ಬರುತ್ತಿದ್ದಾರೆ ‘ಅಲ್ಫಾ’ ಗರ್ಲ್ಸ್, ಭಾರತದ ಮೊದಲ ಮಹಿಳಾ ಸ್ಪೈ ಸಿನಿಮಾ
ಹಲವಾರು ಮಹಿಳಾ ಪ್ರಧಾನ ಆಕ್ಷನ್ ಸಿನಿಮಾಗಳು, ಮಹಿಳಾ ಪ್ರಧಾನ ಪೊಲೀಸ್ ಆಕ್ಷನ್ ಸಿನಿಮಾಗಳು, ಥ್ರಿಲ್ಲರ್ ಸಿನಿಮಾಗಳು ಭಾರತದಲ್ಲಿ ಬಂದಿವೆ. ಆದರೆ ಇದೇ ಮೊದಲ ಬಾರಿಗೆ ಮಹಿಳಾ ಪ್ರಧಾನ ಸ್ಪೈ ಆಕ್ಷನ್ ಸಿನಿಮಾ ಬರುತ್ತಿದ್ದು, ಆಲಿಯಾ ಭಟ್ ನಾಯಕಿಯಾಗಿ ನಟಿಸುತ್ತಿದ್ದಾರೆ.
ಭಾರತದಲ್ಲಿ ಹಲವಾರು ಮಹಿಳಾ ಪ್ರಧಾನ ಆಕ್ಷನ್ ಸಿನಿಮಾಗಳು, ಮಹಿಳಾ ಪ್ರಧಾನ ಪೊಲೀಸ್ ಆಕ್ಷನ್ ಸಿನಿಮಾಗಳು, ರಿವೇಂಜ್ ಆಕ್ಷನ್ ಸಿನಿಮಾಗಳು ಬಂದಿವೆ. ವಿಜಯಶಾಂತಿ, ಮಾಲಾಶ್ರೀ ಸೇರಿದಂತೆ ಹಲವು ನಟಿಯರು ಆಕ್ಷನ್ ಸಿನಿಮಾಗಳಿಂದಲೇ ಹೆಚ್ಚು ಜನಪ್ರಿಯತೆ ಗಳಿಸಿದ್ದೂ ಸಹ ಇದೆ. ಆದರೆ ಭಾರತದ ಈ ವರೆಗೆ ಮಹಿಳಾ ಪ್ರಧಾನ ಸ್ಪೈ ಆಕ್ಷನ್ ಸಿನಿಮಾ ಬಂದಿಲ್ಲ. ಸ್ಪೈ ಸಿನಿಮಾಗಳಲ್ಲಿ ನಾಯಕಿಯರು ನಟಿಸಿದ್ದಿದೆ, ನಾಯಕಿಯರು ಸ್ಪೈ ಆಗಿಯೂ ನಟಿಸಿದ್ದಿದೆ, ಆದರೆ ಆ ಸಿನಿಮಾಗಳಲ್ಲಿ ನಾಯಕನೇ ಪ್ರಧಾನ ಸ್ಪೈ ಆಗಿರುತ್ತಾನೆ. ಆದರೆ ಈಗ ನಾಯಕಿಯೇ ಪ್ರಧಾನ ಪಾತ್ರದಲ್ಲಿರುವ ಸ್ಪೈ ಸಿನಿಮಾ ಬರುತ್ತಿದೆ.
ಈಗಾಗಲೇ ಹಾಲಿವುಡ್ನಲ್ಲಿ ಆಕ್ಷ್ಯನ್ ಸಿನಿಮಾದಲ್ಲಿ ನಟಿಸಿ ಬಂದಿರುವ ಆಲಿಯಾ ಭಟ್ ಈಗ ಭಾರತದಲ್ಲಿಯೂ ತಮ್ಮ ಆಕ್ಷನ್ ಅವತಾರ ತೋರಲು ಸಜ್ಜಾಗಿದ್ದಾರೆ. ಹಾಲಿವುಡ್ನಲ್ಲಿ ‘ಹಾರ್ಟ್ ಆಫ್ ಸ್ಟೋನ್’ ಆಕ್ಷನ್ ಸಿನಿಮಾದಲ್ಲಿ ನಟಿಸಿರುವ ಆಲಿಯಾ ಇದೀಗ ಭಾರತದ ಮೊಟ್ಟ ಮೊದಲ ಮಹಿಳಾ ಪ್ರಧಾನ ಸ್ಪೈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಆಲಿಯಾ ಜೊತೆಗೆ ನಟಿ ಶಾರ್ವರಿ ಸಹ ನಟಿಸುತ್ತಿದ್ದಾರೆ. ಸಿನಿಮಾಕ್ಕೆ ‘ಆಲ್ಫಾ’ ಎಂದು ಹೆಸರಿಡಲಾಗಿದೆ.
ಒರಟು, ಗಟ್ಟಿ, ಮಾಚೋ ವ್ಯಕ್ತಿತ್ವದ ಪುರುಷರನ್ನು ‘ಆಲ್ಫಾ ಮೇಲ್’ ಎಂದು ಕರೆಯಲಾಗುತ್ತದೆ. ಆದರೆ ಮಹಿಳಾ ಸ್ಪೈ ಸಿನಿಮಾಕ್ಕೆ ‘ಆಲ್ಫಾ’ ಎಂದು ಹೆಸರಿಡುವ ಮೂಲಕ ಮಹಿಳೆಯರು ಸಹ ರಗಡ್ ವ್ಯಕ್ತಿತ್ವದರಾಗಿರಬಹುದು ಎಂದು ಪರೋಕ್ಷವಾಗಿ ಹೇಳುತ್ತಿದ್ದಾರೆ ನಿರ್ದೇಶಕ. ಸಿನಿಮಾದ ಟೈಟಲ್ ಟೀಸರ್ ಬಿಡುಗಡೆ ಆಗಿದ್ದು ‘ಗ್ರೀಕ್ ವರ್ಣಮಾಲೆಯ ಮೊದಲ ಅಕ್ಷರ ಎಲ್ಲರಗಿಂತಲೂ ವೇಗದವ, ಎಲ್ಲರಿಗಿಂತಲೂ ವೀರ. ಸರಿಯಾಗಿ ನೋಡಿದರೆ ಪ್ರತಿ ನಗರದಲ್ಲಿಯೂ ಒಂದು ಅರಣ್ಯ ಇರುತ್ತದೆ. ಆ ಅರಣ್ಯದಲ್ಲಿ ಯಾವಾಗಲೂ ಆಳ್ವಿಕೆ ಮಾಡುವುದು ‘ಆಲ್ಫಾ’ ಎಂದು ಟೀಸರ್ನಲ್ಲಿ ಆಲಿಯಾ ಹೇಳಿದ್ದಾರೆ.
ಇದನ್ನೂ ಓದಿ:ರಣಬೀರ್ ಕಪೂರ್-ಆಲಿಯಾ ಭಟ್ ಮನೆಗೆ ಬಂತು ಲಕ್ಷುರಿ ಲೆಕ್ಸಸ್ ಕಾರು
ಈ ಹಿಂದೆ ‘ಪಠಾಣ್’, ‘ಟೈಗರ್’ ಸಿನಿಮಾ ಸರಣಿ, ‘ವಾರ್’ ಸಿನಿಮಾ ಸರಣಿಗಳ ಮೂಲಕ ಸ್ಪೈ ಯೂನಿವರ್ಸ್ ಸೃಷ್ಟಿ ಮಾಡಿರುವ ಯಶ್ ರಾಜ್ ಫಿಲಮ್ಸ್ನವರು ಈಗ ಮಹಿಳಾ ಪ್ರಧಾನ ಸ್ಪೈ ಸಿನಿಮಾಗಳಿಗೆ ಕೈ ಹಾಕಿದ್ದು, ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾವನ್ನು ಶಿವ ರವೈಲ್ ನಿರ್ದೇಶನ ಮಾಡಿದ್ದಾರೆ. ಆಲಿಯಾ ಭಟ್ ಈಗಾಗಲೇ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಸಿನಿಮಾದಲ್ಲಿ ರಣ್ಬೀರ್ ಕಪೂರ್ ಜೊತೆ ನಟಿಸಲು ಎಸ್ ಹೇಳಿದ್ದಾರೆ. ಈಗ ‘ಆಲ್ಫಾ’ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಒಂದು ಹಾಲಿವುಡ್ ಸಿನಿಮಾವನ್ನು ಸಹ ಆಲಿಯಾ ಒಪ್ಪಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ