಾಸ್ (Prabhas), ಕೃತಿ ಸೆನನ್, ಹನುಮಂತ ಪಾತ್ರಧಾರಿ ದೇವದತ್ತ ನಾಗರೆ, ಲಕ್ಷ್ಮಣ ಪಾತ್ರಧಾರಿ ಸನ್ನಿ ಸಿಂಗ್ ಅವರುಗಳು ನಿನ್ನೆಯ ಕಾರ್ಯದಲ್ಲಿ ಹೈಲೈಟ್ ಆದರು. ಆದರೆ ಆದಿಪುರುಷ್ ಸಿನಿಮಾದಲ್ಲಿನ ಪ್ರಮುಖ ನಟನನ್ನೇ ಚಿತ್ರತಂಡ ಮರೆತುಬಿಟ್ಟಿತು. ಅದುವೇ ಸೈಫ್ ಅಲಿ ಖಾನ್.

ಸಿನಿಮಾಕ್ಕೆ ಹೀರೋವಿನಷ್ಟೆ ಪ್ರಾಧಾನ್ಯತೆ ವಿಲನ್​ಗೆ ಸಹ ಇರುತ್ತದೆ. ಆದಿಪುರುಷ್ ಸಿನಿಮಾದಲ್ಲಿ ವಿಲನ್ ಆಗಿರುವ ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್ ಸ್ಟಾರ್ ಸೈಫ್ ಅಲಿ ಖಾನ್ ಇದೇ ಮೊದಲ ಬಾರಿಗೆ ಸ್ಟಾರ್​ಗಿರಿಯಿಂದ ಹೊರಗೆ ಬಂದು ದಕ್ಷಿಣ ಭಾರತದ ಹೀರೋ ಎದುರು ವಿಲನ್ ಪಾತ್ರವನ್ನು ಒಪ್ಪಿಕೊಂಡು ರಿಸ್ಕ್ ತೆಗೆದುಕೊಂಡಿದ್ದಾರೆ. ಆದರೆ ಆದಿಪುರುಷ್ ಚಿತ್ರತಂಡ ಸೈಪ್ ಅಲಿ ಖಾನ್​ರ ರಿಸ್ಕ್ ಅನ್ನು ಗುರುತಿಸಿಲ್ಲ. ನಿನ್ನೆ ನಡೆದ ಸಂಭ್ರಮದಲ್ಲಿ ಪ್ರಭಾಸ್ ಆಗಲಿ, ನಿರ್ದೇಶಕ ಓಂ ರಾವತ್ ಆಗಲಿ ಇನ್ನಿತರೆ ನಟರಾಗಲಿ ಸೈಫ್ ಅಲಿ ಖಾನ್ ಅನ್ನು ಸೌಜನ್ಯಕ್ಕೂ ನೆನಪಿಸಿಕೊಳ್ಳಲಿಲ್ಲ.

ಸೈಫ್ ಅಲಿ ಖಾನ್ ಅನ್ನು ಬೇಕೆಂದೇ ಚಿತ್ರತಂಡ ಹೊರಗಿಟ್ಟಿತೇ ಎಂಬ ಅನುಮಾನ ಮೂಡಿದೆ. ಸೈಫ್ ಅಲಿ ಖಾನ್ ಅವರನ್ನು ಕಾರ್ಯಕ್ರಮದಿಂದ ಹೊರಗಿಡಲು ಹಾಗೂ ಅವರನ್ನು ಕಾರ್ಯಕ್ರಮದಲ್ಲಿ ನೆನಪಿಸಿಕೊಳ್ಳದೇ ಇರುವುದಕ್ಕೆ ಅವರ ಧರ್ಮವೇ ಕಾರಣವಿರಬಹುದು ಎನ್ನಲಾಗುತ್ತಿದೆ. ಅಥವಾ ಸೈಫ್ ಅಲಿ ಖಾನ್ ಅನ್ನು ಶ್ರೀರಾಮನ ಕುರಿತಾದ ಕಾರ್ಯಕ್ರಮಕ್ಕೆ ಕರೆಸಿದರೆ ಹಿಂದುಪರರು ವಿವಾದ ಎಬ್ಬಿಸಬಹುದು ಎಂಬ ಕಾರಣಕ್ಕೆ ಸೈಪ್ ಅಲಿ ಖಾನ್​ಗೆ ಆಹ್ವಾನ ನೀಡಿಲ್ಲ ಎಂಬ ಗುಮಾನಿಯೂ ಇದೆ.

ರಾವಣನ ಪಾತ್ರವನ್ನು ಸೈಫ್ ಅಲಿ ಖಾನ್​ಗೆ ನೀಡಿದಾಗಲೂ ಕೆಲವರು ವಿವಾದ ಎಬ್ಬಿಸಿದ್ದರು. ರಾವಣನಂತಹಾ ಅಪ್ಪಟ ಬ್ರಾಹ್ಮಣ, ಹಿಂದೂ ಪಾತ್ರವನ್ನು ಮುಸ್ಲಿಂ ವ್ಯಕ್ತಿಗೆ ನೀಡಬಾರದಿತ್ತು ಎಂದಿದ್ದರು. ಅದಾದ ಬಳಿಕ ಸಂದರ್ಶನವೊಂದರಲ್ಲಿ ಆದಿಪುರುಷ್ ಸಿನಿಮಾ ಬಗ್ಗೆ ಮಾತನಾಡಿದ್ದ ಸೈಫ್ ಅಲಿ ಖಾನ್, ರಾವಣನ ಜ್ಞಾನ ಇತ್ಯಾದಿ ವಿಷಯಗಳ ಬಗ್ಗೆ ಮಾತನಾಡಿ ರಾವಣನೂ ಒಳ್ಳೆಯವನೇ ಎಂದಿದ್ದರು. ಇದು ಸಹ ವಿವಾದ ಎಬ್ಬಿಸಿತ್ತು, ಕೊನೆಗೆ ಸೈಫ್ ಅಲಿ ಖಾನ್ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಮಾತಿಗೆ ಕ್ಷಮೆ ಕೇಳಿದರು. ಈ ಎಲ್ಲ ವಿವಾದಗಳನ್ನು ಗಮನದಲ್ಲಿಟ್ಟುಕೊಂಡು ಸೈಫ್ ಅಲಿ ಖಾನ್ ಅನ್ನು ಕಾರ್ಯಕ್ರಮದಿಂದ ದೂರ ಇರಿಸಿರುವ ಸಾಧ್ಯತೆ ಇದೆ.

ಆದಿಪುರುಷ್ ಸಿನಿಮಾವು ರಾಮಾಯಣದ ಕತೆಯನ್ನು ಒಳಗೊಂಡಿದೆ. ಸಿನಿಮಾದಲ್ಲಿ ಶ್ರೀರಾಮನ ಪಾತ್ರವನ್ನು ಪ್ರಭಾಸ್ ನಟಿಸಿದ್ದಾರೆ. ಸೀತೆ ಪಾತ್ರದಲ್ಲಿ ಕೃತಿ ಸೆನನ್ ನಟಿಸಿದ್ದಾರೆ. ಹನುಮಂತನ ಪಾತ್ರದಲ್ಲಿ ದೇವದತ್ತ ನಾಗರೆ, ಲಕ್ಷ್ಮಣನ ಪಾತ್ರದಲ್ಲಿ ಸನ್ನಿ ಸಿಂಗ್ ನಟಿಸಿದ್ದಾರೆ. ಸೈಫ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಓಂ ರಾವತ್ ನಿರ್ದೇಶನ ಮಾಡಿದ್ದಾರೆ. ಟಿ-ಸೀರೀಸ್​ನ ಭೂಷಣ್ ಕುಮಾರ್ ನಿರ್ಮಾಣ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:53 pm, Wed, 7 June 23