ನಟ ಅಮಿತಾಭ್ ಬಚ್ಚನ್ (Amitabh Bachchan) ಅವರಿಗೆ ಚಿತ್ರರಂಗದಲ್ಲಿ ಹಲವು ದಶಕಗಳ ಅನುಭವ ಇದೆ. ಇಂದಿಗೂ ಅವರು ದಣಿವರಿಯದ ವ್ಯಕ್ತಿಯಂತೆ ಬಣ್ಣದ ಲೋಕದಲ್ಲಿ ಕೆಲಸ ಮಾಡುತ್ತಲೇ ಇದ್ದಾರೆ. ಅಮಿತಾಭ್ ಬಚ್ಚನ್ ಅವರಿಗೆ ಈಗ 79 ವರ್ಷ ವಯಸ್ಸು. ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಅವರು ಎದುರಿಸಿ ನಿಂತಿದ್ದಾರೆ. ಈ ವಯಸ್ಸಿನಲ್ಲೂ ಅವರು ಹಗಲಿರುಳು ಕಷ್ಟಪಡುತ್ತಿದ್ದಾರೆ. ಅನಾರೋಗ್ಯದ ಕಾರಣದಿಂದಲೂ ಅವರು ಆಗಾಗ ಸುದ್ದಿಯಾಗುತ್ತಾರೆ. ಅದರ ನಡುವೆ ಅಮಿತಾಭ್ ಬಚ್ಚನ್ ಅವರು ಮಾಡಿದ ಒಂದೇ ಒಂದು ಟ್ವೀಟ್ನಿಂದ (Amitabh Bachchan Tweet) ಅಭಿಮಾನಿಗಳಲ್ಲಿ ಆತಂಕ ಮೂಡುವಂತಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರುವ ಅವರು ತಮ್ಮ ದಿನಚರಿ ಕುರಿತ ಮಾಹಿತಿ ನೀಡುತ್ತಾ ಇರುತ್ತಾರೆ. ಭಾನುವಾರ ರಾತ್ರಿ (ಫೆ.27) ಅವರು ಮಾಡಿದ ಒಂದು ಟ್ವೀಟ್ನಿಂದ ಎಲ್ಲರಿಗೂ ಚಿಂತೆ ಶುರುವಾಗಿದೆ. ‘ಹೃದಯ ಬಡಿಯುತ್ತಿದೆ.. ಕಾಳಜಿ ಆಗಿದೆ. ಭರವಸೆ ಇದೆ’ ಎಂದು ಅಮಿತಾಭ್ ಬಚ್ಚನ್ ಟ್ವೀಟ್ ಮಾಡಿದ್ದಾರೆ. ಇದರ ಅರ್ಥ ಏನು ಎಂಬುದನ್ನು ಅವರು ಸರಿಯಾಗಿ ತಿಳಿಸಿಲ್ಲ. ಹಾಗಾಗಿ ಅಭಿಮಾನಿಗಳಿಗೆ ಆತಂಕ ಆಗಿದೆ. ಅಮಿತಾಭ್ ಆರೋಗ್ಯ (Amitabh Bachchan Health) ಕೈ ಕೊಟ್ಟಿರಬಹುದು ಎಂದು ಫ್ಯಾನ್ಸ್ ಭಾವಿಸಿದ್ದಾರೆ.
ಅಮಿತಾಭ್ ಬಚ್ಚನ್ ಮಾಡಿರುವ ಈ ಒಂದು ವಾಕ್ಯದ ಟ್ವೀಟ್ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದೆ. ಸಾವಿರಾರು ಜನರು ಇದನ್ನು ಲೈಕ್ ಮಾಡಿದ್ದು, ನೂರಾರು ಮಂದಿ ರೀಟ್ವೀಟ್ ಮಾಡಿದ್ದಾರೆ. ಕಮೆಂಟ್ ಮಾಡಿರುವ ಅನೇಕರು ಅಮಿತಾಭ್ ಅವರ ಆರೋಗ್ಯದ ಬಗ್ಗೆ ಆತಂಕ ಹೊರಹಾಕಿದ್ದಾರೆ.
‘ನೀವು ಬೇಗ ಗುಣಮುಖರಾಗಲಿ ಅಂತ ಪ್ರಾರ್ಥಿಸುತ್ತೇವೆ ಸರ್’ ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ. ‘ಚಿಂತೆ ಮಾಡಬೇಡಿ ಸರ್. ನಿಮಗೆ ಏನೂ ಆಗುವುದಿಲ್ಲ. ವಿಶ್ರಾಂತಿ ಪಡೆದು ಚೆನ್ನಾಗಿ ನಿದ್ರೆ ಮಾಡಿ’ ಎಂದು ಮತ್ತೊರ್ವ ಅಭಿಮಾನಿ ಸಲಹೆ ನೀಡಿದ್ದಾರೆ. ಜನರು ಈ ರೀತಿ ಕಮೆಂಟ್ ಮಾಡಿದ್ದರೂ ಕೂಡ ಅಮಿತಾಭ್ ಬಚ್ಚನ್ ಅವರು ತಮ್ಮ ಟ್ವೀಟ್ನ ಅರ್ಥ ಏನು ಎಂಬುದನ್ನು ವಿವರಿಸಿಲ್ಲ.
T 4205 – heart pumping .. concerned .. and the hope ..?❤️
— Amitabh Bachchan (@SrBachchan) February 27, 2022
ವರ್ಷಗಳು ಉರುಳಿದಂತೆ ಅಮಿತಾಭ್ ಬಚ್ಚನ್ ಅವರ ಚಾರ್ಮ್ ಹೆಚ್ಚುತ್ತಲೇ ಇದೆ. ಹೊಸ ತಲೆಮಾರಿನ ಯುವ ಹೀರೋಗಳಿಗೂ ಸಹ ಪೈಪೋಟಿ ನೀಡುವ ರೀತಿಯಲ್ಲಿ ಅಮಿತಾಭ್ ಅವರು ಇಂದಿಗೂ ಬೇಡಿಕೆ ಉಳಿಸಿಕೊಂಡಿದ್ದಾರೆ. ಬಾಲಿವುಡ್ ನಿರ್ದೇಶಕರು ಬಿಗ್ ಬಿ ಸಲುವಾಗಿಯೇ ಕಥೆಗಳನ್ನು ಸಿದ್ಧಪಡಿಸುತ್ತಾರೆ. ಅಮಿತಾಭ್ ಅವರ ಕಾಲ್ಶೀಟ್ ಪಡೆಯಲು ಈಗಲೂ ನಿರ್ಮಾಪಕರು ಕ್ಯೂ ನಿಲ್ಲುತ್ತಾರೆ. ಚಿತ್ರರಂಗದ ಎಷ್ಟೋ ಹೀರೋಗಳಿಗೆ ಮಾದರಿಯಾಗಿ, ಪ್ರೇರಣೆಯಾಗಿ ಅಮಿತಾಭ್ ಬಚ್ಚನ್ ಕಾರ್ಯಮಗ್ನರಾಗಿದ್ದಾರೆ.
ಸದ್ಯ ಅಮಿತಾಭ್ ಬಚ್ಚನ್ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಕಳೆದ ವರ್ಷ ಬಿಡುಗಡೆ ಆದ ‘ಚೆಹ್ರೆ’ ಚಿತ್ರದಲ್ಲಿ ಅವರು ಡಿಫರೆಂಟ್ ಪಾತ್ರ ನಿಭಾಯಿಸಿದ್ದರು. ಮಾ.4ರಂದು ಅವರ ‘ಜುಂಡ್’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಅವರು ಫುಟ್ಬಾಲ್ ಕೋಚ್ ಪಾತ್ರ ಮಾಡಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಮತ್ತು ಅಮಿತಾಭ್ ಬಚ್ಚನ್ ಅವರು ‘ಗುಡ್ ಬೈ’ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಚಿತ್ರ ಕೂಡ ಹೈಪ್ ಸೃಷ್ಟಿ ಮಾಡಿದೆ. ಇದಲ್ಲದೇ ‘ಬ್ರಹ್ಮಾಸ್ತ್ರ’, ‘ಊಂಚಾಯಿ’, ‘ರನ್ವೇ 34’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅಮಿತಾಭ್ ಬಚ್ಚನ್ ನಟಿಸುತ್ತಿದ್ದಾರೆ. ಇದರ ನಡುವೆ ಅವರು ಕಿರುತೆರೆ ಕಾರ್ಯಕ್ರಮಗಳ ನಿರೂಪಣೆ ಮಾಡುವ ಮೂಲಕವೂ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ.
ಇದನ್ನೂ ಓದಿ:
ಅಮಿತಾಭ್ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದಾರೆ ಕೃತಿ ಸನೋನ್; ತಿಂಗಳ ಬಾಡಿಗೆ ಅಬ್ಬಬ್ಬಾ ಇಷ್ಟೊಂದಾ?
‘ಕೌನ್ ಬನೇಗಾ ಕರೋಡ್ಪತಿ’ ಶೋನಲ್ಲಿ ಕನ್ನಡ ಸಿನಿಮಾ ಮಾತು; ಅಮಿತಾಭ್ ಕಡೆಯಿಂದ ಶುಭ ಹಾರೈಕೆ