‘ಇದು ಸಮಾಜಕ್ಕೂ ಅಪಾಯಕಾರಿ’; ಅಕ್ಷಯ್ ಕುಮಾರ್ ವಿಡಿಯೋ ಬಗ್ಗೆ ಕೋರ್ಟ್ ಕಳವಳ
ಅಕ್ಷಯ್ ಕುಮಾರ್ ಅವರ ಡೀಪ್‌ಫೇಕ್ ವೀಡಿಯೊ ಕುರಿತು ಬಾಂಬೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಯಾದ ನಕಲಿ ವೀಡಿಯೊದಲ್ಲಿ ಮಹರ್ಷಿ ವಾಲ್ಮೀಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಕ್ಷಯ್, ನ್ಯಾಯಾಲಯದ ಮೊರೆ ಹೋಗಿದ್ದರು. ಅವರ ವ್ಯಕ್ತಿತ್ವ ಹಕ್ಕುಗಳನ್ನು ರಕ್ಷಿಸಿ, ಅಂತಹ ಡೀಪ್‌ಫೇಕ್ ವೀಡಿಯೊಗಳನ್ನು ಸಾರ್ವಜನಿಕ ವಲಯದಿಂದ ತೆಗೆದುಹಾಕಲು ನ್ಯಾಯಾಲಯ ಆದೇಶಿಸಿದೆ.

ಕೃತಕ ಬುದ್ಧಿಮತ್ತೆ ಅಥವಾ ಎಐ ಸಹಾಯದಿಂದ ಇತ್ತೀಚಿನ ದಿನಗಳಲ್ಲಿ ಯಾರ ವೀಡಿಯೊಗಳನ್ನು ಬೇಕಾದರೂ ಸೃಷ್ಟಿ ಮಾಡಬಹುದು. ಆದರೆ ಅನೇಕ ಜನರು ಈ ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುತ್ತಾ ಇದ್ದಾರೆ. ಕೆಲವು ದಿನಗಳ ಹಿಂದೆ, ಅಕ್ಷಯ್ ಕುಮಾರ್ (Akshay Kumar) ಅವರ ಡೀಪ್‌ಫೇಕ್ ವೀಡಿಯೊ ವೈರಲ್ ಆಗಿತ್ತು. ಈ ವೀಡಿಯೊದಲ್ಲಿ, ಅವರು ಮಹರ್ಷಿ ವಾಲ್ಮೀಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ವೈರಲ್ ವೀಡಿಯೊದ ಬಗ್ಗೆ ಅಕ್ಷಯ್ ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿ ನೇರವಾಗಿ ನ್ಯಾಯಾಲಯಕ್ಕೆ ಧಾವಿಸಿದರು. ಅವರ ಪರವಾಗಿ ಆದೇಶ ಬಂದಿದೆ.
ಅಕ್ಷಯ್ ತಮ್ಮ ವ್ಯಕ್ತಿತ್ವ ಹಕ್ಕುಗಳನ್ನು ರಕ್ಷಿಸಲು ನ್ಯಾಯಾಲಯದಿಂದ ಸಹಾಯವನ್ನು ಕೋರಿದ್ದರು. ಈಗ ಬಾಂಬೆ ಹೈಕೋರ್ಟ್ ಈ ವಿಷಯದಲ್ಲಿ ಅಕ್ಷಯ್‌ಗೆ ದೊಡ್ಡ ರಿಲೀಫ್ ನೀಡಿದೆ. ಅಕ್ಷಯ್ ಕುಮಾರ್ ಅವರ ವ್ಯಕ್ತಿತ್ವ ಹಕ್ಕುಗಳನ್ನು ಉಲ್ಲಂಘಿಸುವ ಡೀಪ್‌ಫೇಕ್ AI ವಿಡಿಯೋಗಳನ್ನು ತೆಗೆದುಹಾಕಲು ಬಾಂಬೆ ಹೈಕೋರ್ಟ್ ಆದೇಶಿಸಿದೆ. ಅಪರಿಚಿತ ವ್ಯಕ್ತಿಗಳು ಮತ್ತು ಕೆಲವು ಇ-ಕಾಮರ್ಸ್ ಸೈಟ್‌ಗಳ ವಿರುದ್ಧ ನ್ಯಾಯಾಲಯವು ಈ ಆದೇಶವನ್ನು ನೀಡಿದೆ.
ನಟನ ಹಿತದೃಷ್ಟಿಯಿಂದ ಮಾತ್ರವಲ್ಲದೆ ಸಮಾಜದ ಹಿತದೃಷ್ಟಿಯಿಂದ ಕೂಡ ಅಂತಹ ವಿಷಯವನ್ನು ಸಾರ್ವಜನಿಕ ವಲಯದಿಂದ ತಕ್ಷಣವೇ ತೆಗೆದುಹಾಕಬೇಕಾಗಿದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು. ‘ಹಲವು ಸಂದರ್ಭಗಳಲ್ಲಿ AI ಬಳಸಿ ರಚಿಸಲಾದ ಡೀಪ್‌ಫೇಕ್ ಫೋಟೋಗಳು ಮತ್ತು ವೀಡಿಯೊಗಳು ನಿಜವಾಗಿಯೂ ಕಳವಳಕಾರಿ. ಈ ಮಾರ್ಫಿಂಗ್ ಎಷ್ಟು ಮೋಸಗೊಳಿಸುವಂತಿದೆಯೆಂದರೆ, ಅಕ್ಷಯ್ ಕುಮಾರ್ ಅವರ ನೈಜ ಫೋಟೋಗಳು ಮತ್ತು ವೀಡಿಯೊಗಳು ಮತ್ತು ಡೀಪ್‌ಫೇಕ್ ವೀಡಿಯೊಗಳ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯುವುದು ಅಸಾಧ್ಯ. ಅಂತಹ ವೀಡಿಯೊಗಳು ಅಕ್ಷಯ್‌ಗೆ ಮಾತ್ರವಲ್ಲದೆ ಅವರ ಕುಟುಂಬದ ಸುರಕ್ಷತೆಗೂ ಗಂಭೀರ ಅಪಾಯವನ್ನುಂಟುಮಾಡುತ್ತವೆ’ ಎಂದು ನ್ಯಾಯಮೂರ್ತಿಗಳು ಹೇಳಿದರು.
ಇದನ್ನೂ ಓದಿ: ಆಮಿರ್ ಖಾನ್, ಅಜಯ್ ದೇವಗನ್, ಅಕ್ಷಯ್ ಕುಮಾರ್ ಸಿನಿಮಾಗಳ ಹಿಂದಿಕ್ಕಿದ ‘ಕಾಂತಾರ 1’
ಅಕ್ಷಯ್ ಕುಮಾರ್ ಈ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಡೀಪ್‌ಫೇಕ್ ವಿಡಿಯೋ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ‘AI ಸಹಾಯದಿಂದ ಮಾಡಲ್ಪಟ್ಟ ವೀಡಿಯೊವನ್ನು ನೋಡಿದೆ. ಅದರಲ್ಲಿ ನನ್ನನ್ನು ಮಹರ್ಷಿ ವಾಲ್ಮೀಕಿ ಎಂದು ತೋರಿಸಲಾಗಿದೆ. ಆದರೆ ಈ ವೀಡಿಯೊ ಸಂಪೂರ್ಣವಾಗಿ ನಕಲಿ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಇದನ್ನು AI ಸಹಾಯದಿಂದ ರಚಿಸಲಾಗಿದೆ. ಕೆಟ್ಟ ವಿಷಯವೆಂದರೆ ಮಾಧ್ಯಮಗಳು ಸಹ ವೀಡಿಯೊವನ್ನು ಸುದ್ದಿ ಮಾಡಲು ಬಳಸಿಕೊಂಡಿವೆ. ಅಂತಹ ಸುದ್ದಿಗಳನ್ನು ಪ್ರಕಟಿಸುವ ಮೊದಲು ದಯವಿಟ್ಟು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ನಾನು ವಿನಂತಿಸುತ್ತೇನೆ’ ಎಂದು ಅವರು ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:38 pm, Fri, 17 October 25







