ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ (Aryan Khan) ಅವರ ಜಾಮೀನು ಅರ್ಜಿಯನ್ನು ಮುಂಬೈ ಹೈಕೋರ್ಟ್ ಇಂದು ವಿಚಾರಣೆ ನಡೆಸಲಿದೆ. ಕ್ರೂಸ್ ಶಿಪ್ ಒಂದರಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾಗಿದ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು. ಈ ಮೊದಲು ವಿಶೇಷ ನ್ಯಾಯಾಲಯದಲ್ಲಿ ಆರ್ಯನ್ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆದಿತ್ತು. ಆದರೆ ನ್ಯಾಯಾಲಯವು ಜಾಮೀನನ್ನು ನಿರಾಕರಿಸಿತ್ತು. ಜೊತೆಗೆ ನ್ಯಾಯಾಂಗ ಬಂಧನದ ಅವಧಿಯನ್ನು ಅಕ್ಟೋಬರ್ 30ರವರೆಗೆ ವಿಸ್ತರಿಸಲಾಗಿತ್ತು. ಇಂದು ನಡೆಯಲಿರುವ ವಿಚಾರಣೆಯಲ್ಲಿ ಖ್ಯಾತ ವಕೀಲ ಮುಕುಲ್ ರೋಹಟಗಿ (Mukul Rohatagi) ಆರ್ಯನ್ ಪರ ವಾದ ಮಂಡಿಸಲಿದ್ದಾರೆ. ಅವರು ಆರ್ಯನ್ ಪರ ಜಾಮೀನಿಗಾಗಿ ವಾದ ಮಂಡಿಸುತ್ತಿರುವ ಮೂರನೇ ವಕೀಲರಾಗಿದ್ದಾರೆ.
ಭಾರತದ ಮಾಜಿ ಅಟಾರ್ನಿ ಜನರಲ್ ಆಗಿರುವ ಮುಕುಲ್ ರೋಹಟಗಿ ಆರ್ಯನ್ ಪರ ವಾದ ಮಂಡಿಸುತ್ತಿದ್ದಾರೆ. ಅಕ್ಟೋಬರ್ 2ರಂದು ಬಂಧನಕ್ಕೊಳಗಾಗಿದ್ದ ಆರ್ಯನ್, ಕೆಲ ಕಾಲ ಎನ್ಸಿಬಿ ವಶದಲ್ಲಿದ್ದರು. ಅಕ್ಟೋಬರ್ 8ರಿಂದ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಪ್ರಸ್ತುತ ಅಕ್ಟೋಬರ್ 30ರವರೆಗೆ ಅವರ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ. ಈ ಹಿಂದೆ ಎರಡು ಬಾರಿ ಆರ್ಯನ್ ಖಾನ್ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು.
ಮೊದಲ ಬಾರಿಗೆ ನಟಿ ರಿಯಾ ಚಕ್ರವರ್ತಿ ಸೇರಿದಂತೆ ಹಲವರಿಗೆ ಜಾಮೀನು ಕೊಡಿಸಿದ್ದ ಖ್ಯಾತ ವಕೀಲ ಸತೀಶ್ ಮಾನೆಶಿಂಧೆ ಆರ್ಯನ್ ಪರ ವಾದ ಮಂಡಿಸಿದ್ದರು. ಆದರೆ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ಸರಿಯಾಗಿ ನಿರ್ವಹಿಸಿಲ್ಲ ಎಂದು ನ್ಯಾಯಾಲಯ ಜಾಮೀನು ತಿರಸ್ಕರಿಸಿತ್ತು. ನಂತರ ಸಲ್ಮಾನ್ ಖಾನ್ಗೆ ಹಿಟ್ ಆಂಡ್ ರನ್ ಪ್ರಕರಣದಲ್ಲಿ ಜಾಮೀನು ಕೊಡಿಸಿದ್ದ ಖ್ಯಾತ ವಕೀಲ ಅಮಿತ್ ದೇಸಾಯಿ ವಾದ ಮಂಡಿಸಿದ್ದರು.
ಆ ಸಮಯದಲ್ಲಿ ಎನ್ಸಿಬಿ ಜಾಮೀನು ನೀಡಿದರೆ ತನಿಖೆಗೆ ತೊಂದರೆಯಾಗಲಿದೆ ಎಂದು ಪ್ರತಿವಾದ ಮಂಡಿಸಿತ್ತು. ನ್ಯಾಯಾಲಯವು ಅಂತಿಮವಾಗಿ ಆರ್ಯನ್ಗೆ ಜಾಮೀನನ್ನು ನಿರಾಕರಿಸಿತ್ತು. ವಕೀಲರು ಹೈಕೋರ್ಟ್ಗೆ ಮೊರೆ ಹೋಗಲು ತೀರ್ಮಾನಿಸಿದ್ದರು. ಅದರಂತೆ ಇಂದು ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ. ಖ್ಯಾತ ವಕೀಲ ಮುಕುಲ್ ರೋಹಟಗಿ ವಾದ ಮಾಡುತ್ತಿರುವುದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ನ್ಯಾಯಮೂರ್ತಿ ನಿತಿನ್ ಸಾಂಬ್ರೆ ಜಾಮೀನು ಅರ್ಜಿಯ ವಿಚಾರಣೆ ನಡೆಸಲಿದ್ದಾರೆ.
ಇದನ್ನೂ ಓದಿ:
ರವಿಚಂದ್ರನ್ ಪುತ್ರರ ಬಗ್ಗೆ ಕಾಕ್ರೋಚ್ ಸುಧಿ ವಿಶೇಷ ಮಾತು; ‘ಕನಸುಗಾರ’ ನೆನಪಿಸಿದ ಮನು-ವಿಕ್ರಮ್