ಅವೆಂಜರ್ಸ್ ಸರಣಿಯಲ್ಲಿ ಶಾರುಖ್ ಖಾನ್? ದೊಡ್ಡ ಹಿಂಟ್ ಕೊಟ್ಟ ಹಾಲಿವುಡ್​ ನಟ

‘ಕ್ಯಾಪ್ಟನ್ ಅಮೆರಿಕ: ಬ್ರೇವ್ ನ್ಯೂ ವರ್ಲ್ಡ್‌’ನ ನಟ ಆಂಥೋನಿ ಮ್ಯಾಕಿ ಅವರು ಅವೆಂಜರ್ಸ್‌ನ ಮುಂದಿನ ಸರಣಿಗೆ ಶಾರುಖ್ ಖಾನ್ ಅತ್ಯುತ್ತಮ ಆಯ್ಕೆ ಎಂದು ಹೇಳಿದ್ದಾರೆ. ಶಾರುಖ್ ಅವರ ಜಾಗತಿಕ ಖ್ಯಾತಿಯನ್ನು ಗಮನಿಸಿ ಅವರನ್ನು ಹಾಲಿವುಡ್‌ನಲ್ಲಿ ನೋಡುವ ಬಯಕೆ ಹೆಚ್ಚಾಗಿದೆ. ಈ ಹೇಳಿಕೆಯಿಂದ ಶಾರುಖ್ ಖಾನ್ ಅವರಿಗೆ ಹಾಲಿವುಡ್‌ನಿಂದ ಆಫರ್ ಸಿಗುವ ಸಾಧ್ಯತೆಯಿದೆ.

ಅವೆಂಜರ್ಸ್ ಸರಣಿಯಲ್ಲಿ ಶಾರುಖ್ ಖಾನ್? ದೊಡ್ಡ ಹಿಂಟ್ ಕೊಟ್ಟ ಹಾಲಿವುಡ್​ ನಟ
ಆ್ಯಂಥೋನಿ-ಶಾರುಖ್​

Updated on: Feb 12, 2025 | 7:01 AM

‘ಮಾರ್ವೆಲ್ ಸ್ಟುಡಿಯೋ’ ವಿಶ್ವದ ಶ್ರೇಷ್ಠ ನಿರ್ಮಾಣ ಸಂಸ್ಥೆಗಳಲ್ಲಿ ಒಂದು. ವಿವಿಧ ರೀತಿಯ ಸೂಪರ್ ಹೀರೋಗಳನ್ನು ಸೃಷ್ಟಿ ಮಾಡಿ ಜನರ ಎದುರು ಇಡಲು ಅವರು ಸದಾ ಮುಂದೆ ಇರುತ್ತಾರೆ. ಮಾರ್ವೆಲ್ ಸ್ಟುಡಿಯೋ ‘ಕ್ಯಾಪ್ಟನ್ ಅಮೆರಿಕ: ಬ್ರೇವ್ ನ್ಯೂ ವರ್ಲ್ಡ್’ ಮೂಲಕ ಈ ವರ್ಷವನ್ನು ಆರಂಭಿಸುತ್ತಿದೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದ್ದು ಫೆಬ್ರವರಿ 14ರಂದು ಸಿನಿಮಾ ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಕ್ಯಾಪ್ಟನ್ ಅಮೆರಿಕ ಪಾತ್ರದಲ್ಲಿ ಕಾಣಿಸಿಕೊಂಡಿರೋ ಆಂಥೋನಿ ಮ್ಯಾಕಿ ಅವರು ಶಾರುಖ್ ಖಾನ್ ಬಗ್ಗೆ ಒಂದು ವಿಶೇಷ ಹೇಳಿಕೆ ನೀಡಿದ್ದಾರೆ.

ಶಾರುಖ್ ಖಾನ್ ಅವರು ಕೇವಲ ಬಾಲಿವುಡ್​ಗೆ ಮಾತ್ರ ಸೀಮಿತವಾಗಿಲ್ಲ. ಅವರ ಹೆಸರು ಹಾಲಿವುಡ್​​ ಮಂದಿಗೂ ತಿಳಿದಿದೆ. ಅನೇಕರು ಶಾರುಖ್ ಖಾನ್ ಜೊತೆ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಈಗ ಕ್ಯಾಪ್ಟನ್ ಅಮೆರಿಕ ಪಾತ್ರ ಮಾಡಿರೋ ಆಂಥೋನಿ ಮ್ಯಾಕಿ ಅವರಿಗೆ ಈ ಬಗ್ಗೆ ಕೇಳಲಾಗಿದೆ. ಅವರು ಖುಷಿಯಿಂದ ಶಾರುಖ್ ಖಾನ್ ಬಗ್ಗೆ ಮಾತನಾಡಿದ್ದಾರೆ.

‘ಅವೆಂಜರ್ಸ್ ಮುಂದಿನ ಸರಣಿಯಲ್ಲಿ ಯಾವ ಬಾಲಿವುಡ್​ ಹೀರೋನ ನೀವು ಆಯ್ಕೆ ಮಾಡಿಕೊಳ್ಳುತ್ತೀರಿ’ ಎಂದು ಕೇಳಲಾಯಿತು. ಇದಕ್ಕೆ ಇತ್ತರಿಸಿದ ಅವರು, ‘ನನ್ನ ಪ್ರಕಾರ ಶಾರುಖ್ ಖಾನ್. ಅವರು ಇದಕ್ಕೆ ಅತ್ಯುತ್ತಮ ಆಯ್ಕೆ’ ಎಂದು ಹೇಳಿದ್ದಾರೆ. ಸದ್ಯ ಅವರು ನೀಡಿರುವ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಶಾರುಖ್ ಖಾನ್ ಅವರು ಅವೆಂಜರ್ಸ್ ಸಿನಿಮಾ ಮಾಡಬೇಕು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಶಾರುಖ್ ಖಾನ್ ಮನೆಗೆ ನುಗ್ಗಿ ಸ್ವಿಮ್ಮಿಂಗ್​ಪೂಲ್​ನಲ್ಲಿ ಸ್ನಾನ ಮಾಡಿದ್ದ ಅಭಿಮಾನಿ

ಶಾರುಖ್ ಖಾನ್ ಅವರು ಹೆಚ್ಚಾಗಿ ಬಾಲಿವುಡ್ ಸಿನಿಮಾಗಳನ್ನೇ ಮಾಡಿಕೊಂಡು ಬಂದಿದ್ದಾರೆ. ಅವರಿಗೆ ಇರೋ ಖ್ಯಾತಿಗೆ ಅವರು ಹಾಲಿವುಡ್​ ಸಿನಿಮಾಗಳನ್ನು ಮಾಡಬಹುದಿತ್ತು. ಆದರೆ, ಈ ಪ್ರಯತ್ನಕ್ಕೆ ಅವರು ಮುಂದಾಗಿಲ್ಲ. ಈಗ ಆಂಥೋನಿ ಮ್ಯಾಕಿ ಹೇಳಿಕೆ ಬಳಿಕ ಶಾರುಖ್ ಖಾನ್​ಗೆ ಹಾಲಿವುಡ್​ನಿಂದ ಆಫರ್ ಬರಲಿದೆಯೇ? ಬಂದರೆ ಅವರು ಒಪ್ಪಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.