
ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ನಡೆದಿದ ದಾಳಿ ಬಗ್ಗೆ ದೇಶದೆಲ್ಲೆಡೆ ವಿರೋಧ ವ್ಯಕ್ತವಾಗಿದೆ. ಅನೇಕ ಸೆಲೆಬ್ರಿಟಿಗಳು ಕೂಡ ಈ ಘಟನೆಯನ್ನು ಖಂಡಿಸಿದ್ದಾರೆ. ಸಲ್ಮಾನ್ ಖಾನ್, ಶಾರುಖ್ ಖಾನ್, ಅಕ್ಷಯ್ ಕುಮಾರ್, ರಶ್ಮಿಕಾ ಮಂದಣ್ಣ, ಕಿಯಾರಾ ಅಡ್ವಾಣಿ ಸೇರಿದಂತೆ ಹಲವು ಕಲಾವಿದರು ತಮ್ಮ ಪ್ರತಿಕ್ರಿಯೆ ತಿಳಿಸಿದ್ದಾರೆ. ಈಗ ಖ್ಯಾತ ಸಂಗೀತ ನಿರ್ದೇಶಕ ಸಲೀಂ ಮರ್ಚೆಂಟ್ ಅವರು ಕೂಡ ಉಗ್ರರ ದಾಳಿಯನ್ನು ಖಂಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ವಿಡಿಯೋ ಹಂಚಿಕೊಂಡಿದ್ದಾರೆ. ಅವರ ವಿಡಿಯೋ ವೈರಲ್ ಆಗಿದೆ.
‘ಹಿಂದೂಗಳು ಎಂಬ ಕಾರಣಕ್ಕೆ ಪಹಲ್ಗಾಮ್ನಲ್ಲಿ ಅಮಾಯಕರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಲಾಗಿದೆ. ಹಂತಕರು ಮುಸ್ಲಿಮರೇ? ಅಲ್ಲ, ಅವರು ಭಯೋತ್ಪಾದಕರು. ಯಾಕೆಂದರೆ ಇಸ್ಲಾಂ ಇದನ್ನು ಹೇಳಿಕೊಡುವುದಿಲ್ಲ. ಧರ್ಮದ ವಿಚಾರದಲ್ಲಿ ಯಾವುದೇ ಬಲವಂತ ಮಾಡುವಂತಿಲ್ಲ ಎಂದು ಖುರಾನ್ನಲ್ಲಿ ಬರೆದಿದೆ’ ಎಂದು ಸಲೀಂ ಮರ್ಚೆಂಟ್ ಅವರು ವಿಡಿಯೋ ಆರಂಭಿಸಿದ್ದಾರೆ.
‘ಇಂಥ ಒಂದು ದಿನವನ್ನು ನೋಡುವಂತಾಯಿತಲ್ಲ ಎಂದು ಮುಸ್ಲಿಮನಾಗಿ ನನಗೆ ನಾಚಿಕೆ ಆಗುತ್ತಿದೆ. ನನ್ನ ಅಮಾಯಕ ಹಿಂದೂ ಸಹೋದರ, ಸಹೋದರಿಯರನ್ನು ಹತ್ಯೆ ಮಾಡಲಾಗಿದೆ. ಈ ದ್ವೇಷ ಯಾವಾಗ ಮುಗಿಯುತ್ತದೆ? ಕಳೆದ 2-3 ವರ್ಷಗಳಿಂದ ಕಾಶ್ಮೀರದ ಜನರು ಸರಿಯಾಗಿ ಜೀವನ ಮಾಡುತ್ತಿದ್ದರು. ಅವರ ಜೀವನದಲ್ಲಿ ಮತ್ತೆ ಅದೇ ಸಮಸ್ಯೆ ಶುರುವಾಗಿದೆ’ ಎಂದು ಸಲೀಂ ಮರ್ಚೆಂಟ್ ಅವರು ಹೇಳಿದ್ದಾರೆ.
‘ನನ್ನ ನೋವು ಮತ್ತು ಕೋಪವನ್ನು ಹೇಗೆ ವ್ಯಕ್ತಪಡಿಸಲಿ ಎಂಬುದೇ ತಿಳಿಯುತ್ತಿಲ್ಲ. ಅಮಾಯಕ ಜನರು ಪ್ರಾಣ ತೆತ್ತಿದ್ದಾರೆ. ತಲೆ ಬಾಗಿ ನಾನು ಪ್ರಾರ್ಥನೆ ಮಾಡುತ್ತೇನೆ. ಅವರ ಕುಟುಂಬದವರಿಗೆ ದೇವರು ಶಕ್ತಿ ನೀಡಲಿ. ಓಂ ಶಾಂತಿ’ ಎನ್ನುವ ಮೂಲ ಸಲೀಂ ಮರ್ಚೆಂಟ್ ಅವರು ವಿಡಿಯೋ ಪೂರ್ಣಗೊಳಿಸಿದ್ದಾರೆ. ಅವರ ಮಾತುಗಳಿಗೆ ಅನೇಕರು ಸಹಮತ ಸೂಚಿಸಿದ್ದಾರೆ.
ಇದನ್ನೂ ಓದಿ: ‘ಕಾಶ್ಮೀರ ನರಕ ಆಗುತ್ತಿದೆ’: ಪಹಲ್ಗಾಮ್ ಉಗ್ರರ ದಾಳಿಗೆ ನಟ ಸಲ್ಮಾನ್ ಖಾನ್ ಖಂಡನೆ
ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿದ್ದ ಹಿಂದೂಗಳನ್ನು ಗುರಿಯಾಗಿಸಿಕೊಂಡು ಪಹಲ್ಗಾಮ್ನಲ್ಲಿ ಗುಂಡಿನ ದಾಳಿ ಮಾಡಲಾಯಿತು. ಈ ದಾಳಿಯಲ್ಲಿ 26 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಕೃತ್ಯದ ಹಿಂದೆ ಪಾಕ್ ಕೈವಾಡ ಇದೆ. ಹಾಗಾಗಿ ಪಾಕಿಸ್ತಾನಕ್ಕೆ ತಕ್ಕ ಉತ್ತರ ಕಲಿಸಲು ಭಾರತ ಸರ್ಕಾರ ಮುಂದಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:10 pm, Thu, 24 April 25