ಈ ಬಾಲಿವುಡ್ ನಿರ್ದೇಶಕನ ಭೇಟಿ ಆಗಲು ಹಣ ಕೊಡಬೇಕಂತೆ
Anurag Kashyap: ಬಾಲಿವುಡ್ನ ಜನಪ್ರಿಯ ನಿರ್ದೇಶಕ ಅನುರಾಗ್ ಕಶ್ಯಪ್ ಅನ್ನು ಭೇಟಿ ಆಗಬೇಕೆಂದರೆ ಲಕ್ಷಗಟ್ಟಲೆ ಹಣ ಕೊಡಬೇಕಂತೆ.
ಸಿನಿಮಾ ನಿರ್ದೇಶಕರು, ಕತೆಗಳಿಗಾಗಿ, ಹೊಸ ಅನುಭವಗಳಿಗಾಗಿ ಬೇರೆ ಬೇರೆ ಸ್ಥಳಗಳಿಗೆ ಹೋಗಿ ಜನರನ್ನು ಭೇಟಿಯಾಗಿ ಅವರೊಟ್ಟಿಗೆ ಬೆರೆತು ಹೊಸ ಅನುಭವ ಪಡೆಯುತ್ತಾರೆ. ಹೊಸ ಐಡಿಯಾಗಳನ್ನು ಪಡೆಯುತ್ತಾರೆ. ಆದರೆ ಇಲ್ಲೊಬ್ಬ ಬಾಲಿವುಡ್ ನಿರ್ದೇಶಕ ಇದಕ್ಕೆ ತದ್ವಿರುದ್ಧ, ಯಾರಾದರೂ ವಿಶೇಷವಾಗಿ ಹೊಸ ಸಿನಿಮಾ ನಟರು ತಮ್ಮನ್ನು ಭೇಟಿಯಾಗಬೇಕೆಂದರೆ ಇಂತಿಷ್ಟು ಹಣ ನೀಡಬೇಕು ಎಂಬ ನಿಯಮ ಮಾಡಲಿದ್ದಾರಂತೆ. ಅಂದಹಾಗೆ ಈ ನಿಯಮ ಮಾಡುತ್ತಿರುವುದು ಬಾಲಿವುಡ್ನ ಜನಪ್ರಿಯ ನಿರ್ದೇಶಕ ಅನುರಾಗ್ ಕಶ್ಯಪ್.
ಬಾಲಿವುಡ್ನ ಹಲವು ಕಲ್ಟ್ ಸಿನಿಮಾಗಳಿಗೆ ಚಿತ್ರಕತೆ ಬರೆದಿರುವ, ‘ಗ್ಯಾಂಗ್ಸ್ ಆಫ್ ವಾಸೇಪುರ್’ ಸೇರಿದಂತೆ ಸೇರಿದಂತೆ ಕೆಲವು ಅತ್ಯುತ್ತಮ ಹಿಂದಿ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಅನುರಾಗ್ ಕಶ್ಯಪ್, ತಮ್ಮನ್ನು ಭೇಟಿ ಆಗುವ ಜನ ಹಣ ಕೊಡಬೇಕೆಂಬ ನಿಯಮ ಮಾಡುತ್ತಿರುವುದು ಹಣ ಮಾಡಲು ಅಲ್ಲ ಬದಲಿಗೆ. ತಮ್ಮನ್ನು ಭೇಟಿಯಾಗಲು ಬರುವ ಜನರಿಂದ ತಮಗಾಗುತ್ತಿರುವ ಸಮಸ್ಯೆಯಿಂದಾಗಿ ಈ ನಿರ್ಣಯವನ್ನು ಅನುರಾಗ್ ಕಶ್ಯಪ್ ಮಾಡಿದ್ದಾರೆ.
ಬಾಲಿವುಡ್ಗೆ ಹಲವು ಅತ್ಯುತ್ತಮ ಹೊಸ ನಟರನ್ನು ನೀಡಿದ ಶ್ರೇಯ ಅನುರಾಗ್ ಕಶ್ಯಪ್ಗಿದೆ. ನವಾಜುದ್ಧೀನ್ ಸಿದ್ಧಿಖಿ ಸೇರಿದಂತೆ ಹಲವು ಅತ್ಯುತ್ತಮ ನಟರನ್ನು ಅನುರಾಗ್ ಕಶ್ಯಪ್ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಅನುರಾಗ್ ಕಶ್ಯಪ್ ಸಾಮಾನ್ಯವಾಗಿ ಕೆಲಸ ಮಾಡುವುದೇ ಹೊಸ ನಟರೊಟ್ಟಿಗೆ. ಹಾಗಾಗಿ ಹಲವು ಹೊಸ ನಟರು ಅನುರಾಗ್ ಕಶ್ಯಪ್ ಅನ್ನು ಭೇಟಿಯಾಗಿ ತಮಗೆ ಅವಕಾಶ ನೀಡುವಂತೆ ದುಂಬಾಲು ಬೀಳುತ್ತಾರಂತೆ. ಕೆಲವರಂತೂ ಅಡ್ಡ ಹಾದಿಗಳನ್ನು ಹಿಡಿಯಲು ತಯಾರಾಗಿಯೇ ಬಂದಿರುತ್ತಾರಂತೆ. ಅಡ್ಡ ಹಾದಿ ಹಿಡಿದಾದರೂ ಸಿನಿಮಾಗಳಲ್ಲಿ ಸ್ಟಾರ್ ಆಗಬೇಕೆಂಬ ಹಂಬಲವೇ ಹೆಚ್ಚಿನ ಜನರಿಗೆ ಇದೆಯಂತೆ ಹೀಗೆಂದು ಸ್ವತಃ ಅನುರಾಗ್ ಕಶ್ಯಪ್ ಹೇಳಿಕೊಂಡಿದ್ದಾರೆ.
‘ಹಲವು ಹೊಸಬರಿಗೆ ನಾನು ಅವಕಾಶ ಕೊಟ್ಟೆ, ಸ್ಟಾರ್ ನಟರಾಗುವಂತೆ ಮಾಡಿದೆ. ಆದರೆ ಅದರಲ್ಲಿ ಅನೇಕರು ಕಳಪೆ ಗುಣಮಟ್ಟದ, ಮಾಮೂಲಿ ಕಮರ್ಶಿಯಲ್ ಸಿನಿಮಾಗಳಿಗೆ ಸೆಟಲ್ ಆಗಿಬಿಟ್ಟಿದ್ದಾರೆ. ಇಂಥಹವರಿಗಾಗಿ ಸಾಕಷ್ಟು ಸಮಯವನ್ನು ನಾನು ಹಾಳು ಮಾಡಿದ್ದೇನೆ. ಹಾಗಾಗಿ ಇನ್ನು ಮುಂದೆ ಯಾರೇ ನನ್ನನ್ನು ಭೇಟಿ ಆಗಬೇಕೆಂದರೂ ಹಣ ನೀಡಬೇಕು’ ಎಂದು ಅನುರಾಗ್ ಕಶ್ಯಪ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
‘10-15 ನಿಮಿಷಗಳ ಕಾಲ ನನ್ನನ್ನು ಭೇಟಿಯಾಗಿ ಮಾತನಾಡಲು 1 ಲಕ್ಷ ರೂಪಾಯಿ ಕೊಡಬೇಕು. ಅರ್ಧ ಗಂಟೆ ಮಾತನಾಡಲು ಎರಡು ಲಕ್ಷ ರೂಪಾಯಿ ಕೊಡಬೇಕು. ಒಂದು ಗಂಟೆ ನನ್ನೊಂದಿಗೆ ಮಾತನಾಡಲು ಐದು ಲಕ್ಷ ರೂಪಾಯಿ ಹಣ ಕೊಡಬೇಕು. ಜನರನ್ನು ಭೇಟಿಯಾಗಿ ಅವರಿಂದ ಸಾಕಷ್ಟು ಸಮಯವನ್ನು ನಾನು ವ್ಯರ್ಥ ಮಾಡಿಕೊಂಡಿದ್ದೇನೆ. ನನ್ನ ಭೇಟಿಗೆ ಇಷ್ಟು ಹಣ ವ್ಯಯಿಸುವ ಶಕ್ತಿ ನಿಮ್ಮಲ್ಲಿದ್ದರೆ ಮಾತ್ರವೇ ನನಗೆ ಕರೆ ಮಾಡಿ, ಭೇಟಿ ಮಾಡಿ, ಇಲ್ಲವಾದರೂ ಸುಮ್ಮನೆ ನನ್ನಿಂದ ದೂರವಿರಿ’ ಎಂದಿದ್ದಾರೆ ಅನುರಾಗ್ ಕಶ್ಯಪ್.
‘ಭೇಟಿ ಮಾಡುವುದು ಮಾತ್ರವೇ ಅಲ್ಲ ನನಗೆ ಮೆಸೇಜ್ ಮಾಡುವುದು, ಇನ್ಸ್ಟಾಗ್ರಾಂನಲ್ಲಿ ಖಾಸಗಿ ಸಂದೇಶ ಕಳಿಸುವುದು, ಇದೆಲ್ಲವನ್ನೂ ಮಾಡಬೇಡಿ, ದಯವಿಟ್ಟು ನನ್ನಿಂದ ದೂರವಿರಿ, ನಾನು ಸೇವಾ ಸಂಘ ಅಲ್ಲ’ ಎಂದು ಖಾರವಾಗಿಯೇ ಸಂದೇಶ ಹಾಕಿದ್ದಾರೆ ಅನುರಾಗ್ ಕಶ್ಯಪ್.