Alia Bhatt Birthday: ಇತರ ಸ್ಟಾರ್ ಕಿಡ್ನಂತಲ್ಲ ಆಲಿಯಾ ಭಟ್; ಈ ನಟಿ ಇಷ್ಟವಾಗೋದೇ ಈ ಕಾರಣಕ್ಕೆ
‘ಸ್ಟುಡೆಂಟ್ ಆಫ್ ದಿ ಇಯರ್’ ಚಿತ್ರದ ಮೂಲಕ ಆಲಿಯಾ ಭಟ್ ಅವರನ್ನು ಬಾಲಿವುಡ್ಗೆ ಕರಣ್ ಪರಿಚಯಿಸಿದರು. ಆಲಿಯಾ ಮೊದಲ ಸಿನಿಮಾದಲ್ಲೇ ಗ್ಲಾಮರ್ ಅವತಾರ ತಾಳಿ ಎಲ್ಲರ ಗಮನ ಸೆಳೆದರು.
ನಟಿ ಆಲಿಯಾ ಭಟ್ (Alia Bhatt) ಅವರು ಇಂದು (ಮಾರ್ಚ್ 15) 30ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಸೆಲೆಬ್ರಿಟಿಗಳಿಂದ, ಕುಟುಂಬದಿಂದ ವಿಶ್ಗಳು ಬರುತ್ತಿವೆ. ಸಣ್ಣ ವಯಸ್ಸಿಗೆ ಬಣ್ಣದ ಲೋಕಕ್ಕೆ ಕಾಲಿಟ್ಟರು. 11 ವರ್ಷಗಳ ವೃತ್ತಿ ಜೀವನದಲ್ಲಿ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ನಿರ್ದೇಶಕ ಮಹೇಶ್ ಭಟ್ ಮಗಳಾದರೂ ಅವರು ತಮ್ಮದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿದ್ದಾರೆ. ಅವರಿಗೆ ಸಾಕಷ್ಟು ಬೇಡಿಕೆ ಇದೆ. ಆಲಿಯಾ ಇತರ ಸ್ಟಾರ್ಕಿಡ್ನಂತಲ್ಲ. ಅವರು ತಮ್ಮ ನಟನೆ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇತರರಿಗಿಂತ ಅವರು ಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ಎಷ್ಟೇ ಟೀಕೆ ಬಂದರು ತಮ್ಮ ಕೆಲಸದ ಮೂಲಕ ಉತ್ತರ ನೀಡುವ ಕೆಲಸ ಮಾಡುತ್ತಾರೆ.
2012ರಲ್ಲಿ ಚಿತ್ರರಂಗಕ್ಕೆ ಎಂಟ್ರಿ
ಆಲಿಯಾ ಭಟ್ ಸೇರಿದಂತೆ ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳಿಗೆ ನಿರ್ಮಾಪಕ ಕರಣ್ ಜೋಹರ್ ಅವರು ಗಾಡ್ ಫಾದರ್. ಸೆಲೆಬ್ರಿಟಿ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸೋದು ಎಂದರೆ ಅವರಿಗೆ ಎಲ್ಲಿಲ್ಲದ ಖುಷಿ. ‘ಸ್ಟುಡೆಂಟ್ ಆಫ್ ದಿ ಇಯರ್’ ಚಿತ್ರದ ಮೂಲಕ ಆಲಿಯಾ ಭಟ್ ಅವರನ್ನು ಬಾಲಿವುಡ್ಗೆ ಕರಣ್ ಪರಿಚಯಿಸಿದರು. ಆಲಿಯಾ ಮೊದಲ ಸಿನಿಮಾದಲ್ಲೇ ಗ್ಲಾಮರ್ ಅವತಾರ ತಾಳಿ ಎಲ್ಲರ ಗಮನ ಸೆಳೆದರು. ಬಿಕಿನಿ ತೊಟ್ಟು ಮಿಂಚಿದರು.
ನಂತರ ಅವರು ನಟಿಸಿದ್ದು ‘ಹೈವೇ’ ಚಿತ್ರದಲ್ಲಿ. ಈ ಚಿತ್ರದಲ್ಲಿ ಅವರಿಗೆ ತಮ್ಮ ನಟನೆ ತೋರಿಸಲು ಸಾಕಷ್ಟು ಅವಕಾಶ ಸಿಕ್ಕಿತು. ‘2 ಸ್ಟೇಟ್ಸ್, ‘ಉಡ್ತಾ ಪಂಜಾಬ್’, ‘ಡಿಯರ್ ಜಿಂದಗಿ’ ಮೊದಲಾದ ಚಿತ್ರಗಳಲ್ಲಿ ನಟಿಸಿ ಅವರು ಗಮನ ಸೆಳೆದರು.
ಬದಕು ಬದಲಿಸಿದ ‘ರಾಝಿ’
2018ರಲ್ಲಿ ರಿಲೀಸ್ ಆದ ‘ರಾಝಿ’ ಚಿತ್ರ ಆಲಿಯಾ ವೃತ್ತಿಬದುಕಿಗೆ ಸಾಕಷ್ಟು ಮೈಲೇಜ್ ನೀಡಿತು. ಈ ಚಿತ್ರದಲ್ಲಿ ಭಾರತದ ಸ್ಪೈ ಆಗಿ ಅವರು ಕಾಣಿಸಿಕೊಂಡರು. ಅಪ್ಪನ ಮಾತಿನಂತೆ ಪಾಕಿಸ್ತಾನದ ಸೇನೆಯ ಅಧಿಕಾರಿಯ ಮಗನ ಮದುವೆ ಆಗುವ ಕಥಾ ನಾಯಕಿ, ಸಾಕಷ್ಟು ಸವಾಲುಗಳನ್ನು ಎದುರಿಸುತ್ತಾಳೆ. ಈ ಪಾತ್ರವನ್ನು ಆಲಿಯಾ ಸಮರ್ಥವಾಗಿ ನಿಭಾಯಿಸಿ ಗಮನ ಸೆಳೆದರು. ಈ ಚಿತ್ರಕ್ಕೆ ಎಲ್ಲರಿಂದ ಮೆಚ್ಚುಗೆ ಸಿಕ್ಕಿತು.
ಇದನ್ನೂ ಓದಿ: ‘ನನ್ನ ಮನೆ ಒಳಗೆ ಏನು ಬೇಕಾದರೂ ಆಗಬಹುದು’; ಕಾನೂನು ಹೋರಾಟಕ್ಕೆ ಮುಂದಾದ ಆಲಿಯಾ ಭಟ್
ದಕ್ಷಿಣಕ್ಕೂ ಎಂಟ್ರಿ
ರಣವೀರ್ ಸಿಂಗ್ ಜೊತೆ ನಟಿಸಿದ ‘ಗಲ್ಲಿ ಬಾಯ್’, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಜೊತೆಗೂಡಿ ಕೆಲಸ ಮಾಡಿದ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರಗಳು ಒಳ್ಳೆಯ ಬಿಸ್ನೆಸ್ ಮಾಡಿವೆ. 2022ರಲ್ಲಿ ರಿಲೀಸ್ ಆದ ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಸಿನಿಮಾದಲ್ಲಿ ಸೀತಾ ಹೆಸರಿನ ಪಾತ್ರ ಮಾಡುವ ಮೂಲಕ ಅವರು ದಕ್ಷಿಣ ಭಾರತಕ್ಕೂ ಕಾಲಿಟ್ಟರು. ಅದೇ ವರ್ಷ ರಿಲೀಸ್ ಆದ ‘ಬ್ರಹ್ಮಾಸ್ತ್ರ’ ಸಿನಿಮಾ ಕೂಡ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿತು. ‘ಡಾರ್ಲಿಂಗ್ಸ್’ ಚಿತ್ರ ಒಟಿಟಿಯಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು.
ಇತರರಿಗಿಂತ ಭಿನ್ನ
ಸೋನಮ್ ಕಪೂರ್, ಜಾನ್ವಿ ಕಪೂರ್, ಸಾರಾ ಅಲಿ ಖಾನ್, ಅನನ್ಯಾ ಪಾಂಡೆ ಮೊದಲಾದವರು ಕೂಡ ಸ್ಟಾರ್ ಕಿಡ್ಗಳು. ಇವರಿಗೆ ಈವರೆಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ಇವರಿಗೆ ನಟನೆ ಬರುವುದಿಲ್ಲ ಎನ್ನುವ ಟೀಕೆ ಕೇಳಿಬರುತ್ತಲೇ ಇರುತ್ತದೆ. ಆದರೆ, ಆಲಿಯಾ ಹಾಗಲ್ಲ. ನಟನೆ ವಿಚಾರದಲ್ಲಿ ಅವರು ಎಂದಿಗೂ ಟೀಕೆಗೆ ಒಳಗಾಗಿಲ್ಲ. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟವಾಗುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ