ದೀಪಾವಳಿ ಹಬ್ಬಕ್ಕೆ ಬಂತು ‘ಡಂಕಿ’ ಹೊಸ ಪೋಸ್ಟರ್
Dunki: ಶಾರುಖ್ ಖಾನ್ ನಟನೆಯ ‘ಡಂಕಿ’ ಸಿನಿಮಾದ ಟೀಸರ್ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿ ಇಷ್ಟವಾಗಿತ್ತು. ಇದೀಗ ದೀಪಾವಳಿ ಹಬ್ಬದ ಪ್ರಯುಕ್ತ ಹೊಸ ಪೋಸ್ಟರ್ ಬಿಡುಗಡೆ ಆಗಿದೆ.
ಶಾರುಖ್ ಖಾನ್ಗೆ (Shah Rukh Khan) ಈ ವರ್ಷ ಅತ್ಯಂತ ಅದೃಷ್ಟದ ವರ್ಷ. ಕೋವಿಡ್ಗೆ ಮುನ್ನ ಸತತ ಸೋಲುಗಳಿಂದ ಕಂಗೆಟ್ಟಿದ್ದ ಶಾರುಖ್ ಖಾನ್ಗೆ ಈ ವರ್ಷ ಚಿನ್ನದ ಫಸಲು ದೊರೆತಿದೆ. ಈ ವರ್ಷ ಈವರೆಗೆ ಬಿಡುಗಡೆ ಆಗಿರುವ ಎರಡು ಸಿನಿಮಾಗಳು ಗಳಿಕೆಯಲ್ಲಿ ದಾಖಲೆಯನ್ನೇ ಬರೆದಿವೆ. ಈಗ ಮತ್ತೊಂದು ಸಿನಿಮಾ ಸಹ ಇದೇ ವರ್ಷ ಬಿಡುಗಡೆ ಆಗಲು ಸಜ್ಜಾಗಿದ್ದು, ಆ ಸಿನಿಮಾ ಸಹ ಸೂಪರ್-ಡೂಪರ್ ಹಿಟ್ ಆಗುವುದರಲ್ಲಿ ಸಂಶವಿಲ್ಲ ಎನ್ನಲಾಗುತ್ತಿದೆ. ಶಾರುಖ್ ಖಾನ್ ‘ಡಂಕಿ’ ಸಿನಿಮಾದಲ್ಲಿ ನಟಿಸುತ್ತಿದ್ದು ಸಿನಿಮಾದ ಹೊಸ ಪೋಸ್ಟರ್ ಒಂದು ದೀಪಾವಳಿ ಹಬ್ಬಕ್ಕೆ ಬಿಡುಗಡೆ ಆಗಿದೆ.
‘ಡಂಕಿ’ ಸಿನಿಮಾದ ಟೀಸರ್ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿ ಸಖತ್ ಸದ್ದು ಮಾಡಿತ್ತು. ಶಾರುಖ್ ಖಾನ್ ಜನ್ಮದಿನಕ್ಕೆ ಡಂಕಿ ‘ಡ್ರಾಪ್ 1’ ಎಂಬ ಟೈಟಲ್ ಅಡಿಯಲ್ಲಿ ಸಿನಿಮಾದ ಟೀಸರ್ ಬಿಡುಗಡೆ ಆಗಿತ್ತು. ಇದೀಗ ದೀಪಾವಳಿ ಹಬ್ಬದ ಸ್ಪೆಷಲ್ ‘ಡಂಕಿ’ ಸಿನಿಮಾದ ಎರಡು ಹೊಸ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಪ್ರೀತಿ, ನಗು ಹಾಗೂ ಸ್ನೇಹ ತುಂಬಿರುವ ಎರಡು ಹೊಸ ಪೋಸ್ಟರ್ ನಲ್ಲಿ ಶಾರುಖ್ ಸ್ನೇಹ ಬಳಗವನ್ನು ಪರಿಚಯ ಮಾಡಿಕೊಡಲಾಗಿದೆ. ಕಿಂಗ್ ಖಾನ್ ಜೊತೆ ತಾಪ್ಸಿ ಪನ್ನು, ವಿಕ್ಕಿ ಕೌಶಲ್, ವಿಕ್ರಮ್ ಕೊಚ್ಚರ್ ಹಾಗೂ ಅನಿಲ್ ಗ್ರೋವರ್ ಒಟ್ಟಿಗೆ ನಿಂತು ನಗು ಬೀರಿದ್ದಾರೆ. ಎರಡೂ ಪೋಸ್ಟರ್ಸ್ ಗಳಿಗೆ ಅಭಿಮಾನಿಗಳ ಪ್ರಶಂಸೆ ದೊರೆತಿದೆ.
ಇದನ್ನೂ ಓದಿ:ದಾಖಲೆ ಬರೆದ ಡಂಕಿ ಸಿನಿಮಾ ಟೀಸರ್: ಮತ್ತೊಂದು ಬ್ಲಾಕ್ ಬಸ್ಟರ್ಗೆ ಶಾರುಖ್ ಖಾನ್ ರೆಡಿ
ರಾಜ್ ಕುಮಾರ್ ಹಿರಾನಿ, ಅಭಿಜತ್ ಜೋಶಿ ಮತ್ತು ಕನಿಕಾ ಧಿಲ್ಲೋನ್ ‘ಡಂಕಿ’ ಸಿನಿಮಾಕ್ಕೆ ಕಥೆ ಬರೆದ್ದಿದ್ದಾರೆ. ಸೋಲಿಲ್ಲದ ರಾಜ್ ಕುಮಾರ್ ಹಿರಾನಿ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಹಾರ್ಡಿ ಪಾತ್ರದಲ್ಲಿ ಶಾರುಖ್ , ಮನು ಪಾತ್ರದಲ್ಲಿ ತಾಪ್ಸಿ ನಟಿಸಿದ್ದಾರೆ. ನಿರ್ದೇಶಕ ರಾಜಕುಮಾರ್ ಹಿರಾನಿಯ ಮೆಚ್ಚಿನ ನಟ ಬೊಮನ್ ಇರಾನಿ ಇಲ್ಲಿ ಗುಲಾಟಿ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ಹೀಗೆ ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ಆ್ಯಕ್ಟ್ ಮಾಡಿದ್ದಾರೆ.
ಕಾನೂನು ಬಾಹಿರವಾಗಿ ಕೆನಡಾ ಮತ್ತು ಅಮೆರಿಕಕ್ಕೆ ಹೋಗುವ ಜನರ ಕಥೆಯನ್ನೆ ‘ಡಂಕಿ’ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ರಾಜ್‌ಕುಮಾರ್ ಹಿರಾನಿ. ‘ಡಂಕಿ’ ಸಿನಿಮಾವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ಒಟ್ಟಿಗೆ ನಿರ್ಮಾಣ ಮಾಡಿದ್ದಾರೆ. ಇದೇ ವರ್ಷ ಕ್ರಿಸ್‌ಮಸ್ ಹಬ್ಬದ ವೇಳೆಗೆ ‘ಡಂಕಿ’ ಸಿನಿಮಾ ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.
ನಾಲ್ಕು ರಾಷ್ಟ್ರಪ್ರಶಸ್ತಿ ಗೆದ್ದಿರುವ ಸ್ಟಾರ್ ಡೈರೆಕ್ಟರ್ ರಾಜ್ ಕುಮಾರ್ ಹಿರಾನಿ ‘ಡಂಕಿ’ ಸಿನಿಮಾವನ್ನು ನಿರ್ದೇಶಿಸಿರುವ ಕಾರಣಕ್ಕೆ ಈ ಸಿನಿಮಾ ಪಕ್ಕಾ ಹಿಟ್ ಎನ್ನಲಾಗುತ್ತಿದೆ. ‘ಮುನ್ನಾ ಬಾಯ್ ಎಂಬಿಬಿಎಸ್’, ‘3 ಈಡಿಯಟ್ಸ್’, ‘ಪಿಕೆ’, ‘ಸಂಜು’ನಂತಹ ಸೂಪರ್ ಡೂಪರ್ ಹಿಟ್ ಚಿತ್ರ ಕೊಟ್ಟಿರುವ ಹಿರಾನಿ, ಈ ಬಾರಿ ಐದು ಜನ ಸ್ನೇಹಿತರ ಕಥೆ ಹೇಳೋದಿಕ್ಕೆ ಬರುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ