ಪ್ರಪಂಚದಲ್ಲಿ ಒಬ್ಬರ ರೀತಿ 7 ಜನರು ಇರುತ್ತಾರೆ ಎಂಬ ನಂಬಿಕೆ ಹಲವರಿಗೆ ಇದೆ. ಫೇಮಸ್ ಸೆಲೆಬ್ರಿಟಿಗಳ ರೀತಿ ಕಾಣುವ ವ್ಯಕ್ತಿಗಳು ಆಗಾಗ ಗಮನ ಸೆಳೆಯುತ್ತಾರೆ. ಅನುಷ್ಕಾ ಶರ್ಮಾ, ಶಾರುಖ್ ಖಾನ್, ಸಲ್ಮಾನ್ ಖಾನ್ ರೀತಿ ಕಾಣುವ ಅನೇಕರು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದುಂಟು. ಈಗ ಆಲಿಯಾ ಭಟ್ (Alia Bhatt Lookalike) ರೀತಿಯೇ ಇರುವ ಯುವತಿಯೊಬ್ಬರು ಅಚ್ಚರಿ ಮೂಡಿಸಿದ್ದಾರೆ. ಬೆಂಗಳೂರಿನ ರೋಷನಿ ಸೋನಿ ಅಲಿಯಾಸ್ ರೋಷನಿ ಅನ್ಸಾರಿ (Roshni Ansari) ಎಂಬ ಈ ಯುವತಿಯ ವಿಡಿಯೋಗಳನ್ನು ನೋಡಿ ಆಲಿಯಾ ಭಟ್ ಅಭಿಮಾನಿಗಳು ವಾವ್ ಎನ್ನುತ್ತಿದ್ದಾರೆ. ‘ಆಲಿಯಾ ಭಟ್ ತಂಗಿ, ಜೂನಿಯರ್ ಆಲಿಯಾ ಭಟ್’ (Alia Bhatt) ಎಂದೆಲ್ಲ ಜನರು ಕಮೆಂಟ್ ಮಾಡುತ್ತಿದ್ದಾರೆ.
ರೋಷನಿ ಅನ್ಸಾರಿ ಅವರ ವಿಡಿಯೋಗಳು ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗಿವೆ. ಇವರನ್ನು ಒಂದು ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ. ಆಲಿಯಾ ಭಟ್ ರೀತಿಯೇ ಅವರು ಫೋಟೋಶೂಟ್ ಮಾಡಿದ್ದಾರೆ. ಅನೇಕ ರೀಲ್ಸ್ ಮಾಡಿ ಹಂಚಿಕೊಂಡಿದ್ದಾರೆ. ಅವುಗಳನ್ನು ಕಂಡು ಎಲ್ಲರಿಗೂ ಅಚ್ಚರಿ ಆಗಿದೆ. ಥೇಟ್ ಆಲಿಯಾ ರೀತಿ ಕಾಣುವ ಈ ಯುವತಿಗೆ ದಿನದಿಂದ ದಿನಕ್ಕೆ ಫಾಲೋವರ್ಸ್ ಸಂಖ್ಯೆ ಹೆಚ್ಚುತ್ತಿದೆ.
ಸದ್ಯಕ್ಕೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುವ ರೋಷನಿ ಅನ್ಸಾರಿ ವಿಡಿಯೋಗಳು ಆಲಿಯಾ ಭಟ್ ಅವರ ಕಣ್ಣಿಗೆ ಬಿದ್ದರೆ ಅವರು ಯಾವ ರೀತಿ ಪ್ರತಿಕ್ರಿಯಿಸಬಹುದು ಎಂಬ ಕೌತುಕ ಅಭಿಮಾನಿಗಳಿಗೆ ಇದೆ. ಆಲಿಯಾ ಭಟ್ ಈಗ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇದ್ದಾರೆ. ಈ ವರ್ಷ ಅವರ ಪಾಲಿಗೆ ತುಂಬ ವಿಶೇಷವಾಗಿದೆ.
ಬಾಲಿವುಡ್ ಮಾತ್ರವಲ್ಲದೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಆಲಿಯಾ ಭಟ್ ಮಿಂಚುತ್ತಿದ್ದಾರೆ. ‘ಆರ್ಆರ್ಆರ್’ ಸಿನಿಮಾದಲ್ಲಿ ನಟಿಸಿದ ಬಳಿಕ ದಕ್ಷಿಣ ಭಾರತದಲ್ಲೂ ಅವರ ಜನಪ್ರಿಯತೆ ಹೆಚ್ಚಾಗಿದೆ. ‘ಗಂಗೂಬಾಯಿ ಕಾಠಿಯಾವಾಡಿ’, ‘ಆರ್ಆರ್ಆರ್’ ಹಾಗೂ ‘ಬ್ರಹ್ಮಾಸ್ತ್ರ’ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಯಶಸ್ಸು ಕಂಡ ಬಳಿಕ ಆಲಿಯಾ ಅವರ ವೃತ್ತಿಜೀವನಕ್ಕೆ ದೊಡ್ಡ ಮೈಲೇಜ್ ಸಿಕ್ಕಂತಾಗಿದೆ.
ಪ್ರಿಯಕರ ರಣಬೀರ್ ಕಪೂರ್ ಜೊತೆ ಆಲಿಯಾ ಭಟ್ ಅವರು ಏಪ್ರಿಲ್ 14ರಂದು ಹಸೆಮಣೆ ಏರಿದರು. ಎರಡೂವರೆ ತಿಂಗಳು ಕಳೆಯುವುದರೊಳಗೆ ತಾವು ಪ್ರೆಗ್ನೆಂಟ್ ಎಂಬುದನ್ನು ಆಲಿಯಾ ಘೋಷಿಸಿದರು. ಈಗ ಅವರು ತಾಯಿ ಆಗುತ್ತಿರುವ ಸಂಭ್ರಮದಲ್ಲಿದ್ದಾರೆ. ಸದ್ಯಕ್ಕೆ ಸಿನಿಮಾ ಕೆಲಸಗಳನ್ನು ಸಣ್ಣ ಬಿಡುವು ಪಡೆದುಕೊಂಡು ಆರೋಗ್ಯದ ಕಡೆಗೆ ಗಮನ ಹರಿಸಿದ್ದಾರೆ. ಆದಷ್ಟು ಬೇಗ ಅವರ ಕಡೆಯಿಂದ ಶುಭ ಸಮಾಚಾರ ಕೇಳಿಬರಲಿದೆ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:38 am, Mon, 10 October 22