Om Raut: ‘ಆದಿಪುರುಷ್’ ಚಿತ್ರಕ್ಕೆ ಕೆಟ್ಟ ವಿಮರ್ಶೆ ಸಿಕ್ಕ ಬಳಿಕ ನಿರ್ದೇಶಕ ಓಂ ರಾವತ್ ಪ್ರತಿಕ್ರಿಯೆ ಏನು?
Adipurush Movie: ‘ಆದಿಪುರುಷ್’ ಸಿನಿಮಾದಲ್ಲಿನ ಎಲ್ಲ ತಪ್ಪುಗಳಿಗೆ ನೇರವಾಗಿ ನಿರ್ದೇಶಕ ಓಂ ರಾವತ್ ಅವರನ್ನು ಹೊಣೆಯಾಗಿಸಲಾಗುತ್ತಿದೆ. ಹಲವು ರೀತಿಯಲ್ಲಿ ಟೀಕೆ ಮಾಡಲಾಗುತ್ತಿದೆ.
‘ಆದಿಪುರುಷ್’ ಸಿನಿಮಾ (Adipurush) ವಿಚಾರದಲ್ಲಿ ಪ್ರೇಕ್ಷಕರು ಅಂದುಕೊಂಡಿದ್ದೇ ಬೇರೆ, ಆಗಿದ್ದೇ ಬೇರೆ. ರಾಮಾಯಣದ ಕಥೆಯನ್ನು ದೊಡ್ಡ ಪರದೆ ಮೇಲೆ ನೋಡಲು ಹೋದ ಪ್ರೇಕ್ಷಕರಿಗೆ ಬೇಸರ ಆಗಿದೆ. ನಿರ್ದೇಶಕ ಓಂ ರಾವತ್ (Om Raut) ಅವರು ಈ ಸಿನಿಮಾವನ್ನು ಕಟ್ಟಿಕೊಟ್ಟ ರೀತಿಗೆ ಸಿನಿಪ್ರಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಹುತೇಕ ಜನರಿಗೆ ಈ ಸಿನಿಮಾ ಇಷ್ಟ ಆಗಿಲ್ಲ. ನೇರವಾಗಿ ಎಲ್ಲರೂ ಕೆಟ್ಟ ಪ್ರತಿಕ್ರಿಯೆ ನೀಡಿದ್ದಾರೆ. ಇದು ‘ಆದಿಪುರುಷ್’ ಚಿತ್ರತಂಡಕ್ಕೆ ನಿಜಕ್ಕೂ ಮುಜುಗರ ತರುವ ವಿಚಾರ. ಪ್ರಭಾಸ್ (Prabhas) ಅವರ ಅಭಿಮಾನಿಗಳಿಗೂ ಇದರಿಂದ ಬೇಸರ ಆಗಿದೆ. ಓಂ ರಾವತ್ ಅವರನ್ನು ಎಲ್ಲರೂ ಟೀಕೆ ಮಾಡುತ್ತಿದ್ದಾರೆ. ಈ ನಡುವೆ ಟ್ವೀಟ್ ಮಾಡಿರುವ ಅವರ ‘ಜೈ ಶ್ರೀರಾಮ್’ ಎಂದು ರಾಮನ ಜಪ ಮಾಡಿದ್ದಾರೆ. ಅದಕ್ಕೆ ಕಾರಣವೂ ಇದೆ.
‘ಆದಿಪುರುಷ್’ ಸಿನಿಮಾ ಪ್ರದರ್ಶನ ಆಗುವ ಎಲ್ಲ ಚಿತ್ರಮಂದಿರಗಳಲ್ಲೂ ಹನುಮಂತನಿಗಾಗಿ ಒಂದು ಸೀಟು ಮೀಸಲಿಡುವಂತೆ ಚಿತ್ರತಂಡ ಮನವಿ ಮಾಡಿಕೊಂಡಿತ್ತು. ಅದಕ್ಕೆ ಬಹುತೇಕ ಚಿತ್ರಮಂದಿರಗಳಿಂದ ಸ್ಪಂದನೆ ವ್ಯಕ್ತವಾಗಿದೆ. ಸೀಟು ಖಾಲಿ ಬಿಡುವುದು ಮಾತ್ರವಲ್ಲದೇ ಅದರ ಮೇಲೆ ಆಂಜನೇಯನ ಫೋಟೋ ಇಟ್ಟು ಪೂಜೆ ಮಾಡಲಾಗಿದೆ. ಹಲವು ಥಿಯೇಟರ್ಗಳ ಫೋಟೋ ಹಂಚಿಕೊಂಡಿರುವ ಓಂ ರಾವತ್ ಅವರು ಅದಕ್ಕೆ ‘ಜೈ ಶ್ರೀರಾಮ್’ ಎಂದು ಕ್ಯಾಪ್ಷನ್ ನೀಡಿ ಟ್ವೀಟ್ ಮಾಡಿದ್ದಾರೆ. ಇದನ್ನು ಹೊರತುಪಡಿಸಿ ಅವರು ಬೇರೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
‘ಆದಿಪುರುಷ್’ ಸಿನಿಮಾದಲ್ಲಿನ ಎಲ್ಲ ತಪ್ಪುಗಳಿಗೆ ನೇರವಾಗಿ ನಿರ್ದೇಶಕ ಓಂ ರಾವತ್ ಅವರನ್ನು ಹೊಣೆಯಾಗಿಸಲಾಗುತ್ತಿದೆ. ಹಳೇ ರಾಮಾಯಣ ಧಾರಾವಾಹಿಗೆ ಹೋಲಿಸಿ ಮಾತನಾಡಲಾಗುತ್ತಿದೆ. ರಾವಣನನ್ನು ತೋರಿಸಿದ ರೀತಿ ಸರಿಯಿಲ್ಲ. ಪ್ರಭಾಸ್ಗೆ ರಾಮನ ಪಾತ್ರ ಹೊಂದಿಕೆ ಆಗಿಲ್ಲ. ಗ್ರಾಫಿಕ್ಸ್ ಗುಣಮಟ್ಟ ಸರಿಯಿಲ್ಲ ಎಂಬಿತ್ಯಾದಿ ಟೀಕೆಗಳು ಕೇಳಿಬಂದಿವೆ. ಈ ಎಲ್ಲದಕ್ಕೂ ಓಂ ರಾವತ್ ಅವರು ಯಾವ ರೀತಿ ಉತ್ತರ ನೀಡುತ್ತಾರೆ ಎಂಬುದನ್ನು ತಿಳಿಯಲು ಎಲ್ಲರೂ ಕಾದಿದ್ದಾರೆ.
Adipurush Review: ಗ್ರಾಫಿಕ್ಸ್ ನಂಬಿಕೊಂಡು ಯುದ್ಧ ಮಾಡಿದ ರಾಮ-ರಾವಣ; ಇದು ಓಂ ರಾವತ್ ರಾಮಾಯಣ
ಓಂ ರಾವತ್ ಅವರು ‘ತಾನಾಜಿ’ ಸಿನಿಮಾ ಮೂಲಕ ದೊಡ್ಡ ಯಶಸ್ಸು ಪಡೆದಿದ್ದರು. ಆ ಚಿತ್ರದ ಬಳಿಕ ಅವರಿಗೆ ‘ಆದಿಪುರುಷ್’ ಸಿನಿಮಾವನ್ನು ನಿರ್ದೇಶಿಸುವ ಜವಾಬ್ದಾರಿ ನೀಡಲಾಯಿತು. ಆದರೆ ಅವರು ಆರಂಭದಲ್ಲೇ ಎಡವಿದರು. ಟೀಸರ್ ಬಿಡುಗಡೆ ಆದಾಗಲೇ ಜನರಿಂದ ಕಟು ಟೀಕೆ ವ್ಯಕ್ತವಾಗಿತ್ತು. ಆ ಬಳಿಕ ಒಂದಷ್ಟು ಬದಲಾವಣೆ ಮಾಡಿಕೊಳ್ಳುತ್ತಾರೆ ಎಂದು ವರದಿ ಆಗಿತ್ತು. ಆದರೆ ಆ ಬದಲಾವಣೆಗಳು ಪ್ರೇಕ್ಷಕರಿಗೆ ಸಮಾಧಾನ ತಂದಿಲ್ಲ.
ಆದಿಪುರುಷ್ ಸಿನಿಮಾ ಬಗ್ಗೆ ಚತ್ತೀಸ್ಘಡ ಸಿಎಂ ಆಕ್ಷೇಪ, ಜನರು ಬಯಸಿದರೆ ಬ್ಯಾನ್
ಸೈಫ್ ಅಲಿ ಖಾನ್ ಅವರು ‘ಆದಿಪುರುಷ್’ ಚಿತ್ರದಲ್ಲಿ ರಾವಣನ ಪಾತ್ರ ಮಾಡಿದ್ದಾರೆ. ಕೃತಿ ಸನೋನ್ ಅವರು ಸೀತೆಯಾಗಿ ಅಭಿನಯಿಸಿದ್ದಾರೆ. ಸನ್ನಿ ಸಿಂಗ್ ಅವರು ಲಕ್ಷ್ಮಣನಾಗಿ ಕಾಣಿಸಿಕೊಂಡಿದ್ದಾರೆ. ದೇವದತ್ತ ನಾಗೆ ಮಾಡಿದ ಆಂಜನೇಯನ ಪಾತ್ರಕ್ಕೆ ಜನಮೆಚ್ಚುಗೆ ಸಿಕ್ಕಿದೆ. ಮೊದಲ ದಿನ ಈ ಸಿನಿಮಾಗೆ ವಿಶ್ವಾದ್ಯಂತ 150 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ವರದಿ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:33 am, Sun, 18 June 23