Salman Khan: ‘ಗಾಡ್ ಫಾದರ್’ ಚಿತ್ರಕ್ಕೆ ಸಂಭಾವನೆ ಪಡೆಯದ ಸಲ್ಲುಗೆ ‘ಮೆಗಾ’ ಕುಟುಂಬದವರು ಏನು ಕೊಡ್ತಾರೆ?
Megastar Chiranjeevi | Godfather: ಚಿರಂಜೀವಿ ಮತ್ತು ಸಲ್ಮಾನ್ ಖಾನ್ ಬಹುಕಾಲದಿಂದ ಸ್ನೇಹಿತರು. ‘ಗಾಡ್ ಫಾದರ್’ ಚಿತ್ರದಲ್ಲಿ ಸಲ್ಲು ನಟಿಸಿದ್ದರಿಂದ ಉತ್ತರ ಭಾರತದಲ್ಲಿ ಈ ಚಿತ್ರಕ್ಕೆ ಹೆಚ್ಚಿನ ಪ್ರಚಾರ ಸಿಕ್ಕಿತು.
ಬಾಲಿವುಡ್ ಮತ್ತು ದಕ್ಷಿಣ ಭಾರತದ ಚಿತ್ರರಂಗದ ನಡುವೆ ಉತ್ತಮ ಒಡನಾಟ ಇದೆ. ಅಲ್ಲಿನ ಸ್ಟಾರ್ ಕಲಾವಿದರು ಇಲ್ಲಿ ಬಂದು ಅತಿಥಿ ಪಾತ್ರ ಮಾಡಿದ ಉದಾಹರಣೆ ಸಾಕಷ್ಟು ಇದೆ. ಇತ್ತೀಚೆಗೆ ಬಿಡುಗಡೆಯಾದ ತೆಲುಗಿನ ‘ಗಾಡ್ ಫಾದರ್’ (Godfather) ಸಿನಿಮಾದಲ್ಲಿ ಸಲ್ಮಾನ್ ಖಾನ್ ಅವರು ಒಂದು ಅತಿಥಿ ಪಾತ್ರ ಮಾಡಿದ್ದಾರೆ. ಕಥೆಯ ಪ್ರಮುಖ ಘಟ್ಟದಲ್ಲಿ ಬರುವ ಈ ಪಾತ್ರಕ್ಕೆ ಹೆಚ್ಚು ತೂಕ ಇದೆ. ಒಂದೆರಡು ದೃಶ್ಯಗಳಲ್ಲಿ ಸಲ್ಮಾನ್ ಖಾನ್ (Salman Khan) ಕಾಣಿಸಿಕೊಳ್ಳುತ್ತಾರೆ. ಆ ಸಿನಿಮಾಗೆ ‘ಮೆಗಾ ಸ್ಟಾರ್’ ಚಿರಂಜೀವಿ (Megastar Chiranjeevi) ಹೀರೋ. ಅವರ ‘ಕೊನಿಡೆಲ್ಲಾ ಪ್ರೊಡಕ್ಷನ್ ಕಂಪನಿ’ ಮೂಲಕ ‘ಗಾಡ್ ಫಾದರ್’ ಚಿತ್ರ ಮೂಡಿಬಂತು. ಇದರಲ್ಲಿ ನಟಿಸಿದ್ದಕ್ಕಾಗಿ ಸಲ್ಮಾನ್ ಖಾನ್ ಅವರು ಯಾವುದೇ ಸಂಭಾವನೆ ಪಡೆದಿಲ್ಲ.
‘ಮೆಗಾ ಸ್ಟಾರ್’ ಚಿರಂಜೀವಿ ಹಾಗೂ ಸಲ್ಮಾನ್ ಖಾನ್ ಕುಟುಂಬದ ನಡುವೆ ಮೊದಲಿನಿಂದಲೂ ಸ್ನೇಹ ಇದೆ. ಆ ಆತ್ಮೀಯತೆಯ ಕಾರಣದಿಂದಲೇ ಹಣ ಪಡೆಯದೇ ‘ಗಾಡ್ ಫಾದರ್’ ಸಿನಿಮಾದಲ್ಲಿ ಸಲ್ಮಾನ್ ಖಾನ್ ನಟಿಸಿದರು. ಆದರೂ ಕೂಡ ಚಿರು ಪುತ್ರ ರಾಮ್ ಚರಣ್ ಅವರು ಸಲ್ಲುಗೆ ಒಂದು ಐಷಾರಾಮಿ ಕಾರನ್ನು ಗಿಫ್ಟ್ ನೀಡಲು ತೀರ್ಮಾನಿಸಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.
ಎಷ್ಟು ಸಂಭಾವನೆ ಪಡೆದರು? ಯಾವ ಗಿಫ್ಟ್ ನೀಡಿದರು? ಈ ಎಲ್ಲ ವಿಚಾರಗಳು ಖಾಸಗಿ ಆಗಿರುತ್ತವೆ. ಹಾಗಾಗಿ ಈ ಕುರಿತು ‘ಮೆಗಾ ಸ್ಟಾರ್’ ಕುಟುಂಬದಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಹಾಗಿದ್ದರೂ ಕೂಡ ಟಾಲಿವುಡ್ ಅಂಗಳದಲ್ಲಿ ಈ ಒಂದು ಸುದ್ದಿ ಹರಿದಾಡುತ್ತಿದೆ. ರಾಮ್ ಚರಣ್ ನಟನೆಯ ‘ಆರ್ಆರ್ಆರ್’ ಬಿಡುಗಡೆ ಸಂದರ್ಭದಲ್ಲೂ ಸಲ್ಮಾನ್ ಖಾನ್ ಅವರು ಸಹಕಾರ ನೀಡಿದ್ದರು.
ಬಾಲಿವುಡ್ಗೆ ಹೋಲಿಸಿದರೆ ದಕ್ಷಿಣ ಭಾರತದ ಸಿನಿಮಾಗಳು ಹೆಚ್ಚು ಕಲೆಕ್ಷನ್ ಮಾಡುತ್ತಿವೆ. ಹಾಗಾಗಿ ಹಿಂದಿ ಚಿತ್ರರಂಗದ ಅನೇಕರು ದಕ್ಷಿಣಕ್ಕೆ ಬಂದು ನಟಿಸಲು ಮನಸ್ಸು ಮಾಡುತ್ತಿದ್ದಾರೆ. ‘ಗಾಡ್ ಫಾದರ್’ ಚಿತ್ರದಲ್ಲಿ ಸಲ್ಮಾನ್ ಖಾನ್ ಅಭಿನಯಿಸಿದ್ದರಿಂದ ಉತ್ತರ ಭಾರತದಲ್ಲಿ ಈ ಚಿತ್ರಕ್ಕೆ ಹೆಚ್ಚಿನ ಪ್ರಚಾರ ಸಿಕ್ಕಿತು.
ಅಂದಹಾಗೆ, ಇದು ಮಲಯಾಳಂನ ‘ಲೂಸಿಫರ್’ ಚಿತ್ರದ ತೆಲುಗು ರಿಮೇಕ್. ಮೂಲ ಸಿನಿಮಾದಲ್ಲಿ ಮೋಹನ್ ಲಾಲ್ ಮಾಡಿದ್ದ ಪಾತ್ರವನ್ನು ತೆಲುಗಿನಲ್ಲಿ ಚಿರಂಜೀವಿ ಮಾಡಿದ್ದಾರೆ. ಪೃಥ್ವಿರಾಜ್ ಸುಕುಮಾರ್ ಮಾಡಿದ್ದ ಅತಿಥಿ ಪಾತ್ರವನ್ನು ತೆಲುಗಿನಲ್ಲಿ ಸಲ್ಮಾನ್ ಖಾನ್ ಮಾಡಿದ್ದಾರೆ. ಅವರ ಆ್ಯಕ್ಷನ್ ದೃಶ್ಯಗಳನ್ನು ನೋಡಿ ಫ್ಯಾನ್ಸ್ ಇಷ್ಟಪಟ್ಟಿದ್ದಾರೆ. ಈ ಚಿತ್ರಕ್ಕೆ ಮೋಹನ್ ರಾಜ ನಿರ್ದೇಶನ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:08 am, Tue, 11 October 22