ಹಿಂದಿ ಸಿನಿಪ್ರಿಯರ ವಲಯದಲ್ಲಿ ಸಖತ್ ನಿರೀಕ್ಷೆ ಮೂಡಿಸಿರುವ ಸಿನಿಮಾಗಳ ಪೈಕಿ ‘ಲಾಲ್ ಸಿಂಗ್ ಚಡ್ಡಾ’ ಚಿತ್ರ ಕೂಡ ಪ್ರಮುಖವಾಗಿದೆ. ಈ ಸಿನಿಮಾದಲ್ಲಿ ಆಮಿರ್ ಖಾನ್ (Aamir Khan) ಪ್ರಮುಖ ಪಾತ್ರ ಮಾಡಿದ್ದು, ಅವರಿಗೆ ಜೋಡಿಯಾಗಿ ಕರೀನಾ ಕಪೂರ್ ಖಾನ್ (Kareena Kapoor Khan) ನಟಿಸಿದ್ದಾರೆ. ಟಾಲಿವುಡ್ ನಟ ನಾಗ ಚೈತನ್ಯ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಈಗಾಗಲೇ ಬಿಡುಗಡೆ ಆಗಿರಬೇಕಿತ್ತು. ಆದರೆ ಕಾರಣಾಂತರಗಳಿಂದ ಚಿತ್ರದ ರಿಲೀಸ್ ವಿಳಂಬ ಆಯಿತು. ಆಗಸ್ಟ್ 11ರಂದು ಚಿತ್ರ ಬಿಡುಗಡೆ ಮಾಡಲು ಸಕಲ ಸಿದ್ಧತೆ ನಡೆದಿದೆ. ಪ್ರಚಾರ ಕಾರ್ಯವೂ ಭರದಿಂದ ಸಾಗುತ್ತಿದೆ. ಇತ್ತೀಚೆಗಷ್ಟೇ ‘ಲಾಲ್ ಸಿಂಗ್ ಚಡ್ಡಾ’ (Laal Singh Chaddha) ಸಿನಿಮಾದ ಟ್ರೇಲರ್ ಬಿಡುಗಡೆ ಆಯಿತು. ಅದನ್ನು ಕಂಡ ನೆಟ್ಟಿಗರು ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಇದೊಂದು ಕಾಪಿ ಸಿನಿಮಾ ಎಂದು ಅನೇಕರು ಟೀಕೆ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಮಿರ್ ಖಾನ್ ಅವರನ್ನು ಸಖತ್ ಟ್ರೋಲ್ ಮಾಡಲಾಗುತ್ತಿದೆ. ಆ ಕುರಿತು ಇಲ್ಲಿದೆ ಮಾಹಿತಿ..
ಹಾಲಿವುಡ್ನ ‘ಫಾರೆಸ್ಟ್ ಗಂಪ್’ ಸಿನಿಮಾದ ಹಿಂದಿ ರಿಮೇಕ್ ಆಗಿ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಮೂಡಿಬರುತ್ತಿದೆ. ಮೂಲ ಸಿನಿಮಾದಲ್ಲಿ ಟಾಮ್ ಹ್ಯಾಂಕ್ಸ್ ಮಾಡಿದ್ದ ಪಾತ್ರವನ್ನು ಬಾಲಿವುಡ್ನಲ್ಲಿ ಆಮಿರ್ ಖಾನ್ ಮಾಡಿದ್ದಾರೆ. ‘ಸೀಕ್ರೆಟ್ ಸೂಪರ್ ಸ್ಟಾರ್’ ಖ್ಯಾತಿಯ ಅದ್ವೈತ್ ಚಂದನ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ‘ಫಾರೆಸ್ಟ್ ಗಂಪ್’ ಸಿನಿಮಾದ ಕಥೆಯನ್ನು ‘ಲಾಲ್ ಸಿಂಗ್ ಚಡ್ಡಾ’ ಚಿತ್ರದಲ್ಲಿ ಯಥಾವತ್ತು ನಕಲು ಮಾಡಿರುವುದಕ್ಕೆ ಟ್ರೇಲರ್ನಲ್ಲಿ ಸಾಕ್ಷಿ ಸಿಕ್ಕಿದೆ. ಅದರಲ್ಲೂ ಒಂದು ಫೇಮಸ್ ಡೈಲಾಗ್ ಅನ್ನು ತಮ್ಮದೇ ರೀತಿಯಲ್ಲಿ ಬದಲಾವಣೆ ಮಾಡಿಕೊಂಡಿರುವ ಕಾರಣದಿಂದಲೂ ಈ ಸಿನಿಮಾ ಟ್ರೋಲ್ ಆಗುತ್ತಿದೆ.
‘ಬದುಕು ಒಂದು ಚಾಕೊಲೇಟ್ ಬಾಕ್ಸ್ ಇದ್ದಂತೆ. ಯಾವಾಗ ಏನು ಸಿಗತ್ತೋ ಗೊತ್ತಾಗಲ್ಲ ಅಂತ ನಮ್ಮ ಅಮ್ಮ ಯಾವಾಗಲೂ ಹೇಳುತ್ತಿದ್ದರು’ ಎಂಬ ಡೈಲಾಗ್ ‘ಫಾರೆಸ್ಟ್ ಗಂಪ್’ ಚಿತ್ರದಲ್ಲಿ ಇದೆ. ‘ಜೀವನ ಎಂಬುದು ಗೋಲ್ಗಪ್ಪಾ ರೀತಿ ಇರುತ್ತದೆ. ಹೊಟ್ಟೆ ತುಂಬಿದರೂ ಮನಸ್ಸು ತುಂಬುವುದಿಲ್ಲ ಅಂತ ಅಮ್ಮ ಹೇಳುತ್ತಿದ್ದರು’ ಎಂಬ ಡೈಲಾಗ್ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದ ಟ್ರೇಲರ್ನಲ್ಲಿ ಹೈಲೈಟ್ ಆಗಿದೆ.
ಈ ರೀತಿ ಡೈಲಾಗ್ ಬದಲಾಯಿಸಿರುವುದನ್ನು ಕ್ರಿಯೇಟಿವಿಟಿ ಎಂದು ಕೆಲವರು ಬಣ್ಣಿಸಿದ್ದಾರೆ. ಆದರೆ ಇದು ಸರಿಯಾದ ರೀತಿಯ ಬಳಕೆ ಅಲ್ಲ ಎಂದು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಸುದ್ದಿ ಆಗುತ್ತಿದೆ. ‘ಪಿಕೆ’ ಸಿನಿಮಾದಲ್ಲಿ ಕಾಣಿಸಿಕೊಂಡ ರೀತಿಯಲ್ಲೇ ಆಮಿರ್ ಖಾನ್ ಮತ್ತೊಮ್ಮೆ ನಟಿಸಿದ್ದಾರೆ ಎಂಬ ಕಮೆಂಟ್ಗಳು ಕೂಡ ಬಂದಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.