ಡ್ರಗ್ಸ್ ಬಗ್ಗೆ ಜನರಿಗೆ ಬುದ್ಧಿ ಹೇಳಲು ಹೋಗಿ ಟ್ರೋಲ್ ಆದ ಆಲಿಯಾ ಭಟ್

ಮಾದಕ ದ್ರವ್ಯದ ವ್ಯಸನದ ಬಗ್ಗೆ ಯುವಜನತೆಗೆ ಬುದ್ಧಿ ಹೇಳಲು ಆಲಿಯಾ ಭಟ್ ಬಂದಿದ್ದಾರೆ. ಆದರೆ ಅವರ ಮಾತನ್ನು ಕೇಳುವ ಬದಲು ನೆಟ್ಟಿಗರು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಟ್ರೋಲ್ ಶುರು ಆಗುತ್ತಿದ್ದಂತೆಯೇ ಕಮೆಂಟ್ ಸೆಕ್ಷನ್ ಆಫ್ ಮಾಡಲಾಗಿದೆ. ಜಾಗೃತಿ ಸಂದೇಶ ನೀಡಲು ಆಲಿಯಾ ಭಟ್ ಆಯ್ಕೆಯೇ ಸರಿಯಿಲ್ಲ ಎಂಬುದು ಜನರ ಅಭಿಪ್ರಾಯ.

ಡ್ರಗ್ಸ್ ಬಗ್ಗೆ ಜನರಿಗೆ ಬುದ್ಧಿ ಹೇಳಲು ಹೋಗಿ ಟ್ರೋಲ್ ಆದ ಆಲಿಯಾ ಭಟ್
Alia Bhatt

Updated on: Aug 21, 2025 | 8:44 PM

ಚಿತ್ರರಂಗಕ್ಕೆ ಹಲವು ಬಾರಿ ಡ್ರಗ್ಸ್ (Drugs) ಕಳಂಕ ಅಂಟಿಕೊಂಡಿತ್ತು. ಅನೇಕ ಸೆಲೆಬ್ರಿಟಿಗಳ ಮೇಲೆ ಡ್ರಗ್ಸ್ ಸೇವನೆ ಆರೋಪ ಇದೆ. ಮಾದಕ ದ್ರವ್ಯದ ವ್ಯಸನಕ್ಕೆ ಬಲಿಯಾಗಿ ಅನೇಕ ಯುವಕ-ಯುವತಿಯರು ಜೀವನ ಹಾಳು ಮಾಡಿಕೊಂಡಿದ್ದಾರೆ. ಹಾಗಾಗಿ ಜನರಿಗೆ ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಇತ್ತೀಚೆಗೆ ಮಾದಕ ದ್ರವ್ಯ ನಿಗ್ರಹ ದಳ (NCB) ಒಂದು ವಿಡಿಯೋ ಬಿಡುಗಡೆ ಮಾಡಿದೆ. ಅದರಲ್ಲಿ ನಟಿ ಆಲಿಯಾ ಭಟ್ (Alia Bhatt) ಕಾಣಿಸಿಕೊಂಡಿದ್ದಾರೆ. ಡ್ರಗ್ಸ್ ಸೇವನೆ ಮಾಡದಿರಿ ಎಂಬ ಸಂದೇಶವನ್ನು ಈ ಮೂಲಕ ನೀಡಲಾಗಿದೆ. ಆದರೆ ಬುದ್ಧಿ ಹೇಳಲು ಬಂದ ಆಲಿಯಾ ಭಟ್ ಅವರನ್ನೇ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

ನಟಿ ಆಲಿಯಾ ಭಟ್ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಇದೆ. ಹಾಗಾಗಿ ಅವರನ್ನು ಈ ಸಂದೇಶ ನೀಡಲು ಆಯ್ಕೆ ಮಾಡಿಕೊಳ್ಳಲಾಗಿದೆ. ‘ಮಾದಕ ವ್ಯಸನದ ಗಂಭೀರ ವಿಷಯದ ಬಗ್ಗೆ ನಾನು ಇಂದು ಮಾತನಾಡುತ್ತಿದ್ದೇನೆ. ನಮ್ಮ ಸಮಾಜಕ್ಕೆ, ದೇಶಕ್ಕೆ, ಜನರಿಗೆ ಡ್ರಗ್ಸ್ ಮಾರಕವಾಗಿದೆ. ಜೀವನವನ್ನು ಆರಿಸಿಕೊಳ್ಳಿ, ಡ್ರಗ್ಸ್ ಅಲ್ಲ’ ಎಂದು ಆಲಿಯಾ ಭಟ್ ಅವರು ಸಂದೇಶ ನೀಡಿದ್ದಾರೆ.

ಈ ವಿಡಿಯೋ ಪೋಸ್ಟ್ ಆಗುತ್ತಿದ್ದಂತೆಯೇ ನೆಗೆಟಿವ್ ಕಮೆಂಟ್​​ಗಳು ಬರಲು ಶುರುವಾದವು. ಹಾಗಾಗಿ ಕೂಡಲೇ ಕಮೆಂಟ್ ಸೆಕ್ಷನ್ ನಿಷ್ಕ್ರಿಯ ಮಾಡಲಾಯಿತು. ಆದರೆ ಇದೇ ವಿಡಿಯೋವನ್ನು ಅನೇಕರು ರೀ-ಶೇರ್​ ಮಾಡಿಕೊಂಡಿದ್ದಾರೆ. ಅದಕ್ಕೆ ಕಮೆಂಟ್​​ಗಳು ಬಂದಿವೆ. ‘ಇದರ ಅನುಭವ ನಿಮಗೆ ಮೊದಲೇ ಆಗಿರುತ್ತದೆ ಅಲ್ಲವೇ’ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.

ಆಲಿಯಾ ಭಟ್ ವಿಡಿಯೋ:

ಬಾಲಿವುಡ್​​ನ ಅನೇಕರು ಮಾದಕ ದ್ರವ್ಯ ಸೇವನೆ ಮಾಡುತ್ತಾರೆ ಎಂಬ ಆರೋಪ ಇದೆ. ಈ ಮೊದಲು ಕರಣ್ ಜೋಹರ್ ಅವರ ಮನೆಯಲ್ಲಿ ಪಾರ್ಟಿ ನಡೆದಾಗ ಅನೇಕರು ನಶೆಯಲ್ಲಿ ಇದ್ದಂತೆ ಕಾಣಿಸಿದ್ದರು. ಇಂಥವರ ಜೊತೆ ಸ್ನೇಹ ಹೊಂದಿರುವ ಆಲಿಯಾ ಭಟ್ ಅವರಿಂದ ಡ್ರಗ್ಸ್ ಬಗ್ಗೆ ಜನರಿಗೆ ಬುದ್ಧಿ ಹೇಳಿಸಿರುವುದು ಸೂಕ್ತ ಅಲ್ಲ ಎಂಬುದು ನೆಟ್ಟಿಗರ ಅಭಿಪ್ರಾಯ.

ಇದನ್ನೂ ಓದಿ: ಇವರು ಮತ್ತೋರ್ವ ಜಯಾ ಬಚ್ಚನ್’; ಆಲಿಯಾ ಭಟ್ ವಿರುದ್ಧ ತಿರುಗಿಬಿದ್ದ ನೆಟ್ಟಿಗರು

ಇಷ್ಟೇ ಅಲ್ಲ, ಆಲಿಯಾ ಭಟ್ ಅವರ ಪತಿ, ನಟ ರಣಬೀರ್ ಕಪೂರ್ ಅವರು ಈ ಮೊದಲು ಮಾದಕ ದ್ರವ್ಯ ಸೇವಿಸಿದ್ದನ್ನು ಒಪ್ಪಿಕೊಂಡಿದ್ದರು. ‘ರಾಕ್​ಸ್ಟಾರ್’ ಸಿನಿಮಾದ ಸಮಯದಲ್ಲಿ ಅವರು ಮಾದಕ ವಸ್ತು ಸೇವಿಸಿದ್ದರು. ಅಂಥವರ ಪತ್ನಿಯಾಗಿ ಆಲಿಯಾ ಭಟ್ ಅವರು ಈಗ ಮಾದಕ ದ್ರವ್ಯದ ಸೇವನೆ ಬಗ್ಗೆ ಜಾಗೃತಿ ಮೂಡಿಸಲು ಬಂದಿರುವುದೇ ಹಾಸ್ಯಾಸ್ಪದವಾಗಿ ಕಾಣಿಸುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.