Adipurush OTT Release: ಯಾವ ಒಟಿಟಿಯಲ್ಲಿ ಬರಲಿದೆ ‘ಆದಿಪುರುಷ್’ ಸಿನಿಮಾ? ಡೇಟ್ ಬಗ್ಗೆ ಶುರುವಾಗಿದೆ ಚರ್ಚೆ
Amazon Prime Video: ಪ್ರಭಾಸ್, ಕೃತಿ ಸನೋನ್, ಸೈಫ್ ಅಲಿ ಖಾನ್ ಮುಂತಾದ ಸ್ಟಾರ್ ನಟರು ‘ಆದಿಪುರುಷ್’ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹಾಗಾಗಿ ಭಾರಿ ಮೊತ್ತಕ್ಕೆ ಒಟಿಟಿ ಡೀಲ್ ಮುಗಿದಿದೆ.
ಇದು ಒಟಿಟಿ ಜಮಾನಾ. ಮನೆಯಲ್ಲೇ ಕುಳಿತು ಹೊಸ ಸಿನಿಮಾಗಳನ್ನು ನೋಡಲು ಪ್ರೇಕ್ಷಕರು ಬಯಸುತ್ತಾರೆ. ಚಿತ್ರಮಂದಿರದಲ್ಲಿ ಬಿಡುಗಡೆಯಾದ ಸಿನಿಮಾಗಳು ಆದಷ್ಟು ಬೇಗ ಒಟಿಟಿಗೆ ಬರಲಿ ಎಂದು ಕಾಯುವಂತಹ ಕಾಲ ಇದು. ಮೊದಲ ಲಾಕ್ಡೌನ್ ಬಳಿಕ ಒಟಿಟಿ (OTT) ಬಳಕೆ ಹೆಚ್ಚಾಯಿತು. ಈಗ ಎಲ್ಲ ಒಟಿಟಿ ಸಂಸ್ಥೆಗಳ ನಡುವೆ ಪೈಪೋಟಿ ಇದೆ. ಸ್ಟಾರ್ ನಟರ ಸಿನಿಮಾಗಳನ್ನು ಜನರಿಗೆ ತಲುಪಿಸುವಲ್ಲಿ ಈ ಸಂಸ್ಥೆಗಳು ಹಣಾಹಣಿ ನಡೆಸುತ್ತವೆ. ಇಂದು (ಜೂನ್ 16) ಚಿತ್ರಮಂದಿರದಲ್ಲಿ ಬಿಡುಗಡೆ ಆಗಿರುವ ‘ಆದಿಪುರುಷ್’ ಸಿನಿಮಾ (Adipurush) ಯಾವಾಗ ಒಟಿಟಿಗೆ ಬರಲಿದೆ ಎಂದು ಪ್ರೇಕ್ಷಕರು ಕಾಯುತ್ತಿದ್ದಾರೆ. ‘ಅಮೇಜಾನ್ ಪ್ರೈಂ ವಿಡಿಯೋ’ (Amazon Prime Video) ಪಾಲಿಗೆ ಈ ಸಿನಿಮಾದ ಒಟಿಟಿ ಪ್ರಸಾರ ಹಕ್ಕುಗಳು ಸಿಕ್ಕಿವೆ. ಪ್ರಭಾಸ್, ಕೃತಿ ಸನೋನ್, ಸೈಫ್ ಅಲಿ ಖಾನ್ ಮುಂತಾದ ಸ್ಟಾರ್ ನಟರು ಈ ಚಿತ್ರದಲ್ಲಿ ಅಭಿನಯಿಸಿರುವುದರಿಂದ ಭಾರಿ ಮೊತ್ತಕ್ಕೆ ಒಟಿಟಿ ಡೀಲ್ ಮುಗಿದಿದೆ ಎಂದು ಹೇಳಲಾಗುತ್ತಿದೆ. ಆದಷ್ಟು ಬೇಗ ಒಟಿಟಿ ರಿಲೀಸ್ ಡೇಟ್ ಬಹಿರಂಗ ಆಗಲಿ ಎಂದು ಪ್ರೇಕ್ಷಕರು ಕಾಯುತ್ತಿದ್ದಾರೆ.
ಮೂಲಗಳ ಪ್ರಕಾರ ಆಗಸ್ಟ್ 2ನೇ ವಾರದಲ್ಲಿ ‘ಆದಿಪುರುಷ್’ ಚಿತ್ರವು ಒಟಿಟಿಗೆ ಬರಲಿದೆ. ಇದು ಹೈಬಜೆಟ್ ಸಿನಿಮಾ ಆದ್ದರಿಂದ ಚಿತ್ರಮಂದಿರದಲ್ಲಿ ಹೆಚ್ಚು ಕಲೆಕ್ಷನ್ ಮಾಡಬೇಕಾದ ಅನಿವಾರ್ಯತೆ ಇದೆ. ಒಂದು ವಾರದಲ್ಲಿ ಎಷ್ಟು ಕಲೆಕ್ಷನ್ ಆಗಲಿದೆ ಎಂಬುದರ ಆಧಾರದ ಮೇಲೆ ಎಲ್ಲವೂ ನಿರ್ಧಾರ ಆಗಲಿದೆ. ಒಂದು ವೇಳೆ ದಿನದಿಂದ ದಿನಕ್ಕೆ ಕಲೆಕ್ಷನ್ ಹೆಚ್ಚಾದರೆ ಒಟಿಟಿ ರಿಲೀಸ್ ತಡವಾಗುತ್ತದೆ. ಕಲೆಕ್ಷನ್ ಕುಸಿದರೆ ಕೆಲವೇ ವಾರಗಳಲ್ಲಿ ಈ ಸಿನಿಮಾ ಒಟಿಟಿಗೆ ಬರುವ ಸಾಧ್ಯತೆ ಇರುತ್ತದೆ. ಇದು 3ಡಿ ಸಿನಿಮಾ ಆದ್ದರಿಂದ ದೊಡ್ಡ ಪರದೆಯಲ್ಲೇ ನೋಡಬೇಕು ಎಂಬ ಉದ್ದೇಶದಿಂದ ಪ್ರೇಕ್ಷಕರು ಚಿತ್ರಮಂದಿರದತ್ತ ಹೆಜ್ಜೆ ಹಾಕುತ್ತಿದ್ದಾರೆ.
ಇದನ್ನೂ ಓದಿ: ಹನುಮಂತನಿಗೆ ಕಾಯ್ದಿರಿಸಿದ ಸೀಟ್ ಮೇಲೆ ಕುಳಿತು ‘ಆದಿಪುರುಷ್’ ವೀಕ್ಷಣೆ; ನಡೆಯಿತು ಮಾರಣಾಂತಿಕ ಹಲ್ಲೆ
ಹಿಂದಿ ಪ್ರೇಕ್ಷಕರ ವಲಯದಲ್ಲಿ ‘ಆದಿಪುರುಷ್’ ಸಿನಿಮಾದ ಹವಾ ಜೋರಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಕೆಲವು ಮಾಲ್ಗಳಲ್ಲಿ ‘ಆದಿಪುರುಷ್’ ಸಿನಿಮಾದ ಟಿಕೆಟ್ಗಳು 2250 ರೂಪಾಯಿಗೆ ಮಾರಾಟ ಆಗಿವೆ. ಅಷ್ಟು ದುಬಾರಿ ಬೆಲೆ ಇದ್ದರೂ ಕೂಡ ಜನರು ಮುಗಿಬಿದ್ದು ಟಿಕೆಟ್ ಖರೀದಿ ಮಾಡಿದ್ದಾರೆ. ಮೊದಲ ದಿನ ಅನೇಕ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಆಗಿದೆ. ಆದ್ದರಿಂದ ಶುಕ್ರವಾರ (ಜೂನ್ 16) ಈ ಸಿನಿಮಾಗೆ 85 ಕೋಟಿ ರೂಪಾಯಿ ಕಲೆಕ್ಷನ್ ಆಗಲಿದೆ ಎಂದು ಕೆಲವರು ಅಂದಾಜಿಸಿದ್ದಾರೆ. ಕೇರಳ ಮತ್ತು ತಮಿಳುನಾಡಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಜನರು ಚಿತ್ರಮಂದಿರಕ್ಕೆ ಬಂದಿಲ್ಲ. ಹಾಗಾಗಿ ಗಲ್ಲಾಪೆಟ್ಟಿಗೆ ಗಳಿಕೆ ಮೇಲೆ ಹೊಡೆತ ಬೀಳಬಹುದು. ತಮಿಳುನಾಡು, ಕರ್ನಾಟಕ ಮತ್ತು ಕೇರಳದಲ್ಲಿ ‘ಆದಿಪುರುಷ್’ ಚಿತ್ರತಂಡದವರು ಸರಿಯಾದ ರೀತಿಯಲ್ಲಿ ಪ್ರಚಾರ ಮಾಡಿಲ್ಲ. ಆದ್ದರಿಂದ ಇಲ್ಲಿ ಕಲೆಕ್ಷನ್ ತಗ್ಗಬಹುದು.
ಇದನ್ನೂ ಓದಿ: Adipurush Movie: ‘ಓಂ ರಾವತ್ ದಯವಿಟ್ಟು ನಿಮ್ಮ ಅಡ್ರೆಸ್ ಕೊಡಿ’; ‘ಆದಿಪುರುಷ್’ ಸಿನಿಮಾ ನೋಡಿ ಸಿಟ್ಟಾದ ಫ್ಯಾನ್ಸ್
ಓಂ ರಾವತ್ ಅವರು ‘ಆದಿಪುರುಷ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಅಜಯ್ ದೇವಗನ್ ನಟಿಸಿದ್ದ ‘ತಾಜಾಜಿ’ ಸಿನಿಮಾವನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ ಅವರು ಈಗ ‘ಆದಿಪುರುಷ್’ ವಿಚಾರದಲ್ಲಿ ಟ್ರೋಲ್ ಆಗುತ್ತಿದ್ದಾರೆ. ಕೆಲವರಿಗೆ ಈ ಸಿನಿಮಾ ಇಷ್ಟ ಆಗಿಲ್ಲ. ರಾಮಾಯಣವನ್ನು ಓಂ ರಾವತ್ ಅವರು ಚಿತ್ರಿಸಿದ ರೀತಿಗೆ ಟೀಕೆ ವ್ಯಕ್ತವಾಗುತ್ತಿದೆ. ರಾಮ-ರಾವಣನ ನಡುವಿನ ಯುದ್ಧ ಒಂದು ರೀತಿಯಲ್ಲಿ ವಿಡಿಯೋ ಗೇಮ್ ಇದ್ದಂತೆ ಇದೆ ಎಂದು ಕೆಲವರು ವ್ಯಂಗ್ಯ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.