ಬಾಲಿವುಡ್ನಲ್ಲಿ (Bollywood Movies) ತಯಾರಾದ ಸಿನಿಮಾಗಳಿಗೆ ಅಲ್ಲಿಯೇ ಬೇಡಿಕೆ ಇಲ್ಲ ಎಂಬಂತಾಗಿದೆ. ಇತ್ತೀಚೆಗೆ ತೆರೆಗೆ ಬಂದ ಬಾಲಿವುಡ್ನ ಬಹುತೇಕ ಸಿನಿಮಾಗಳು ಮಕಾಡೆ ಮಲಗುತ್ತಿವೆ. ಇದು ಬಾಲಿವುಡ್ ಮಂದಿಯ ಆತಂಕ ಹೆಚ್ಚಿಸಿದೆ. ‘ರನ್ವೇ 34’ ಹಾಗೂ ‘ಹೀರೋಪಂತಿ 2’ ಚಿತ್ರಗಳು ಈಗಾಗಲೇ ಸೋಲು ಕಂಡಿವೆ. ಕಳೆದ ವಾರ ರಿಲೀಸ್ ಆದ ‘ಜಯೇಶ್ಭಾಯ್ ಜೋರ್ದಾರ್’ ಸಿನಿಮಾವನ್ನು (Jayeshbhai Jordaar) ಜನರು ಒಪ್ಪಿಕೊಳ್ಳಲೇ ಇಲ್ಲ. ಈ ಸಿನಿಮಾ ಮೊದಲ ವಾರಾಂತ್ಯಕ್ಕೆ ಗಳಿಸಿದ್ದು ಸುಮಾರು 12 ಕೋಟಿ ರೂಪಾಯಿ ಪಾತ್ರ. ಇದರಿಂದ ಬಾಲಿವುಡ್ ನಿರ್ಮಾಪಕರು ಅಕ್ಷರಶಃ ಚಿಂತೆಗೆ ಒಳಗಾಗಿದ್ದಾರೆ. ಮುಂಬರುವ ಚಿತ್ರಗಳನ್ನು ನೇರವಾಗಿ ಒಟಿಟಿಗೆ ರಿಲೀಸ್ ಮಾಡಲು ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
‘ಜಯೇಶ್ಭಾಯ್ ಜೋರ್ದಾರ್’ ಚಿತ್ರವನ್ನು ಯಶ್ ರಾಜ್ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಇದೇ ಪ್ರೊಡಕ್ಷನ್ ಹೌಸ್ನಲ್ಲಿ ಅಕ್ಷಯ್ ಕುಮಾರ್ ಅಭಿನಯದ ‘ಪೃಥ್ವಿರಾಜ್’ ಸಿನಿಮಾ ಮೂಡಿಬರುತ್ತಿದೆ. ಐತಿಹಾಸಿಕ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್ಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ‘ಜಯೇಶ್ಭಾಯ್ ಜೋರ್ದಾರ್’ ಚಿತ್ರದಿಂದ ಯಶ್ ರಾಜ್ ಫಿಲ್ಮ್ಸ್ ನಷ್ಟ ಅನುಭವಿಸುತ್ತಿವೆ. ಹೀಗಾಗಿ, ‘ಪೃಥ್ವಿರಾಜ್’ ಚಿತ್ರವನ್ನು ನೇರವಾಗಿ ಒಟಿಟಿಯಲ್ಲಿ ರಿಲೀಸ್ ಮಾಡಲು ಚಿಂತನೆ ನಡೆದಿದೆ ಎನ್ನಲಾಗುತ್ತಿದೆ.
#JayeshbhaiJordaar struggles in its opening weekend… The much-needed jump on Day 2 and 3 was missing… The going seems tough on weekdays, looking at the trending… Fri 3.25 cr, Sat 4 cr, Sun 4.75 cr. Total: ₹ 12 cr. #India biz. pic.twitter.com/zkfijEdxLb
— taran adarsh (@taran_adarsh) May 16, 2022
ವೀಕೆಂಡ್ನಲ್ಲೂ ‘ಜಯೇಶ್ಭಾಯ್ ಜೋರ್ದಾರ್’ ಸಿನಿಮಾಗೆ ಪ್ರೇಕ್ಷಕರು ಬರುತ್ತಿಲ್ಲ. ಹೀಗಾಗಿ, ಪ್ರದರ್ಶಕರು ಈ ಸಿನಿಮಾ ಬದಲು ‘ಕೆಜಿಎಫ್ 2’ ಹಾಗೂ ‘ಡಾಕ್ಟರ್ ಸ್ಟ್ರೇಂಜ್’ ಸೀಕ್ವೆಲ್ ಪ್ರದರ್ಶನ ಮಾಡುತ್ತಿದ್ದಾರೆ. ಇದು ಯಶ್ ರಾಜ್ ಫಿಲ್ಮ್ಸ್ ಕೋಪಕ್ಕೆ ಕಾರಣವಾಗಿದೆ. ಗುರುವಾರದವರೆಗೆ ನಿಗದಿತ ಶೋ ಪ್ರದರ್ಶನ ಮಾಡಲು ಪ್ರದರ್ಶಕರ ಬಳಿ ಯಶ್ ರಾಜ್ ಫಿಲ್ಮ್ಸ್ ಕೋರಿದೆ. ಒಂದೊಮ್ಮೆ ಹಾಗೆ ಆಗದೆ ಇದ್ದರೆ ‘ಪೃಥ್ವಿರಾಜ್’ ಹಾಗೂ ರಣಬೀರ್ ಕಪೂರ್ ನಟನೆಯ ‘ಶಂಷೇರಾ’ ಚಿತ್ರಗಳನ್ನು ನೇರವಾಗಿ ಒಟಿಟಿಗೆ ರಿಲೀಸ್ ಮಾಡಲು ನಿರ್ಮಾಣ ಸಂಸ್ಥೆ ನಿರ್ಧರಿಸಿದೆ ಎಂದು ವರದಿ ಆಗಿದೆ.
ದೊಡ್ಡದೊಡ್ಡ ಚಿತ್ರಗಳು ಒಟಿಟಿಯಲ್ಲಿ ನೇರವಾಗಿ ರಿಲೀಸ್ ಆದರೆ ನಿರ್ಮಾಪಕರಿಗೆ ಹೆಚ್ಚು ಹಣ ಸಿಗುತ್ತದೆ. ಸದ್ಯದ ಟ್ರೆಂಡ್ ನೋಡಿದರೆ ಬಾಲಿವುಡ್ ಚಿತ್ರಗಳು ದೊಡ್ಡ ಮಟ್ಟದಲ್ಲಿ ಕಮಾಯಿ ಮಾಡುವುದು ಅನುಮಾನವೇ. ಹೀಗಾಗಿ, ಚಿತ್ರವನ್ನು ನೇರವಾಗಿ ಒಟಿಟಿಯಲ್ಲಿ ರಿಲೀಸ್ ಮಾಡಿ ದುಡ್ಡು ಮಾಡಿಕೊಳ್ಳುವ ಆಲೋಚನೆ ಚಿತ್ರತಂಡದ್ದು ಎನ್ನಲಾಗುತ್ತಿದೆ. ಈ ಬಗ್ಗೆ ಯಶ್ ರಾಜ್ ಫಿಲ್ಮ್ಸ್ ಅಂತಿಮವಾಗಿ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:00 am, Tue, 17 May 22