
ಖ್ಯಾತ ಸಿನಿಮಾ ನಿರ್ಮಾಣ ಸಂಸ್ಥೆಯಾದ ಜೀ ಸ್ಟುಡಿಯೋಸ್ (Zee Studios) ತನ್ನ ಮುಂದಿನ ಮಹತ್ವಾಕಾಂಕ್ಷೆಯ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದೆ. ‘ಶ್ರೀ ರಾಮ್ ಭೂಮಿ’ (Shri Ram Bhoomi) ಎಂದು ಹೆಸರಿಡಲಾಗಿರುವ ಈ ಹೊಸ ಸಿನಿಮಾದ ಪ್ರಕಟಣೆಯನ್ನು ಸಂಸ್ಥೆಯು ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಶೀರ್ಷಿಕೆಯ ಕಾರಣದಿಂದಾಗಿ ಈ ಸಿನಿಮಾ ಬಗ್ಗೆ ತೀವ್ರ ಕುತೂಹಲ ಮೂಡಿದೆ. ಈ ಬಿಗ್ ಬಜೆಟ್ ಚಿತ್ರದಲ್ಲಿ ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್ (Anupam Kher) ಅವರು ಪ್ರಮುಖ ಪಾತ್ರ ಮಾಡಲಿದ್ದಾರೆ.
ಅನುಪಮ್ ಖೇರ್ ಜೊತೆ ರಿತ್ವಿಕ್ ಭೌಮಿಕ್, ಅಮೃತಾ ಖಾನ್ವಿಲ್ಕರ್ ಕೂಡ ‘ಶ್ರೀ ರಾಮ್ ಭೂಮಿ’ ಸಿನಿಮಾದಲ್ಲಿ ನಟಿಸಲಿದ್ದಾರೆ. ಇತ್ತೀಚೆಗಷ್ಟೇ ಸದ್ದು ಮಾಡಿದ್ದ ‘ದಿ ಕೇರಳ ಸ್ಟೋರಿ 2’ ಚಿತ್ರದ ನಿರ್ದೇಶಕ ಕಾಮಾಕ್ಯ ನಾರಾಯಣ್ ಸಿಂಗ್ ಅವರು ಈಗ ಈ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಹಲವು ನಿರ್ಮಾಪಕರು ಜೊತೆಯಾಗಿ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ.
ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಅವರಿಗೆ ‘ಶ್ರೀ ರಾಮ್ ಭೂಮಿ’ ಸಿನಿಮಾ ಮಹತ್ವ ಮಹತ್ವದ್ದಾಗಿದೆ. ಇದು ಅವರ ಚಿತ್ರಜೀವನದಲ್ಲಿ ಒಂದು ಮೈಲಿಗಲ್ಲಾಗಲಿದೆ. ಅವರು ನಟನೆ 552ನೇ ಚಿತ್ರ ಇದಾಗಿದೆ. ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿರುವ ಅನುಪಮ್ ಕೇರ್ ಅವರು ಸಿನಿಮಾ ಬಗ್ಗೆ ತಮಗೆ ಇರುವ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ.
ಈ ಚಿತ್ರದ ಕಥೆಯು ಸಾಂಸ್ಕೃತಿಕ ಮತ್ತು ಭಾವನಾತ್ಮಕವಾಗಿ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ವಿವರಿಸಿರುವ ಖೇರ್, ‘ತಲೆಮಾರುಗಳನ್ನು ದಾಟಿ ನಿಲ್ಲುವಂತಹ ಅತ್ಯಂತ ಪ್ರಮುಖವಾದ ಕಥೆಯನ್ನು ಈ ಸಿನಿಮಾ ಹೇಳುತ್ತದೆ. ಸತ್ಯ, ನಂಬಿಕೆಯ ಪರಿಕಲ್ಪನೆಯಲ್ಲಿ ಬೇರೂರಿರುವ ಈ ಅದ್ಭುತ ಚಿತ್ರದ ಭಾಗವಾಗಲು ನನಗೆ ಹೆಮ್ಮೆಯಾಗುತ್ತಿದೆ’ ಎಂದು ಅನುಪಮ್ ಖೇರ್ ಅವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಪ್ರತಿ ಸಿನಿಮಾದ ಸಂಭಾವನೆಯಲ್ಲಿ ತಮ್ಮ ಗುರುವಿಗೆ 25 ಸಾವಿರ ಕೊಡ್ತಾರೆ ಅನುಪಮ್ ಖೇರ್
ಸದ್ಯಕ್ಕೆ ಚಿತ್ರದ ಕಥೆಯ ಸಂಪೂರ್ಣ ವಿವರಗಳನ್ನು ಚಿತ್ರತಂಡ ರಹಸ್ಯವಾಗಿಟ್ಟಿದೆ. ಆದಾಗ್ಯೂ, ಜೀ ಸ್ಟುಡಿಯೋಸ್ ಮತ್ತು ಅನುಪಮ್ ಖೇರ್ ಅವರ ಹೇಳಿಕೆಗಳನ್ನು ಗಮನಿಸಿದರೆ, ಇದೊಂದು ಆಧ್ಯಾತ್ಮಿಕ ಹಾಗೂ ಸಾಮಾಜಿಕವಾಗಿ ಅತ್ಯಂತ ಪ್ರಭಾವಶಾಲಿಯಾದ ಕಥೆಯನ್ನು ಒಳಗೊಂಡ ಸಿನಿಮಾ ಆಗಿರಲಿದೆ ಎಂಬ ಸುಳಿವು ಸಿಗುತ್ತಿದೆ. ಚಿತ್ರದ ಅಧಿಕೃತ ಪ್ರಕಟಣೆ ಹೊರಬಿದ್ದಿರುವುದರಿಂದ ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದ್ದು, ಬಿಡುಗಡೆಯ ದಿನಾಂಕ ಮತ್ತು ಉಳಿದ ತಾರಾಗಣದ ಬಗ್ಗೆ ಹೆಚ್ಚಿನ ಮಾಹಿತಿ ಹೊರಬರಲು ಸಿನಿಪ್ರೇಕ್ಷಕರು ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.