ಬಾಲಿವುಡ್ (Bollywood) ಯುವ ನಟಿ ಅನನ್ಯಾ ಪಾಂಡೆ (Ananya Pandey), ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನೆಪೊಟಿಸಂ ಪ್ರಾಡಕ್ಟ್ ಆಗಿರುವ ಕಾರಣಕ್ಕೆ ಸಾಕಷ್ಟು ಟೀಕೆಗೆ ಗುರಿಯಾಗುತ್ತಿದ್ದರೂ ಸಹ ಬಾಲಿವುಡ್ನಲ್ಲಿ ಅನನ್ಯಾಗೆ ಅವಕಾಶಗಳ ಮೇಲೆ ಅವಕಾಶಗಳು ಸಿಗುತ್ತಲೇ ಇವೆ. ಕರಣ್ ಜೋಹರ್ ಸೇರಿದಂತೆ ಹಲವು ಗಾಡ್ಫಾದರ್ಗಳು ಅನನ್ಯಾಗೆ ಇರುವುದೇ ಇದಕ್ಕೆ ಕಾರಣ ಎನ್ನುವ ಮಾತುಗಳೂ ಇವೆ. ಯಾವುದೇ ಏನೇ ಆಗಲಿ, ಅನನ್ಯಾ ಬಾಲಿವುಡ್ನ ಬ್ಯುಸಿ ಯುವನಟಿಯರಲ್ಲಿ ಒಬ್ಬರು. ಇದೀಗ ಅನನ್ಯಾ ಹೊಸದೊಂದು ಐಶಾರಾಮಿ ಮನೆ ಖರೀದಿ ಮಾಡಿದ್ದಾರೆ. ದೀಪಾವಳಿ ಅಥವಾ ಮಹಾರಾಷ್ಟ್ರದಲ್ಲಿ ಕರೆಯಲಾಗುವ ದಂತೇರಸ್ ಹಬ್ಬಕ್ಕೆ ಮನೆಯ ಗೃಹ ಪ್ರವೇಶವನ್ನೂ ಮಾಡಿದ್ದಾರೆ.
ಹೊಸ ಮಹೆಯ ಪೂಜೆ ಮಾಡಿರುವ ಚಿತ್ರಗಳನ್ನು ಅನನ್ಯಾ ಪಾಂಡೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನನ್ನ ಹೊಸ ಮನೆ. ನನ್ನ ಹೊಸ ಪ್ರಾರಂಭಕ್ಕೆ ನಿಮ್ಮ ಪ್ರೀತಿ ಮತ್ತು ಧನಾತ್ಮಕ ಹಾರೈಕೆಗಳು ಬೇಕು. ಎಲ್ಲರಿಗೂ ದಂತೇರಸ್ ಹಬ್ಬದ ಶುಭಾಶಯಗಳು ಎಂದು ಅನನ್ಯಾ ಪಾಂಡೆ ಬರೆದುಕೊಂಡಿದ್ದಾರೆ. ಮನೆಯಲ್ಲಿ ಪೂಜೆ ಮಾಡಿರುವ ಚಿತ್ರದ ಜೊತೆಗೆ, ಮನೆಯ ಬಾಗಿಲ ಮುಂದೆ ತೆಂಗಿನ ಕಾಯಿ ಒಡೆಯುತ್ತಿರುವ ವಿಡಿಯೋವನ್ನು ಸಹ ಅನನ್ಯಾ ಪಾಂಡೆ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಅನನ್ಯಾ ಪಾಂಡೆ ಪ್ರೀತಿಸುತ್ತಿರುವುದು ಇಶಾನ್ ಅನ್ನೋ ಕಾರ್ತಿಕ್ ಅನ್ನೋ: ಕರಣ್ ಜೋಹರ್ಗೆ ಸಿಕ್ತಾ ಉತ್ತರ?
ಮುಂಬೈನ ಜುಹು ಏರಿಯಾದ ಸಮೀಪದ ಅಪಾರ್ಟ್ಮೆಂಟ್ ಒಂದರಲ್ಲಿ ಹೊಸ ಪ್ಲ್ಯಾಟ್ ಅನ್ನು ಅನನ್ಯಾ ಪಾಂಡೆ ಖರೀದಿ ಮಾಡಿದ್ದಾರೆ. ಈ ಪ್ಲ್ಯಾಟ್ಗೆ ಅನನ್ಯಾ ಪಾಂಡೆ ಆರು ಕೋಟಿ ಕೊಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಟ್ಟು ಮನೆಯ ವಿಸ್ತೀರ್ಣ 3000 ಚದರ ಅಡಿಗಳಿವೆಯಂತೆ. ಈ ಐಶಾರಾಮಿ ಮನೆಯಲ್ಲಿ ಅನನ್ಯಾ ಪಾಂಡೆ ಒಬ್ಬರೇ ಇರಲಿದ್ದಾರೆ ಎನ್ನಲಾಗುತ್ತಿದೆ. ಅನನ್ಯಾ ತಮ್ಮ ಮೊದಲ ಮನೆ ಖರೀದಿಸಿದ್ದಕ್ಕೆ ತಾಯಿ ಭಾವನಾ ಪಾಂಡೆ ಹಾಗೂ ತಂದೆ ಚಂಕಿ ಪಾಂಡೆ ಖುಷಿ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಹಲವು ಬಾಲಿವುಡ್ ನಟ-ನಟಿಯರು ರಿಯಲ್ ಎಸ್ಟೇಟ್ ಮೇಲೆ ಬಂಡವಾಳ ಹೂಡಿದ್ದಾರೆ. ನಟಿಯರಾದ ಪರಿಣೀತಿ ಚೋಪ್ರಾ, ಕಾಜೋಲ್, ದೀಪಿಕಾ ಪಡುಕೋಣೆ, ಆಲಿಯಾ ಭಟ್, ಅಜಯ್ ದೇವಗನ್, ನಟ ಅಮಿತಾಬ್ ಬಚ್ಚನ್, ಪ್ರಿಯಾಂಕಾ ಚೋಪ್ರಾ ಇನ್ನೂ ಕೆಲವರು ಮುಂಬೈನಲ್ಲಿ ಅಪಾರ್ಟ್ಮಿಂಟ್ ಖರೀದಿ ಮಾಡಿದ್ದಾರೆ.
ಅನನ್ಯಾ ಪಾಂಡೆ 2019ರಲ್ಲಿ ಕರಣ್ ಜೋಹರ್ ನಿರ್ದೇಶನದ ‘ಸ್ಟುಡೆಂಟ್ ಆಫ್ ದಿ ಇಯರ್ 2’ ಸಿನಿಮಾ ಮೂಲಕ ತಮ್ಮ ನಟನಾ ಪ್ರಯಾಣ ಪ್ರಾರಂಭಿಸಿದರು. ಅನನ್ಯಾ ನಟಿಸಿರುವ ಆರು ಸಿನಿಮಾಗಳು ಈ ವರೆಗೆ ಬಿಡುಗಡೆ ಆಗಿವೆ. ಅದರಲ್ಲಿ ತೆಲುಗಿನ ‘ಲೈಗರ್’ ಸಹ ಒಂದು. ಪ್ರಸ್ತುತ ಮೂರು ಹಿಂದಿ ಸಿನಿಮಾಗಳಲ್ಲಿ ಅನನ್ಯಾ ನಟಿಸುತ್ತಿದ್ದಾರೆ. ಒಂದು ಒಟಿಟಿ ಶೋನಲ್ಲಿಯೂ ಅನನ್ಯಾ ಕಾಣಿಸಿಕೊಳ್ಳಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:26 pm, Sat, 11 November 23