ಆರ್ಯನ್ ಖಾನ್ ಅವರು ಕಳೆದ ಕೆಲ ದಿನಗಳಿಂದ ಎನ್ಸಿಬಿ ಕಸ್ಟಡಿಯಲ್ಲಿದ್ದಾರೆ. ಅವರನ್ನು ನಿರಂತರವಾಗಿ ವಿಚಾರಣೆ ಮಾಡಲಾಗುತ್ತಿದೆ. ಅಕ್ಟೋಬರ್ 7ರವರೆಗೆ ಅವರು ಎನ್ಸಿಬಿ ವಶದಲ್ಲಿಯೇ ಇರುವುದು ಅನಿವಾರ್ಯ ಆಗಿದೆ. ಇನ್ನು, ಶಾರುಖ್ ಖಾನ್ ಅವರು ಆರ್ಯನ್ಗೆ ಜಾಮೀನು ಕೊಡಿಸೋಕೆ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಈ ಮಧ್ಯೆ ಶಾರುಖ್ ಮಗನಿಗೆ ಜೈಲಿನಲ್ಲಿ ಯಾವ ರೀತಿಯಲ್ಲಿ ಉಪಚಾರ ನೀಡಲಾಗುತ್ತಿದೆ ಎನ್ನುವ ಅನುಮಾನ ಅನೇಕರಲ್ಲಿದೆ.
ಸೆಲೆಬ್ರಿಟಿಗಳು ಬಂಧನಕ್ಕೆ ಒಳಗಾಗಿದ್ದಾರೆ ಎಂದರೆ ಅವರಿಗೆ ರಾಜ ಮರ್ಯಾದೆ ನೀಡಲಾಗುತ್ತದೆ. ಅವರನ್ನು ಅದ್ಭುತವಾಗಿ ನೋಡಿಕೊಳ್ಳಲಾಗುತ್ತದೆ ಎಂಬುದು ಎಲ್ಲರ ನಂಬಿಕೆ. ಅನೇಕ ಬಾರಿ ಇದು ಸಾಬೀತಾಗಿದೆ ಕೂಡ. ಈಗ ಆರ್ಯನ್ ಖಾನ್ ವಿಚಾರದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಆರ್ಯನ್ ಖಾನ್ ಎನ್ಸಿಬಿ ವಶದಲ್ಲಿದ್ದಾಗಲೇ ಬೇರೆಬೇರೆ ರೀತಿಯ ಬಟ್ಟೆ ಧರಿಸುತ್ತಿದ್ದಾರೆ. ಇದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು. ಆದರೆ, ಅವರನ್ನು ಸಾಮಾನ್ಯರಂತೆ ಟ್ರೀಟ್ ಮಾಡಲಾಗುತ್ತಿದೆ ಎನ್ನುತ್ತಿವೆ ಮೂಲಗಳು.
ಎನ್ಸಿಬಿ ಆವರಣದಲ್ಲಿರುವ ಮೆಸ್ನಿಂದಲೇ ಆರ್ಯನ್ ಖಾನ್ಗೆ ಆಹಾರ ಬರುತ್ತಿದೆ. ಆಹಾರದ ವಿಚಾರದಲ್ಲಿ ವಿನಾಯಿತಿ ನೀಡುವಂತೆ ಅವರು ಕೋರಿದ್ದರು. ಆದರೆ, ಕೋರ್ಟ್ ಇದಕ್ಕೆ ಅವಕಾಶ ನೀಡಿಲ್ಲ. ಹೀಗಾಗಿ, ಅವರು ಸಾಮಾನ್ಯ ಆಹಾರ ತಿನ್ನುವುದು ಅನಿವಾರ್ಯ ಆಗಿದೆ. ಇನ್ನು ಉಳಿದುಕೊಳ್ಳೋಕು ಸಾಮಾನ್ಯ ಕೊಠಡಿಯನ್ನೇ ನೀಡಲಾಗಿದೆ. ಸ್ಟಾರ್ ಕಿಡ್ ಆದರೂ ಆರ್ಯನ್ಗೆ ಯಾವುದೇ ವಿಐಪಿ ಟ್ರೀಟ್ಮೆಂಟ್ ಇಲ್ಲ.
ಆರ್ಯನ್ ಖಾನ್ ವಿಚಾರದಲ್ಲಿ ನಟಿ ರಮ್ಯಾ ಅನುಮಾನ ಹೊರಹಾಕಿದ್ದಾರೆ. ‘ಆರ್ಯನ್ ಖಾನ್ ಬಳಿ ಯಾವುದೇ ಮಾದಕ ವಸ್ತು ಸಿಕ್ಕಿಲ್ಲ. ಆದಾಗ್ಯೂ ಅವರನ್ನು ವಶಕ್ಕೆ ಪಡೆದಿದೆ. ನ್ಯಾಯಾಲಯದಲ್ಲಿ ವಾಟ್ಸಾಪ್ ಚಾಟ್‌ಗಳನ್ನು ಪುರಾವೆಯಾಗಿ ಸ್ವೀಕರಿಸಲಾಗುವುದಿಲ್ಲ. ಇನ್ನು, ವಿಚಾರಣೆ ವೇಳೆ ಆರ್ಯನ್ ಅವರು ಹೇಳಿದ್ದನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಎನ್ಸಿಬಿ ಹೇಳುತ್ತಿದೆ. ಇದರ ಜತೆಗೆ ಹೊರಗೆ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದೂ ಹೇಳುತ್ತಿದೆ. ವಿಚಾರಣೆ ವೇಳೆ ದೀಪಿಕಾ ಪಡುಕೋಣೆ ಸಾಕಷ್ಟು ಬಾರಿ ಅತ್ತರು, ಆರ್ಯನ್ ಖಾನ್ ಅತ್ತಿದ್ದಾರೆ ಎಂಬಿತ್ಯಾದಿ ಗಾಸಿಪ್ ಹರಡೋದು ಅವರಿಗೆ ಇಷ್ಟ ಎನಿಸುತ್ತದೆ. ಪ್ರಶ್ನೆ ಮಾಡುವಾಗ ಅಲ್ಲಿ ಯಾರೂ ಇರುವುದಿಲ್ಲ. ಆದಾಗ್ಯೂ ಇದು ಮಾಧ್ಯಮಗಳಿಗೆ ಹೇಗೆ ಸಿಕ್ಕಿತು?’ ಎಂದು ರಮ್ಯಾ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: We Stand with Aryan Khan: ಆರ್ಯನ್ ಖಾನ್, ಶಾರುಖ್ ಖಾನ್ಗೆ ಟ್ವಿಟರ್ ಮೂಲಕ ಬೆಂಬಲ ಸೂಚಿಸಿದ ಫ್ಯಾನ್ಸ್!