Adipurush: ‘ಆಂಜನೇಯನಿಗೆ ಇಂಥ ಸೀನ್​ ತೋರಿಸಿಬಿಟ್ರಲ್ಲೋ’: ‘ಆದಿಪುರುಷ್​’ ಚಿತ್ರದ ಗ್ಲಾಮರ್​ ಬಗ್ಗೆ ಜನರ ಟೀಕೆ

|

Updated on: Jun 19, 2023 | 8:31 PM

Vibhishana Wife in Adipurush: ‘ಆದಿಪುರುಷ್​’ ಸಿನಿಮಾದಲ್ಲಿ ಅನವಶ್ಯಕವಾಗಿ ಗ್ಲಾಮರ್​ ತೋರಿಸುವ ಪ್ರಯತ್ನ ಆಗಿದೆ! ಅದನ್ನು ಗಮನಿಸಿದ ವೀಕ್ಷಕರು ಚಿತ್ರತಂಡವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

Adipurush: ‘ಆಂಜನೇಯನಿಗೆ ಇಂಥ ಸೀನ್​ ತೋರಿಸಿಬಿಟ್ರಲ್ಲೋ’: ‘ಆದಿಪುರುಷ್​’ ಚಿತ್ರದ ಗ್ಲಾಮರ್​ ಬಗ್ಗೆ ಜನರ ಟೀಕೆ
ತೃಪ್ತಿ ತೋರಡ್ಮಲ್​, ದೇವದತ್ತ ನಾಗೆ
Follow us on

ಹತ್ತು ಹಲವು ಕಾರಣಗಳಿಂದಾಗಿ ‘ಆದಿಪುರುಷ್​’ ಸಿನಿಮಾ (Adipurush Movie) ಟ್ರೋಲ್​ ಆಗುತ್ತಿದೆ. ಪ್ರತಿ ಪಾತ್ರವನ್ನೂ ಇಟ್ಟುಕೊಂಡು ಟೀಕೆ ಮಾಡಲಾಗುತ್ತಿದೆ. ಯಾವುದೋ ಕಾಲ್ಪನಿಕ ಕಥೆಯುಳ್ಳ ಸಿನಿಮಾ ಆಗಿದ್ದರೆ ಇಷ್ಟು ಕಿರಿಕ್​ ಆಗುತ್ತಿರಲಿಲ್ಲ. ಆದರೆ ಇದು ರಾಮಾಯಣ ಆಧಾರಿತ ಸಿನಿಮಾ ಆದ್ದರಿಂದ ಜನರು ಎಲ್ಲವನ್ನೂ ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇನ್ನು, ಈ ಸಿನಿಮಾದವರು ಮಾಡಿದ ಪ್ರಚಾರ ತಂತ್ರಗಳ ಬಗ್ಗೆಯೂ ತಕರಾರು ತೆಗೆಯಲಾಗಿದೆ. ನಿರ್ದೇಶಕ ಓಂ ರಾವತ್​ (Om Raut) ಅವರು ‘ಆದಿಪುರುಷ್​’ ಸಿನಿಮಾದಲ್ಲಿ ಕೆಲವು ಅನಗತ್ಯವಾದ ಅಂಶಗಳನ್ನು ತುರುಕಿದ್ದಾರೆ. ಇಂಥ ಪೌರಾಣಿಕ ಕಥೆಯಲ್ಲಿ ಅನವಶ್ಯಕವಾಗಿ ಗ್ಲಾಮರ್​ ತೋರಿಸುವ ಪ್ರಯತ್ನ ಆಗಿದೆ. ಅದನ್ನು ಗಮನಿಸಿದ ವೀಕ್ಷಕರು ಚಿತ್ರತಂಡವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಮರಾಠಿ ನಟಿ ತೃಪ್ತಿ ತೋರಡ್ಮಲ್ (Trupti Toradmal) ಅವರು ಒಂದು ದೃಶ್ಯದಲ್ಲಿ ಗ್ಲಾಮರಸ್​ ಆಗಿ ಕಾಣಿಸಿಕೊಂಡಿದ್ದು, ಅದರ ಫೋಟೋ ವೈರಲ್​ ಆಗಿದೆ.

ರಾವಣನ ಸಹೋದರ ವಿಭೀಷಣನ ಹೆಂಡತಿಯಾದ ಸರಮಾ ಪಾತ್ರದಲ್ಲಿ ತೃಪ್ತಿ ತೋರಡ್ಮಲ್​ ನಟಿಸಿದ್ದಾರೆ. ಸರಮಾ ಪಾತ್ರವನ್ನು ನಿರ್ದೇಶಕ ಓಂ ರಾವತ್ ಅವರು ಗ್ಲಾಮರಸ್​ ಆಗಿ ತೋರಿಸಿದ್ದಾರೆ. ಒಂದು ದೃಶ್ಯದಲ್ಲಿ ಆಕೆ ತನ್ನ ಸೀರೆಯ ಸೆರಗನ್ನು ಸರಿ ಮಾಡಿಕೊಳ್ಳುವ ದೃಶ್ಯ ಇದೆ. ಅದರ ಅವಶ್ಯಕತೆ ಏನಿತ್ತು ಎಂದು ಪ್ರೇಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೇ, ‘ಆದಿಪುರುಷ್​’ ಸಿನಿಮಾ ಪ್ರದರ್ಶನ ಆಗುವ ಬಹುತೇಕ ಚಿತ್ರಮಂದಿರಗಳಲ್ಲಿ ಒಂದು ಸೀಟನ್ನು ಆಂಜನೇಯನಿಗೆ ಮೀಸಲಾಗಿ ಇಡಲಾಗುತ್ತಿದೆ. ಅದರಲ್ಲಿ ಹನುಮಂತನ ಫೋಟೋ ಇಟ್ಟು, ಪುಷ್ಪಾರ್ಚನೆ ಮಾಡಲಾಗುತ್ತಿದೆ. ‘ಚಿತ್ರಮಂದಿರದಲ್ಲಿ ಆಂಜನೇಯನನ್ನು ಕೂರಿಸಿ, ಇಂಥ ಸೀನ್​ ತೋರಿಸಿಬಿಟ್ರಲ್ಲೋ’ ಎಂದು ಟ್ವಿಟರ್​ನಲ್ಲಿ ಟ್ರೋಲ್​ ಮಡಲಾಗುತ್ತಿದೆ.

ಪ್ರಚಾರಕ್ಕಾಗಿ ‘ಆದಿಪುರುಷ್​’ ತಂಡದವರು ಮಾಡಿದ ಸರ್ಕಸ್​ಗಳು ಹಲವು. ಸಿನಿಮಾ ಪ್ರದರ್ಶನ ಆಗುವ ಎಲ್ಲ ಚಿತ್ರಮಂದಿರಗಳಲ್ಲಿ ಆಂಜನೇಯನಿಗಾಗಿ ಒಂದು ಸೀಟು ಮೀಸಲಿರಿಸಲು ಚಿತ್ರತಂಡ ಕರೆ ನೀಡಿತ್ತು. ಅದಕ್ಕೆ ಹಲವು ಮಲ್ಟಿಪ್ಲೆಕ್ಸ್​ ಮತ್ತು ಚಿತ್ರಮಂದಿರದವರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಆದರೆ ಸಿನಿಮಾದಲ್ಲಿ ಇಂಥ ದೃಶ್ಯಗಳು ಇರುವುದರಿಂದ ಆಂಜನೇಯನಿಗೆ ಅವಮಾನ ಮಾಡಿದಂತೆ ಆಗಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: Om Raut: ‘ಆದಿಪುರುಷ್​’ ಚಿತ್ರಕ್ಕೆ ಕೆಟ್ಟ ವಿಮರ್ಶೆ ಸಿಕ್ಕ ಬಳಿಕ ನಿರ್ದೇಶಕ ಓಂ ರಾವತ್​ ಪ್ರತಿಕ್ರಿಯೆ ಏನು?

ದೇವದತ್ತ ನಾಗೆ ಅವರು ಈ ಸಿನಿಮಾದಲ್ಲಿ ಆಂಜನೇಯನ ಪಾತ್ರ ಮಾಡಿದ್ದಾರೆ. ಅವರ ಅಭಿನಯವನ್ನು ಜನರು ಮೆಚ್ಚಿಕೊಂಡಿದ್ದಾರೆ. ಆದರೆ ಆ ಪಾತ್ರದ ಸಂಭಾಷಣೆ ಕಳಪೆ ಆಗಿದೆ ಎಂದು ಅನೇಕರು ಆಕ್ಷೇಪಿಸಿದ್ದಾರೆ. ಭಾರಿ ವಿರೋಧ ವ್ಯಕ್ತವಾದ ಬಳಿಕ ಆ ಡೈಲಾಗ್​ಗಳನ್ನು ಬದಲಾಯಿಸಲು ಚಿತ್ರತಂಡ ಒಪ್ಪಿಕೊಂಡಿದೆ. ರಾವಣನ ಪಾತ್ರವನ್ನು ತೋರಿಸಿದ ರೀತಿಯೂ ಸರಿಯಿಲ್ಲ ಎಂದು ಬಹುತೇಕರು ತಕರಾರು ತೆಗೆದಿದ್ದಾರೆ. ಬ್ರಾಹ್ಮಣನಾದ ರಾವಣನು ಮಾಂಸ ಮುಟ್ಟುವ ದೃಶ್ಯ ಈ ಚಿತ್ರದಲ್ಲಿ ಇದೆ. ಅದನ್ನು ನೆಟ್ಟಿಗರು ವಿರೋಧಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:32 pm, Mon, 19 June 23