ಆದಿಪುರುಷ್ ಚೆನ್ನಾಗಿಲ್ಲ ಎಂದ ಸಿನಿಮಾ ಪ್ರೇಮಿಯ ಥಳಿಸಿದ ಪ್ರಭಾಸ್ ಅಭಿಮಾನಿಗಳು
Adipurush: ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಬಗ್ಗೆ ಎಲ್ಲೆಡೆ ಋಣಾತ್ಮಕ ವಿಮರ್ಶೆಗಳು ಕೇಳಿ ಬರುತ್ತಿವೆ. ಹೈದರಾಬಾದ್ನಲ್ಲಿ ಯುವಕನೊಬ್ಬ ಸಿನಿಮಾ ಚೆನ್ನಾಗಿಲ್ಲ ಎಂದಿದ್ದಕ್ಕೆ ಪ್ರಭಾಸ್ ಅಭಿಮಾನಿಗಳು ಹಲ್ಲೆ ಮಾಡಿದ್ದಾರೆ.
ಪ್ರಭಾಸ್ (Prabhas) ನಟನೆಯ ಬಹುನಿರೀಕ್ಷಿತ ಆದಿಪುರುಷ್ (Adipurush) ಸಿನಿಮಾ ಇಂದು (ಜೂನ್ 16) ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಹಲವರು ಋಣಾತ್ಮಕ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕೆಲವರಂತೂ ಸಿನಿಮಾ ತೀರ ಕಳಪೆಯಾಗಿದೆ ಎಂದು ಟೀಕಿಸಿದ್ದಾರೆ. ಆದರೆ ಪ್ರಭಾಸ್ ಅಭಿಮಾನಿಗಳು (Prabhas Fans) ಆದಿಪುರುಷ್ ಅದ್ಭುತವಾಗಿದೆ ಎನ್ನುತ್ತಿದ್ದು, ಸಿನಿಮಾ ಚೆನ್ನಾಗಿಲ್ಲ ಎಂದವರ ವಿರುದ್ಧ ಆನ್ಲೈನ್ನಲ್ಲಿ ಹಾಗೂ ಕೆಲವೆಡೆ ಆಫ್ಲೈನ್ನಲ್ಲೂ ಜಗಳಕ್ಕೆ ನಿಂತಿದ್ದಾರೆ. ತೆಲುಗು ರಾಜ್ಯದಲ್ಲಿ ಪ್ರಭಾಸ್ ಅಭಿಮಾನಿಗಳು, ಆದಿಪುರುಷ್ ಚೆನ್ನಾಗಿಲ್ಲ ಎಂದ ಸಿನಿಮಾ ಪ್ರೇಮಿಯೊಬ್ಬನ ಮೇಲೆ ಹಲ್ಲೆ ಮಾಡಿದ್ದಾರೆ.
ಹೈದರಾಬಾದ್ನ ಪ್ರಸಾದ್ ಮಲ್ಟಿಪ್ಲೆಕ್ಸ್ನಲ್ಲಿ ಆದಿಪುರುಷ್ ಸಿನಿಮಾ ನೋಡಿ ಹೊರಗೆ ಬಂದ ಯುವಕನೊಬ್ಬ ಹೊರಗೆ ಮೈಕ್ ಹಿಡಿದು ಕಾಯುತ್ತಿದ್ದ ಯೂಟ್ಯೂಬರ್ಗಳ ಬಳಿ ಸಿನಿಮಾ ವಿಮರ್ಶೆ ಹೇಳಿದ್ದು, ಆದಿಪುರುಷ್ ಸಿನಿಮಾ ತೀರಾ ಕಳಪೆಯಾಗಿದೆ ಎಂದಿದ್ದಾನೆ. ಪ್ರಭಾಸ್ಗೆ ಶ್ರೀರಾಮನ ಪಾತ್ರ ಸರಿಯಾಗಿ ಹೊಂದಿಲ್ಲ, ಸಿನಿಮಾದ ವಿಎಫ್ಎಕ್ಸ್ ಅಂತೂ ಬಹಳ ಕೆಟ್ಟದಾಗಿದೆ. ರಾಮಾಯಣವನ್ನು ಓಂ ರಾವತ್ ಹಾಳು ಮಾಡಿದ್ದಾನೆ. ಲಂಕಿಣಿ ಸೇರಿದಂತೆ ಕೆಲವು ಪಾತ್ರಗಳೇದ ಮಾಯವಾಗಿವೆ. ರಾವಣನ ಸೈನ್ಯವನ್ನು ದೆವ್ವಗಳಂತೆ ತೋರಿಸಲಾಗಿದೆ. ಸೀತೆ ಪಾತ್ರ ಕೇವಲ ಹೆಸರಿಗಷ್ಟೆ ಇದೆ ಇತ್ಯಾದಿ ಹೇಳಿಕೆಗಳನ್ನು ನೀಡಿದ್ದಾನೆ.
ಆತ ತನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲಿಯೇ ಅಲ್ಲಿಗೆ ಆಗಮಿಸಿದ ಒಂದಿಬ್ಬರು, ಸಿನಿಮಾ ಚೆನ್ನಾಗಿದೆ ಈ ವ್ಯಕ್ತಿ ಸರಿಯಾಗಿ ಸಿನಿಮಾ ನೋಡಿಲ್ಲ ಎಂದಿರುವುದಲ್ಲದೆ, ಸಿನಿಮಾ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಹೊಡೆಯುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಆದಿಪುರುಷ್ ಚೆನ್ನಾಗಿಲ್ಲ ಎಂದ ವ್ಯಕ್ತಿ ಸಹ ಕೋಪದಲ್ಲಿ ಹೊಡಿ ನೋಡೋಣ ಎನ್ನುತ್ತಿದ್ದಂತೆ ಕೆಲವರು ಸೇರಿಕೊಂಡು ಆದಿಪುರುಷ್ ಬಗ್ಗೆ ತನ್ನ ಅಭಿಪ್ರಾಯ ಹಂಚಿಕೊಂಡ ವ್ಯಕ್ತಿಯನ್ನು ಹಿಡಿದು ಹೊಡೆದಿದ್ದಾರೆ. ಈ ಹಲ್ಲೆಯ ದೃಶ್ಯ ಕ್ಯಾಮೆರಾದಲ್ಲಿ ದಾಖಲಾಗಿದೆ. ಅಭಿಮಾನಿಗಳ ಈ ಹಿಂಸಾತ್ಮಕ ವರ್ತನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಇದು ಮಾತ್ರವೇ ಅಲ್ಲದೆ, ಹೈದರಾಬಾದ್ನ ಬ್ರಮರಾಂಭ ಚಿತ್ರಮಂದಿರದಲ್ಲಿ ಹನುಮಂತನಿಗಾಗಿ ಮೀಸಲಿಟ್ಟ ಕುರ್ಚಿಯಲ್ಲಿ ವ್ಯಕ್ತಿಯೊಬ್ಬ ಕೂತು ಆದಿಪುರುಷ್ ಸಿನಿಮಾ ನೋಡಿದ್ದಕ್ಕೆ ಪ್ರಭಾಸ್ ಅಭಿಮಾನಿಗಳು ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾರೆ. ಮತ್ತೊಂದು ಚಿತ್ರಮಂದಿರದಲ್ಲಿ ಆದಿಪುರುಷ್ ಸಿನಿಮಾ ಇಷ್ಟವಾಗದ ಕಾರಣ ಕೆಲವು ಸಿನಿಮಾ ಪ್ರೇಮಿಗಳು ಚಿತ್ರಮಂದಿರದ ಸೀಟುಗಳನ್ನು ಮುರಿದಿದ್ದಾರೆ. ಚಿತ್ರಮಂದಿರದಲ್ಲಿದ್ದ ಗಾಜುಗಳನ್ನು ಒಡೆದಿದ್ದಾರೆ. ಪ್ರಭಾಸ್ ಅಭಿಮಾನಿಗಳ ಈ ಅತಿರೇಕದ ವರ್ತನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿದೆ.
ಆದಿಪುರುಷ್ ಸಿನಿಮಾ ರಾಮಾಯಣದ ಕತೆ ಆಧರಿಸಿದ್ದು ಸಿನಿಮಾದಲ್ಲಿ ಶ್ರೀರಾಮನ ಪಾತ್ರದಲ್ಲಿ ಪ್ರಭಾಸ್ ನಟಿಸಿದ್ದಾರೆ. ಸೀತೆಯ ಪಾತ್ರದಲ್ಲಿ ಕೃತಿ ಸೆನನ್, ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದಾರೆ. ಸಿನಿಮಾವನ್ನು ಓಂ ರಾವತ್ ನಿರ್ದೇಶನ ಮಾಡಿದ್ದು, ಭೂಷಣ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಋಣಾತ್ಮಕ ವಿಮರ್ಶೆಗಳು ವ್ಯಕ್ತವಾಗಿವೆ. ನಿರ್ದೇಶಕ ಓಂ ರಾವತ್ ರಾಮಾಯಣವನ್ನು ಸೂಕ್ತವಾಗಿ ತೆರೆಗೆ ತಂದಿಲ್ಲವೆಂದು ಹಲವರು ಆರೋಪಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ