ಆರ್​​ಆರ್​ ವಿರುದ್ಧ ಕೇಸ್ ಹಾಕಿದ ಅರ್ಜುನ್ ಕಪೂರ್? ಪೋಸ್ಟ್​ ಡಿಲೀಟ್​ಗೆ ಇದುವೇ ಕಾರಣ

ಪಂಜಾಬ್ ಕಿಂಗ್ಸ್ ಕುರಿತು ರಾಜಸ್ಥಾನ ರಾಯಲ್ಸ್ ತಂಡ ಹಾಕಿದ್ದ ಐಪಿಎಲ್ ಮೀಮ್‌ನಲ್ಲಿ ಬಾಲಿವುಡ್ ನಟ ಅರ್ಜುನ್ ಕಪೂರ್ ಅವರ ವಿಡಿಯೋ ಬಳಸಲಾಗಿತ್ತು. ಇದು ನಟನ ಘನತೆಗೆ ಧಕ್ಕೆ ತರುವಂತಿತ್ತು. ತಕ್ಷಣವೇ ಪೋಸ್ಟ್ ಡಿಲೀಟ್ ಆಗಿದ್ದು, ಅರ್ಜುನ್ ಕಪೂರ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎನ್ನಲಾಗಿತ್ತು. ಆದರೆ, ಇತ್ತೀಚೆಗೆ ಅರ್ಜುನ್ ಕಪೂರ್ ಪಡೆದ 'ಪರ್ಸನಾಲಿಟಿ ರೈಟ್ಸ್' ಆದೇಶವೇ ಪೋಸ್ಟ್ ಡಿಲೀಟ್‌ಗೆ ಅಸಲಿ ಕಾರಣ ಎಂದು ವರದಿಯಾಗಿದೆ.

ಆರ್​​ಆರ್​ ವಿರುದ್ಧ ಕೇಸ್ ಹಾಕಿದ ಅರ್ಜುನ್ ಕಪೂರ್? ಪೋಸ್ಟ್​ ಡಿಲೀಟ್​ಗೆ ಇದುವೇ ಕಾರಣ
ಅರ್ಜುನ್ ಕಪೂರ್-ರಿಯಾನ್
Image Credit source: RR

Updated on: May 26, 2026 | 7:34 AM

ಐಪಿಎಲ್ 2026ರ ಪ್ಲೇಆಫ್ ರೇಸ್‌ನಿಂದ ಪಂಜಾಬ್ ಕಿಂಗ್ಸ್ ತಂಡ ಹೊರಬಿದ್ದ ಬೆನ್ನಲ್ಲೇ, ಸೋಶಿಯಲ್ ಮೀಡಿಯಾದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಹಾಕಿದ್ದ ಮೀಮ್ ಒಂದು ಚರ್ಚೆ ಹುಟ್ಟುಹಾಕಿತ್ತು. ಈ ಮೀಮ್ ಪಂಜಾಬ್ ಕಾಲೆಳೆಯಲು ಹಾಕಿದ್ದಾದರೂ ಬಾಲಿವುಡ್ ನಟ ಅರ್ಜುನ್ ಕಪೂರ್ ಅವರ ಘನತೆಗೆ ಧಕ್ಕೆ ತರುವ ರೀತಿ ಇತ್ತು. ಈಗ ಈ ಮೀಮ್​ ಅನ್ನು ಡಿಲೀಟ್ ಮಾಡಲಾಗಿದೆ. ಅರ್ಜುನ್ ಕಪೂರ್ ಅವರು ಆರ್ಆರ್ ಫ್ರಾಂಚೈಸಿ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆರ್​​ಆರ್​ ತಂಡದವರು ಈ ಪೋಸ್ಟ್​​ನ ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ.

ಶನಿವಾರ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂದ್ಯದಲ್ಲಿ ಗೆದ್ದಿದ್ದ ಪಂಜಾಬ್ ಕಿಂಗ್ಸ್ 15 ಅಂಕ ಪಡೆದು ಪ್ಲೇಆಫ್ ಆಶಯವನ್ನು ಜೀವಂತವಾಗಿರಿಸಿಕೊಂಡಿತ್ತು. ಆದರೆ ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ 30 ರನ್‌ಗಳ ಭರ್ಜರಿ ಗೆಲುವು ಸಾಧಿಸಿ 16 ಅಂಕಗಳ ಮೂಲಕ ನಾಲ್ಕನೇ ತಂಡವಾಗಿ ಪ್ಲೇಆಫ್ ಪ್ರವೇಶಿಸಿತು. ಇದರಿಂದಾಗಿ ಪಂಜಾಬ್ ಕಿಂಗ್ಸ್ ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಬೇಕಾಯಿತು.

ಲೀಗ್ ಹಂತದ ಆರಂಭದಲ್ಲಿ ಪಂಜಾಬ್ ಕಿಂಗ್ಸ್ ತಂಡ ವಿನಾಕಾರಣ ರಾಜಸ್ಥಾನ ರಾಯಲ್ಸ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಕಾಲೆಳೆದಿತ್ತು. ಇದಕ್ಕೆ ತಿರುಗೇಟು ನೀಡಲು ಕಾಯುತ್ತಿದ್ದ ರಾಜಸ್ಥಾನ ರಾಯಲ್ಸ್ ಅಡ್ಮಿನ್, ತಾವು ಪ್ಲೇಆಫ್ ತಲುಪಿದ ತಕ್ಷಣ ಟ್ವಿಟರ್ ಖಾತೆಯಲ್ಲಿ ಪಂಜಾಬ್ ಕಿಂಗ್ಸ್ ಅನ್ನು ಕೆಣಕುವಂತೆ ‘ಪಂಗಾ ನಾ ಲೋ’ ಎಂಬ ಶೀರ್ಷಿಕೆಯೊಂದಿಗೆ ಒಂದು ಮೀಮ್ ವಿಡಿಯೋವನ್ನು ಪೋಸ್ಟ್ ಮಾಡಿದ್ದರು.

ವಿಡಿಯೋದಲ್ಲೇನಿತ್ತು?

ಬಾಲಿವುಡ್ ನಟ ಅರ್ಜುನ್ ಕಪೂರ್ ಅವರ ಮನೆಯಲ್ಲಿ ಕಾರ್ಯಕ್ರಮ ಒಂದು ನಡೆದಿತ್ತು. ಬಂದ ಅತಿಥಿಗಳನ್ನು ಅವರು ಮನೆಯ ಒಳಗೆ ಕಳುಹಿಸುತ್ತಾರೆ. ಕೊನೆಗೆ ಅವರನ್ನೇ ಹೊರಕ್ಕೆ ಇಟ್ಟು ಬಾಗಿಲು ಹಾಕಲಾಗುತ್ತದೆ. ಈ ವಿಡಿಯೋ ಪಾಪರಾಜಿಗಳ ಕ್ಯಾಮೆರಾದಲ್ಲಿ ಸೆರೆ ಆಗಿತ್ತು. ಪಂಜಾಬ್ ಕಿಂಗ್ಸ್‌ಗೆ ಪ್ಲೇಆಫ್ ಬಾಗಿಲು ಮುಚ್ಚಿದೆ ಎಂದು ಲೇವಡಿ ಮಾಡಲು ಅರ್ಜುನ್ ಕಪೂರ್ ಅವರ ವಿಡಿಯೋವನ್ನು ಬಳಸಿಕೊಳ್ಳಲಾಗಿತ್ತು. ಇದು ನಟನ ಘನತೆಗೆ ಕುಂದು ತರುವ ರೀತಿಯಲ್ಲಿ ಇತ್ತೆನ್ನಲಾಗಿದೆ.

ಪೋಸ್ಟ್ ಆದ 24 ಗಂಟೆಗಳ ಒಳಗಾಗಿ ರಾಜಸ್ಥಾನ ರಾಯಲ್ಸ್ ತಂಡ ಈ ವಿಡಿಯೋವನ್ನು ಡಿಲೀಟ್ ಮಾಡಿದೆ. ಅರ್ಜುನ್ ಕಪೂರ್ ಅವರು ರಾಜಸ್ಥಾನ ರಾಯಲ್ಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಮತ್ತು ಅವರ ಇಮೇಜ್‌ಗೆ ಧಕ್ಕೆ ತಂದಿದ್ದಕ್ಕಾಗಿ ನೋಟಿಸ್ ನೀಡಿದ್ದಾರೆ ಎಂಬ ವದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಆದರೆ, ನಟನ ಕಡೆಯಿಂದಾಗಲಿ ಅಥವಾ ಅವರ ಕಾನೂನು ತಂಡದಿಂದಾಗಲಿ ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

ಆರ್ಆರ್ ಪೋಸ್ಟ್ ಡಿಲೀಟ್ ಮಾಡಲು ಅಸಲಿ ಕಾರಣ ಇದಾ?

ಇತ್ತೀಚೆಗಷ್ಟೇ ನಟ ಅರ್ಜುನ್ ಕಪೂರ್ ಅವರು ದೆಹಲಿ ಹೈಕೋರ್ಟ್‌ನಿಂದ ತಮ್ಮ ‘ಪರ್ಸನಾಲಿಟಿ ರೈಟ್ಸ್’ ರಕ್ಷಣೆಗಾಗಿ ಮಧ್ಯಂತರ ಆದೇಶವನ್ನು ಪಡೆದುಕೊಂಡಿದ್ದಾರೆ. ಈ ಆದೇಶದ ಪ್ರಕಾರ, ಅರ್ಜುನ್ ಕಪೂರ್ ಅವರ ಅನುಮತಿಯಿಲ್ಲದೆ ಅವರ ಹೆಸರು, ಧ್ವನಿ, ಚಿತ್ರ ಅಥವಾ ವಿಡಿಯೋಗಳನ್ನು ಮಾರ್ಫ್ ಮಾಡಿ, ಎಐ ತಂತ್ರಜ್ಞಾನ ಬಳಸಿ ಅಥವಾ ತಪ್ಪು ಮಾಹಿತಿ ಹರಡುವ ಉದ್ದೇಶಕ್ಕೆ ಬಳಸುವಂತಿಲ್ಲ.

ಇದನ್ನೂ ಓದಿ:  ಸತತ 6 ಗೆಲುವು, ಅಗ್ರಸ್ಥಾನ; ಆರ್​ಸಿಬಿಯನ್ನು ಗೇಲಿ ಮಾಡಿ ಹಳಿತಪ್ಪಿದ ಪಂಜಾಬ್

ಸಾರ್ವಜನಿಕ ಕಾಮೆಂಟ್‌ಗಳಿಗೆ ಸಂಪೂರ್ಣ ನಿಷೇಧ ಹೇರಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದ್ದರೂ, ಯಾವುದೇ ಸೆಲೆಬ್ರಿಟಿಯ ವರ್ಚಸ್ಸಿಗೆ ಧಕ್ಕೆ ತರುವಂತೆ ಅಥವಾ ವಾಣಿಜ್ಯ ಉದ್ದೇಶಕ್ಕೆ ಬಳಸುವುದನ್ನು ನಿರ್ಬಂಧಿಸಿದೆ. ಕೋರ್ಟ್‌ನ ಈ ಕಠಿಣ ಆದೇಶದ ಹಿನ್ನೆಲೆಯಲ್ಲಿ, ಮುಂದಾಗಬಹುದಾದ ಕಾನೂನು ಸಂಕಷ್ಟಗಳಿಂದ ಪಾರಾಗಲು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ತಕ್ಷಣವೇ ಎಚ್ಚೆತ್ತುಕೊಂಡು ಆ ವಿವಾದಾತ್ಮಕ ಪೋಸ್ಟ್ ಅನ್ನು ಡಿಲೀಟ್ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Loading...
Unable to load recommendations.
Follow Us