‘ಪರೀಕ್ಷಾ ಪೆ ಚರ್ಚಾ’ದಲ್ಲಿ ಖಿನ್ನತೆ ಬಗ್ಗೆ ಮಾತನಾಡಿದ ದೀಪಿಕಾ; ಪ್ರಧಾನಿ ಮೋದಿಗೆ ಧನ್ಯವಾದ
‘ಪರೀಕ್ಷಾ ಪೆ ಚರ್ಚಾ’ದ ಎಂಟನೇ ಆವೃತ್ತಿಯಲ್ಲಿ ದೀಪಿಕಾ ಪಡುಕೋಣೆ ಅವರು ಭಾಗವಹಿಸಿದ್ದಾರೆ. ಪರೀಕ್ಷಾ ಒತ್ತಡ, ಖಿನ್ನತೆ ಮತ್ತು ಯಶಸ್ಸಿನ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಬಾಲ್ಯದ ನೆನಪುಗಳು, ಗಣಿತದಲ್ಲಿನ ತಮ್ಮ ದುರ್ಬಲತೆ ಮತ್ತು ಖಿನ್ನತೆಯನ್ನು ನಿಭಾಯಿಸಿದ ರೀತಿಯನ್ನು ಅವರು ವಿವರಿಸಿದ್ದಾರೆ. ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಎದುರಿಸಲು ಸಲಹೆಗಳನ್ನು ನೀಡುವುದರ ಜೊತೆಗೆ, ಅವರು ವಿವಿಧ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸಲು ಪ್ರಯತ್ನಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಪರೀಕ್ಷೆ ಬಂತು ಎಂದರೆ ಒತ್ತಡಕ್ಕೆ ಒಳಗಾಗುತ್ತಾರೆ. ಈ ಒತ್ತಡ ದೂರ ಮಾಡಲು ಪ್ರಧಾನಿ ಮೋದಿ ಅವರು ‘ಪರೀಕ್ಷಾ ಪೆ ಚರ್ಚಾ’ ಹೆಸರಿನ ಕಾರ್ಯಕ್ರಮ ಆರಂಭಿಸಿದ್ದಾರೆ. ಇದು ಎಂಟನೇ ಎಡಿಷನ್ ಆಗಿದ್ದು, ಇತ್ತೀಚೆಗೆ ಪ್ರಧಾನಿ ಮೋದಿ ಅವರು ಮಕ್ಕಳ ಜೊತೆ ಮಾತನಾಡಿದ್ದಾರೆ. ಈಗ ದೀಪಿಕಾ ಪಡುಕೋಣೆ ಅವರು ಇದರ ಭಾಗವಾಗಿದ್ದಾರೆ. ಈ ಪ್ರೋಮೋನ ಅವರ ಹಂಚಿಕೊಂಡಿದ್ದಾರೆ. ಇದರ ಸಂಪೂರ್ಣ ಎಪಿಸೋಡ್ ಫೆಬ್ರವರಿ 12ರ ಬೆಳಿಗ್ಗೆ 10 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಚಾನೆಲ್ನಲ್ಲಿ ಪ್ರಸಾರ ಕಾಣಲಿದೆ.
ದೀಪಿಕಾ ಪಡುಕೋಣೆ ಬಾಲಿವುಡ್ನ ಯಶಸ್ವಿ ನಟಿ. ಅವರು ಉದ್ಯಮಿ ಆಗಿಯೂ ಯಶಸ್ಸು ಕಂಡಿದ್ದಾರೆ. ಇದರ ಜೊತೆಗೆ ಅವರು ಸಾಕಷ್ಟು ಒತ್ತಡಗಳನ್ನು ಕೂಡ ಎದುರಿಸಬೇಕಾಯಿತು. ಈ ಒತ್ತಡದಿಂದ ಹೊರ ಬಂದು ಅವರು ಒಂದಷ್ಟು ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಈಗ ‘ಪರೀಕ್ಷಾ ಪೆ ಚರ್ಚಾ’ದಲ್ಲಿ ಅವರು ಇದೇ ರೀತಿಯ ಸಂದೇಶ ನೀಡಿದ್ದಾರೆ.
ದೀಪಿಕಾ ಪಡುಕೋಣೆ ಹಂಚಿಕೊಂಡಿರೋ ವಿಡಿಯೋದಲ್ಲಿ ಅವರ ಹಳೆಯ ದಿನಗಳ ಬಗ್ಗೆ ಇದೆ. ಇದರಲ್ಲಿ ದೀಪಿಕಾ ಅವರು ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಾರೆ. ಅವರು ಚಿಕ್ಕವರಿದ್ದಾಗ ತುಂಬಾನೇ ತುಂಟತನದ ಸ್ವಭಾವದವರಾಗಿದ್ದರಂತೆ. ಅವರು ಗಣಿತದಲ್ಲಿ ಸಖತ್ ವೀಕ್ ಆಗಿದ್ದರಂತೆ. ಈಗಲೂ ಅವರ ವೀಕ್ನೆಸ್ ಗಣಿತವೇ ಆಗಿದೆ.
ದೀಪಿಕಾ ಪಡುಕೋಣೆ ಅವರು ಒಮ್ಮೆ ಖಿನ್ನತೆಗೆ ಒಳಗಾದರು. ಈ ಘಟನೆಯ ಬಗ್ಗೆಯೂ ವಿದ್ಯಾರ್ಥಿಗಳ ಬಳಿ ಹೇಳಿಕೊಂಡಿದ್ದಾರೆ ದೀಪಿಕಾ. ಆ ಘಟನೆಯಿಂದ ಹೇಗೆ ಹೊರ ಬಂದರು ಎಂಬುದನ್ನು ಅವರು ಎಪಿಸೋಡ್ನಲ್ಲಿ ವಿವರಿಸಲಿದ್ದಾರೆ.
View this post on Instagram
ದೀಪಿಕಾ ಪಡುಕೋಣೆ ಅವರು ಮಕ್ಕಳಿಗೆ ವಿವಿಧ ರೀತಿಯ ಆ್ಯಕ್ಟಿವಿಟಿ ಮಾಡಿಸಿದ್ದಾರೆ. ಈ ಮೂಲಕ ಮಕ್ಕಳಿಗೆ ತಮ್ಮ ಬಳಿ ಇರುವ ಬಲ ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ವೇಳೆ ಅವರು ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಿದ್ದಾರೆ.
ಇದನ್ನೂ ಓದಿ: ಶಾರುಖ್ ಖಾನ್ ಮನೆಯ ಪಕ್ಕದಲ್ಲೇ ಮನೆ ಖರೀದಿಸಿದ ದೀಪಿಕಾ ಪಡುಕೋಣೆ
ಪರೀಕ್ಷೆಯನ್ನು ಹೇಗೆ ಎದುರಿಸಬೇಕು ಎಂಬಿತ್ಯಾದಿ ಟಿಪ್ಸ್ಗಳನ್ನು ದೀಪಿಕಾ ಪಡುಕೋಣೆ ಅವರು ನೀಡಲಿದ್ದಾರೆ. ಸಂಪೂರ್ಣ ಎಪಿಸೋಡ್ ನೋಡಲು ವಿದ್ಯಾರ್ಥಿಗಳು ಹಾಗೂ ಅವರ ಅಭಿಮಾನಿಗಳು ಕಾದಿದ್ದಾರೆ. ಮಗು ಜನಿಸಿದ ಬಳಿಕ ದೀಪಿಕಾ ಪಡುಕೋಣೆ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಂಡಿರಲಿಲ್ಲ. ಈಗ ಅವರು ಕಾರ್ಯಕ್ರಮದ ಭಾಗವಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.