ರಸ್ತೆ ಅಪಘಾತ: ನಟ ಆಶಿಷ್ ವಿದ್ಯಾರ್ಥಿ, ರೂಪಾಲಿ ದಂಪತಿ ಪರಿಸ್ಥಿತಿ ಹೇಗಿದೆ?
ಆಶಿಷ್ ವಿದ್ಯಾರ್ಥಿ ಹಾಗೂ ರೂಪಾಲಿ ಅವರಿಗೆ ಬೈಕ್ ಡಿಕ್ಕಿ ಹೊಡೆಯಿತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈಗ ತಮ್ಮಿಬ್ಬರ ಪರಿಸ್ಥಿತಿ ಹೇಗಿದೆ ಎಂದು ಸ್ವತಃ ಆಶಿಷ್ ವಿದ್ಯಾರ್ಥಿ ಅವರು ಇನ್ಸ್ಟಾಗ್ರಾಮ್ ಲೈವ್ ಮೂಲಕ ತಿಳಿಸಿದ್ದಾರೆ. ಈ ಅಪಘಾತದಿಂದ ಯಾರಿಗೂ ಗಂಭೀರ ಗಾಯ ಆಗಿಲ್ಲ ಎಂಬುದನ್ನು ತಿಳಿದು ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಖ್ಯಾತ ನಟ ಆಶಿಷ್ ವಿದ್ಯಾರ್ಥಿ (Ashish Vidyarthi) ಅವರ ಅಭಿಮಾನಿಗಳಿಗೆ ಆತಂಕ ಆಗುವಂತಹ ಸುದ್ದಿ ಇತ್ತೀಚೆಗೆ ಕೇಳಿಬಂತು. ರಸ್ತೆ ದಾಟುವಾಗ ಆಶಿಷ್ ವಿದ್ಯಾರ್ಥಿ ಮತ್ತು ಅವರ ಪತ್ನಿ ರೂಪಾಲಿ ಅವರಿಗೆ ಬೈಕ್ ಡಿಕ್ಕಿ ಹೊಡೆದಿತ್ತು. ಆ ಸುದ್ದಿ ಕೇಳಿದ ನಂತರ ಆಪ್ತರು ಮತ್ತು ಅಭಿಮಾನಿಗಳಿಗೆ ಬೇಸರ ಆಗಿತ್ತು. ಬಳಿಕ ಸ್ವತಃ ಆಶಿಷ್ ವಿದ್ಯಾರ್ಥಿ ಅವರು ಈ ರಸ್ತೆ ಅಪಘಾತದ (Road Accident) ಬಗ್ಗೆ ಮಾಹಿತಿ ನೀಡಿದ್ದಾರೆ. ತಮ್ಮಿಬ್ಬರ ಪರಿಸ್ಥಿತಿ ಹೇಗಿದೆ ಎಂಬುದನ್ನು ಅವರು ವಿವರಿಸಿದ್ದಾರೆ. ಇನ್ಸ್ಟಾಗ್ರಾಮ್ ಲೈವ್ ಮೂಲಕ ಅವರು ಸ್ಪಷ್ಟನೆ ನೀಡಿದ್ದಾರೆ. ಆಶಿಷ್ ವಿದ್ಯಾರ್ಥಿ ಪತ್ನಿ ರೂಪಾಲಿ (Rupali) ಅವರಿಗೆ ಈಗ ಪ್ರಜ್ಞೆ ಬಂದಿದೆ.
ಗುಹವಾಟಿಯಲ್ಲಿ ಈ ಅಪಘಾತ ಸಂಭವಿಸಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಡಿಕ್ಕಿ ಹೊಡೆದ ಬೈಕ್ ಸವಾರನಿಗೂ ಪೆಟ್ಟಾಗಿದ್ದು, ಆತನನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ. ಈ ಅಪಘಾತದಲ್ಲಿ ಯಾರಿಗೂ ಗಂಭೀರ ಗಾಯಗಳು ಆಗಿಲ್ಲ ಎಂಬುದನ್ನು ಆಶಿಷ್ ವಿದ್ಯಾರ್ಥಿ ಅವರು ಸ್ಪಷ್ಟಪಡಿಸಿದ್ದಾರೆ.
‘ನಾನು ಒಂದು ವಿಚಿತ್ರ ಸಂದರ್ಭದಲ್ಲಿ ಈ ಲೈವ್ ವಿಡಿಯೋ ಮಾಡುತ್ತಿದ್ದೇನೆ. ಯಾಕೆಂದರೆ ಹಲವು ನ್ಯೂಸ್ ಚಾನೆಲ್ಗಳಲ್ಲಿ ಏನೇನೋ ಬರುತ್ತಿದೆ. ಅದನ್ನು ನಾನು ನೋಡುತ್ತಿದ್ದೇನೆ. ನಾನು ಮತ್ತು ರೂಪಾಲಿ ನಿನ್ನೆ ರಸ್ತೆ ದಾಟುವಾಗ ಬೈಕ್ ಬಂದು ಡಿಕ್ಕಿ ಹೊಡೆಯಿತು. ಆದರೆ ನಾವೀಗ ಆರಾಮಾಗಿದ್ದೇವೆ. ರೂಪಾಲಿ ಅವರನ್ನು ನೋಡಿಕೊಳ್ಳಲಾಗುತ್ತಿದೆ. ಎಲ್ಲವೂ ಸರಿಯಾಗಿದೆ. ನಾನು ಕೂಡ ಕ್ಷೇಮವಾಗಿದ್ದೇನೆ. ಚಿಕ್ಕ ಗಾಯ ಆಗಿದೆ ಅಷ್ಟೇ’ ಎಂದು ಆಶಿಷ್ ವಿದ್ಯಾರ್ಥಿ ಅವರು ಹೇಳಿದ್ದಾರೆ.
‘ನಮಗೆ ಅಪಘಾತ ಆಗಿದ್ದು ನಿಜ. ಆದರೆ ಅದನ್ನು ವೈಭವೀಕರಿಸುವ ಅಗತ್ಯ ಇಲ್ಲ. ಬೈಕ್ ಓಡಿಸುತ್ತಿದ್ದವನ ಬಗ್ಗೆಯೂ ನಾನು ಪೊಲೀಸರಿಂದ ಮಾಹಿತಿ ಪಡೆದಿದ್ದೇನೆ. ಆತನಿಗೂ ಈಗ ಪ್ರಜ್ಞೆ ಬಂದಿದೆ. ಎಲ್ಲರಿಗೂ ಒಳ್ಳೆಯದಾಗಲಿ. ಎಲ್ಲವೂ ಸರಿಯಾಗಿರಲಿ. ನಿಮಗೆಲ್ಲ ಇದನ್ನೇ ಹೇಳುತ್ತೇನೆ. ನಾನು ಕಾಳಜಿ ವಹಿಸುತ್ತಿದ್ದೇವೆ’ ಎಂದಿದ್ದಾರೆ ಆಶಿಷ್ ವಿದ್ಯಾರ್ಥಿ.
ಇದನ್ನೂ ಓದಿ: ಖುಷಿ ಇಲ್ಲದೇ ಸಾಯಬೇಕಾ? 57ನೇ ವಯಸ್ಸಿನಲ್ಲಿ ಮದುವೆ ಆಗಿದ್ದಕ್ಕೆ ಟ್ರೋಲ್ ಮಾಡಿದವರಿಗೆ ಆಶಿಷ್ ವಿದ್ಯಾರ್ಥಿ ಪ್ರಶ್ನೆ
ಆಶಿಷ್ ವಿದ್ಯಾರ್ಥಿ ಅವರು ಬಹುಭಾಷಾ ನಟ. ಬಾಲಿವುಡ್ ಮತ್ತು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅವರು ಹೆಸರು ಮಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ಸಿನಿಮಾಗಳನ್ನು ಒಪ್ಪಿಕೊಳ್ಳುವುದು ಕಡಿಮೆ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಊರೂರು ಸುತ್ತುತ್ತ, ಎಲ್ಲ ಕಡೆಗಳಲ್ಲಿ ಆಹಾರ ಸವಿಯುತ್ತಾ ಬದುಕನ್ನು ಅವರು ಎಂಜಾಯ್ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




