Cannes 2024: ಶೀಘ್ರವೇ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿರುವ ನಟಿ ಐಶ್ವರ್ಯಾ ರೈ ಬಚ್ಚನ್​

|

Updated on: May 19, 2024 | 7:12 AM

ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್​ ಅವರು 2024ರ ಕಾನ್​ ಚಿತ್ರೋತ್ಸವದಲ್ಲಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಅವರು ಭಾರತಕ್ಕೆ ಮರಳುತ್ತಿದ್ದಂತೆಯೇ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ. ಹಾಗಾದರೆ ಅವರಿಗೆ ಏನಾಗಿದೆ? ಆರೋಗ್ಯ ಸಮಸ್ಯೆ ಇದ್ದರೂ ಕೂಡ ಐಶ್ವರ್ಯಾ ರೈ ಅವರು ಕಾನ್​ ಫಿಲ್ಮ್​ ಫೆಸ್ಟಿವಲ್​ಗೆ ತೆರಳಿದ್ದು ಯಾಕೆ? ಇಲ್ಲಿದೆ ಉತ್ತರ..

Cannes 2024: ಶೀಘ್ರವೇ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿರುವ ನಟಿ ಐಶ್ವರ್ಯಾ ರೈ ಬಚ್ಚನ್​
ಐಶ್ವರ್ಯಾ ರೈ ಬಚ್ಚನ್
Follow us on

ಕೈ ನೋವು ಇದ್ದರೂ ಕೂಡ ನಟಿ ಐಶ್ವರ್ಯಾ ರೈ ಬಚ್ಚನ್​ (Aishwarya Rai Bachchan) ಅವರು ಫ್ರಾನ್ಸ್​ಗೆ ತೆರಳಿದ್ದಾರೆ. ಅಲ್ಲಿನ ಕಾನ್ ಫಿಲ್ಮ್​ ಫೆಸ್ಟಿವಲ್​ನಲ್ಲಿ (Cannes 2024) ಭಾಗಿ ಆಗಿದ್ದಾರೆ. ರೆಡ್ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ. ಈ ವೇಳೆ ಅವರ ಬಲಗೈಯಲ್ಲಿ ಇರುವ ಬ್ಯಾಂಡೇಜ್​ ನೋಡಿ ಬಹುತೇಕರಿಗೆ ಅಚ್ಚರಿ ಆಗಿದೆ. ಈಗ ಸಿಕ್ಕಿರುವ ಮಾಹಿತಿ ಏನೆಂದರೆ, ಭಾರತಕ್ಕೆ ವಾಪಸ್​ ಆಗುತ್ತಿದ್ದಂತೆಯೇ ಐಶ್ವರ್ಯಾ ರೈ (Aishwarya Rai) ಅವರ ಕೈಗೆ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ. 77ನೇ ಕಾನ್ ಚಿತ್ರೋತ್ಸವದಲ್ಲಿ ಅವರು ಮಿಂಚಿದ್ದಾರೆ. ಕೈ ನೋವಿನ ನಡುವೆಯೂ ತಮ್ಮ ಬದ್ಧತೆ ತೋರಿಸಿದ್ದಾರೆ.

ಸತತ 21 ವರ್ಷಗಳಿಂದ ಐಶ್ವರ್ಯಾ ರೈ ಬಚ್ಚನ್​ ಅವರು ಕಾನ್​ ಚಿತ್ರೋತ್ಸವದಲ್ಲಿ ಭಾಗಿ ಆಗುತ್ತಿದ್ದಾರೆ. ಅವರನ್ನು ವಿವಿಧ ಬಗೆಯ ಕಾಸ್ಟ್ಯೂಮ್​ನಲ್ಲಿ ನೋಡಿ ಫ್ಯಾನ್ಸ್​ ಖುಷಿಪಟ್ಟಿದ್ದಾರೆ. ಈ ವರ್ಷ ಅವರಿಗೆ ತೀವ್ರ ಕೈ ನೋವು ಇತ್ತು. ಹಾಗಾಗಿ ಅವರು ಕಾನ್​ ಚಿತ್ರೋತ್ಸವದ ರೆಡ್​ ಕಾರ್ಪೆಟ್​ನಲ್ಲಿ ಹೆಜ್ಜೆ ಹಾಕುವುದು ಅನುಮಾನ ಎಂದೇ ಅನೇಕರು ಊಹಿಸಿದ್ದರು. ಆದರೆ ಅಂಥವರ ಊಹೆ ಸುಳ್ಳಾಗಿದೆ.

ಕೆಲವೇ ದಿನಗಳ ಹಿಂದೆ ಐಶ್ವರ್ಯಾ ರೈ ಬಚ್ಚನ್​ ಅವರ ಮಣಿಕಟ್ಟಿಗೆ ಪೆಟ್ಟಾಗಿತ್ತು. ನೋವು ಇದ್ದಿದ್ದರಿಂದ ಈ ಬಾರಿ ಕಾನ್​ ಫಿಲ್ಮ್​ ಫೆಸ್ಟಿವಲ್​ಗೆ ತೆರಳುವುದು ಬೇಡ ಎಂದು ಆಪ್ತರು ಸಲಹೆ ಕೂಡ ನೀಡಿದ್ದರು. ಆದರೆ ಅದಕ್ಕೆ ಐಶ್ವರ್ಯಾ ರೈ ಒಪ್ಪಲಿಲ್ಲ. ಇಷ್ಟು ವರ್ಷಗಳ ಕಾಲ ನಡೆದುಬಂದ ಸಂಭ್ರಮವನ್ನು ಈ ಬಾರಿ ತಪ್ಪಿಸಲು ಅವರಿಗೆ ಇಷ್ಟ ಇರಲಿಲ್ಲ. ಹಾಗಾಗಿ ಕೈಗೆ ಬ್ಯಾಂಡೇಜ್​ ಹಾಕಿಸಿಕೊಂಡೇ ಅವರು ರೆಡ್​ ಕಾರ್ಪೆಟ್​ನಲ್ಲಿ ಪೋಸ್​ ನೀಡಿದರು.

ಇದನ್ನೂ ಓದಿ: ರಜನಿಕಾಂತ್​ಗೆ ಐಶ್ವರ್ಯಾ ರೈ ಜೋಡಿ ಎಂದಾಗ ಕಕ್ಕಾಬಿಕ್ಕಿ ಆಗಿದ್ದ ರಾಜಸ್ಥಾನಿ ವ್ಯಕ್ತಿ

ಐಶ್ವರ್ಯಾ ರೈ ಬಚ್ಚನ್​ ಅವರು ವಿದೇಶಕ್ಕೆ ತೆರಳುವುದಕ್ಕೂ ಮುನ್ನ ತಮ್ಮ ವೈದ್ಯರ ತಂಡದ ಜೊತೆ ಚರ್ಚೆ ಮಾಡಿದ್ದಾರೆ. ಮುಂದಿನ ವಾರ ಅವರು ಭಾರತಕ್ಕೆ ಮರಳಿದ ತಕ್ಷಣ ಮಣಿಕಟ್ಟಿನ ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂಬ ಆಪ್ತರು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಮಗಳು ಆರಾಧ್ಯ ಬಚ್ಚನ್​ ಜೊತೆ ಐಶ್ವರ್ಯಾ ಅವರು ಕಾನ್​ ಚಿತ್ರೋತ್ಸವಕ್ಕೆ ತೆರಳಿದ್ದಾರೆ. ಅಲ್ಲಿಂದ ಅವರ ಫೋಟೋಗಳು ವೈರಲ್​ ಆಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.