ನೇಪಾಳದಲ್ಲಿ ಆದಿಪುರುಷ್ ಸಿನಿಮಾ ಬಿಡುಗಡೆಗೆ ತಡೆ: ಸೀತೆಯ ಕುರಿತ ಆ ಸಂಭಾಷಣೆ ತೆಗೆಯುವಂತೆ ಒತ್ತಾಯ
Adipurush: ಆದಿಪುರುಷ್ ಸಿನಿಮಾದ ಶೋಗಳನ್ನು ನೇಪಾಳದಲ್ಲಿ ರದ್ದು ಮಾಡಲಾಗಿದೆ. ಸಿನಿಮಾದಲ್ಲಿ ಸೀತೆಯ ಕುರಿತಾಗಿ ಇರುವ ಸಂಭಾಷಣೆಯೊಂದು ನೇಪಾಳದಲ್ಲಿ ವಿವಾದ ಎಬ್ಬಿಸಿದೆ.
ಆದಿಪುರುಷ್ (Adipurush) ಸಿನಿಮಾ ಕೊನೆಗೂ ಇಂದು (ಜೂನ್ 16) ತೆರೆಗೆ ಬಂದಿದೆ. ಆರಂಭವಾದಾಗಿನಿಂದಲೂ ಒಂದಲ್ಲ ಒಂದು ಸಮಸ್ಯೆಗಳಿಗೆ ಗುರಿಯಾಗಿದ್ದ ಈ ಸಿನಿಮಾಕ್ಕೆ ಈಗಲೂ ಸಂಕಷ್ಟಗಳಿಂದ ಮುಕ್ತಿ ಸಿಕ್ಕಿಲ್ಲ. ಸಿನಿಮಾ ಬಿಡುಗಡೆ ಬಳಿಕ ಹಲವರು ಸಿನಿಮಾದ ಬಗ್ಗೆ ಋಣಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ಆದಿಪುರುಷ್ ಸಿನಿಮಾದ ಬಿಡುಗಡೆಯನ್ನು ನೇಪಾಳದಲ್ಲಿ (Nepal) ತಡೆ ಹಿಡಿಯಲಾಗಿದ್ದು, ಸಿನಿಮಾದಲ್ಲಿನ ಒಂದು ಸಂಭಾಷಣೆಯನ್ನು ತೆಗೆಯಲೇ ಬೇಕೆಂದು ಕಠ್ಮಂಡುವಿನ (Kathmandu) ಮೇಯರ್ ಸೇರಿದಂತೆ ಇನ್ನೂ ಕೆಲವರು ಒತ್ತಾಯಿಸಿದ್ದಾರೆ.
ಆದಿಪುರುಷ್ ಸಿನಿಮಾದಲ್ಲಿ ಸೀತೆ ಭಾರತದ ಮಗಳು ಎಂಬ ಸಂಭಾಷಣೆ ಇದೆ. ಆದರೆ ಈ ಸಂಭಾಷಣೆಯನ್ನು ತೆಗೆಯುವಂತೆ ಕೆಲ ದಿನಗಳ ಹಿಂದೆ ನೇಪಾಳ ಸಿನಿಮಾ ಸೆನ್ಸಾರ್ ಬೋರ್ಡ್ ಸಿನಿಮಾದ ನಿರ್ಮಾಣ ಸಂಸ್ಥೆಗೆ ಸೂಚಿಸಿತ್ತು. ಅಂತೆಯೇ ನೇಪಾಳದಲ್ಲಿ ಪ್ರದರ್ಶನವಾಗುವ ಆದಿಪುರುಷ್ ಸಿನಿಮಾದ ಅವತರಣಿಕೆಯಲ್ಲಿ ಈ ಸಂಭಾಷಣೆಯನ್ನು ತೆಗೆಯಲಾಗಿತ್ತು. ಆದರೆ ಭಾರತದಲ್ಲಿ ಹಾಗೂ ಇತರೆ ದೇಶಗಳಲ್ಲಿ ಪ್ರದರ್ಶನವಾಗುವ ಪ್ರಿಂಟ್ಗಳಲ್ಲಿ ಹಾಗೆಯೇ ಉಳಿಸಿಕೊಳ್ಳಲಾಗಿದೆ.
ನೇಪಾಳದ ಸೆನ್ಸಾರ್ ಮಂಡಳಿಯ ಆಕ್ಷೇಪದ ಬಳಿಕ ಸಂಭಾಷಣೆಯನ್ನು ತೆಗೆದರೂ ಸಹ ನೇಪಾಳದ ಹಲವೆಡೆ ಆದಿಪುರುಷ್ ಸಿನಿಮಾ ಶೋಗಳನ್ನು ರದ್ದು ಮಾಡಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸಿನಿಮಾದ ಶೋಗಳನ್ನು ರದ್ದು ಮಾಡಲಾಗಿದೆ ಎನ್ನಲಾಗಿದೆ. ಇದರ ಜೊತೆಗೆ ನೇಪಾಳದ ರಾಜಧಾನಿ ಕಠ್ಮಂಡುವಿನ ಮೇಯರ್ ಶಾ ಸೀತೆ ಭಾರತದ ಮಗಳು ಎಂಬ ಸಂಭಾಷಣೆಯನ್ನು ಭಾರತದಲ್ಲಿ ಮಾತ್ರವೇ ಅಲ್ಲದೆ ಎಲ್ಲೆಡೆ ಪ್ರದರ್ಶಿತವಾಗುತ್ತಿರುವ ಆವೃತ್ತಿಗಳಿಂದಲೂ ತೆಗೆಯಬೇಕು ಇಲ್ಲವಾದರೆ ಸಿನಿಮಾವನ್ನು ಬ್ಯಾನ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:Adipurush OTT Release: ಯಾವ ಒಟಿಟಿಯಲ್ಲಿ ಬರಲಿದೆ ‘ಆದಿಪುರುಷ್’ ಸಿನಿಮಾ? ಡೇಟ್ ಬಗ್ಗೆ ಶುರುವಾಗಿದೆ ಚರ್ಚೆ
ವಿವಾದ ಏನೆಂದರೆ, ಭಾರತದ ಬಿಹಾರ ರಾಜ್ಯದ ಸೀತಾಮಹರಿ ಜಿಲ್ಲೆಯ ಸೀತಾಕುಂದ್ ಎಂಬಲ್ಲಿ ಸೀತಾಮಾತೆ ಜನಿಸಿದಳು ಎಂದು ನಂಬಲಾಗಿದೆ. ಸೀತಾಕುಂದ್ನಲ್ಲಿ ಸೀತೆಯ ದೇವಾಲಯವೂ ಇದೆ. ಶ್ರೀರಾಮನನ್ನು ಅಳಿಯನೆಂದೇ ಇಲ್ಲಿನ ಜನ ನಂಬುತ್ತಾರೆ. ಆದರೆ ನೇಪಾಳಿಗರು, ಸೀತೆಯ ಜನ್ಮಸ್ಥಳ ನೇಪಾಳ ಎಂದು ವಾದಿಸುತ್ತಾರೆ. ಈಗ ನೇಪಾಳದಲ್ಲಿರುವ ಜನಕಪುರದಲ್ಲಿ ಸೀತೆ ಜನಿಸಿದಳು ಎಂಬ ವಾದವೂ ಇದೆ. ನೇಪಾಳ ರಾಜ್ಯವು ಹದಿನೆಂಟು ಮಂದಿಯನ್ನು ‘ರಾಷ್ಟ್ರೀಯ ಬಿಬೂತಿ’ (ದೇಶದ ಅತ್ಯುತ್ತಮರು) ಎಂದು ಹೆಸರಿಸಿದ್ದು ಅವರಲ್ಲಿ ಸೀತಾಮಾತೆ ಸಹ ಒಬ್ಬರಾಗಿದ್ದಾರೆ. ಹದಿನೆಂಟು ಮಂದಿ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಗೌತಮ ಬುದ್ಧನಿಗೆ ನೇಪಾಳಿ ಜನ ನೀಡಿದ್ದಾರೆ.
ಆದಿಪುರುಷ್ ಸಿನಿಮಾದಲ್ಲಿ ಸೀತಾಮಾತೆಯ ಪಾತ್ರದಲ್ಲಿ ಕೃತಿ ಸೆನನ್ ನಟಿಸಿದ್ದಾರೆ. ಶ್ರೀರಾಮನ ಪಾತ್ರದಲ್ಲಿ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಹನುಮಂತನ ಪಾತ್ರದಲ್ಲಿ ದೇವದತ್ತ ನಾಗರೆ, ಲಕ್ಷ್ಮಣನ ಪಾತ್ರದಲ್ಲಿ ಸನ್ನಿ ಸಿಂಗ್ ಹಾಗೂ ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದಾರೆ. ಓಂ ರಾವತ್ ಸಿನಿಮಾ ನಿರ್ದೇಶನ ಮಾಡಿದ್ದು, ಇಂದು ಬಿಡುಗಡೆ ಆಗಿರುವ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿವೆ. ಹಲವರು ಸಿನಿಮಾ ಚೆನ್ನಾಗಿಲ್ಲವೆಂದು ಕಮೆಂಟ್ ಮಾಡಿದ್ದಾರೆ. ಕೆಲವರು ಸಿನಿಮಾ ಅದ್ಭುತ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ